

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕು ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಾರಿಯ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಕುರಿತು ಚಿಂತನೆ ನಡೆಯುತ್ತಿದ್ದು, ಈ ಕುರಿತು ಸೆಪ್ಟೆಂಬರ್ 5ರಂದು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ.
ಗಣೇಶ ಹಬ್ಬ ಆಚರಣೆಗೆ ಅವಕಾಶ ವಿಚಾರವಾಗಿ ನಿನ್ನೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ನಡೆದಿದ್ದು, ಚರ್ಚೆ ನಡೆಸಲಾಗಿದೆ.
ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಸಚಿವ ಆರ್.ಅಶೋಕ್ ಅವರು, ಪ್ರತಿ ತಾಲೂಕಿನಲ್ಲಿ ಆಚರಣೆ ಬಗ್ಗೆ ಮಾಹಿತಿ ಪಡೆದು, ಸೆಪ್ಟೆಂಬರ್ 5 ರಂದು ಆ ಬಗ್ಗೆ ಸಭೆ ನಡೆಸಲಾಗುತ್ತದೆ. ಸಭೆ ಬಳಿಕ ಗಣೇಶ ಉತ್ಸವ ಆಚರಣೆ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ರಾಜ್ಯದಾದ್ಯಂತ 30 ಹೆಚ್ಚು ಗಣೇಶೋತ್ಸವ ಆಯೋಜನೆ ಮಾಡುವ ದೊಡ್ಡ ಆಯೋಜಕರಿದ್ದಾರೆ. ಈ ಗಣೇಶೋತ್ಸವದಲ್ಲಿ 50,000ಕ್ಕೂ ಹೆಚ್ಚು ಜನರು ಸೇರುತ್ತಾರೆ. 200ಕ್ಕೂ ಹೆಚ್ಚು ಸಣ್ಣ ಸಂಘಟನೆಗಳಿದ್ದು, ಇವರು ಆಯೋಜಿಸುವ ಉತ್ಸವಗಳಲ್ಲಿ 2000 ಜನರು ಸೇರ್ಪಡೆಗೊಳ್ಳುತ್ತಾರೆ. ಪೊಲೀಸರು ಬಳಿ ಆಯೋಜಕರ ಕುರಿತು ಪಟ್ಟಿ ಇದೆ. ಈ ಆಯೋಜಕರು ಉತ್ಸವ ಆಯೋಜನೆಗೂ ಮುನ್ನ ಪೊಲೀಸರ ಅನುಮತಿ ಪಡೆದುಕೊಳ್ಳುತ್ತಾರೆ. ಈ ಎಲ್ಲಾ ಆಯೋಜಕರ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತದೆ. ಸೆಪ್ಟೆಂಬರ್ 5 ರಂದು ಮುಖ್ಯಮಂತ್ರಿಗಳು ತಜ್ಞರೊಂದಿಗೆ ಸಭೆ ನಡೆಸಲಿದ್ದು, ಬಳಿಕ ನಿರ್ಬಂಧಗಳ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳು ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡುವ ಮನಸ್ಸು ಮಾಡಿದ್ದಾರೆ. ಸಾಕಷ್ಟು ರಾಜಕೀಯ ನಾಯಕರೂ ಕೂಡ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಸೋಮವಾರ ನಡೆದ ಸಭೆಯಲ್ಲಿ ಅರ್ಧಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಲಾಯಿತು. ಓಣಂ ಹಬ್ಬದ ಬಳಿಕ ಕೇರಳದಲ್ಲಿ ಕೋವಿಡ್ ಸೋಂಕು ಹೆಚ್ಚಾಗಿದ್ದರ ಕುರಿತಂತೆಯೂ ನಮಗೆ ತಿಳಿದಿದೆ ಎಂದಿದ್ದಾರೆ.
ಬೆಳಗಾವಿ, ಚಿತ್ರದುರ್ಗ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ದೊಡ್ಡ ಮಟ್ಟದಲ್ಲಿ ಗಣೇಶೋತ್ಸವ ನಡೆಯುತ್ತದೆ. ಚಿತ್ರದುರ್ಗ ಒಂದರಲ್ಲೇ ಸುಮಾರು 2 ಲಕ್ಷ ಮಂದಿ ಗಣೇಶೋತ್ಸವದಲ್ಲಿ ಭಾಗವಹಿಸುತ್ತಾರೆ. ರಾಜ್ಯಾದ್ಯಂತ ಇಂತಹ 30ಕ್ಕೂ ಹೆಚ್ಚು ಸಮಿತಿಗಳಿವೆ. ಹೀಗಾಗಿ ದೊಡ್ಡ ಮಟ್ಟದಲ್ಲಿ ಗಣೇಶೋತ್ಸವ ಆಚರಣೆ ಮಾಡುವ ಸಮಿತಿಗಳೊಂದಿಗೆ ಸ್ಥಳೀಯ ಜಿಲ್ಲಾಧಿಕಾರಿಗಳು ನಡೆಸಿದ ಆಧಾರದ ಮೇಲೆ ಅಂತಿಮ ಮಾರ್ಗಸೂಚಿ ರೂಪಿಸಲಾಗುವುದು ಎಂದು ಹೇಳಿದ್ದಾರೆ.
3ನೇ ಅಲೆ ಕುರಿತು ಕೇಂದ್ರ ಸರ್ಕಾರ ಯಾವುದೇ ಮಾರ್ಗಸೂಚಿಗಳನ್ನೂ ಹೊರಡಿಸಿಲ್ಲ. ರಾಜ್ಯದಲ್ಲಿ 3ನೇ ಅಲೆಯ ಯಾವುದೇ ಸುಳಿವುಗಳೂ ಸಿಗುತ್ತಿಲ್ಲ. ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ದೇಶಕ್ಕೇ ಮಾದರಿಯಾಗಿದೆ. ಸಾಕಷ್ಟು ಜನರಿಗೆ ಲಸಿಕೆಯನ್ನೂ ನೀಡಲಾಗಿದೆ. ಪ್ರತೀ ವಿಧಾನಸಭಾ ಕ್ಷೇತ್ರದಲ್ಲಿಯೂ 5,000 ದಿಂದ 10,000 ಜನರಿಗೆ ಶೀಘ್ರದಲ್ಲೇ ಲಸಿಕೆ ನೀಡುವ ಕಾರ್ಯಕ್ರಮವನ್ನೂ ಆರಂಭಿಸಲಾಗುತ್ತದೆ. ವಿವಾಹ ಸಮಾರಂಭದ ಸಂದರ್ಭದಲ್ಲಿ ಮದುವೆ ಮಂಟಪದಲ್ಲಿ ಕೇವಲ 400 ಮಂದಿ ಸೇರುವಂತೆ ಅವಕಾಶ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.