ಮೇಕೆದಾಟು ಯೋಜನೆಗೆ ಅಡ್ಡಿ ಬೇಡ; ತಮಿಳುನಾಡು ಸಿಎಂ ಸ್ಟಾಲಿನ್​ಗೆ ಪತ್ರ ಬರೆದ ಸಿಎಂ ಯಡಿಯೂರಪ್ಪ

ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯಿಂದಲೂ ಧಕ್ಕೆಯಾಗದು. ಹೀಗಾಗಿ ಈ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮೇಕೆದಾಟು ಬಳಿ ಸಮಾನಾಂತರ ಜಲಾಶಯ ನಿರ್ಮಿಸುವ ಕರ್ನಾಟಕದ ಯೋಜನೆಯಿಂದ ತಮಿಳುನಾಡಿನ ಹಿತಾಸಕ್ತಿಗೆ ಯಾವುದೇ ರೀತಿಯಿಂದಲೂ ಧಕ್ಕೆಯಾಗದು. ಹೀಗಾಗಿ ಈ ಯೋಜನೆಗೆ ಅಡ್ಡಿಪಡಿಸಬಾರದು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ತಮಿಳುನಾಡಿನ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಅವರಿಗೆ ಪತ್ರ ಬರೆದಿದ್ದಾರೆ.

ವಿದ್ಯುತ್ ಉತ್ಪಾದನೆಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದ್ದ ಕಾರಣ ‘ಸುಪ್ರೀಂ’ ಆದೇಶದನ್ವಯ ಯೋಜನೆ ಕೈಗೆತ್ತಿಕೊಳ್ಳಲಿದ್ದೇವೆ. ಯೋಜನೆಯಿಂದ 400 ಮೆಗಾವಾಟ್‌ ವಿದ್ಯುತ್‌ ಉತ್ಪಾದಿಸಲು ಅವಕಾಶವಿದೆ. ಬೆಂಗಳೂರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ 4.75 ಟಿಎಂಸಿ ಅಡಿ ನೀರನ್ನು ಕೊಂಡೊಯ್ಯುವುದಕ್ಕೂ ಅನುಮತಿ ನೀಡಲಾಗಿತ್ತು. ಈ ಯೋಜನೆ ಎರಡೂ ರಾಜ್ಯಕ್ಕೆ ಉಪಯುಕ್ತವಾಗಲಿದೆ. ಜತೆಗೆ ಯೋಜನೆಯಿಂದ ತಮಿಳುನಾಡಿನ ರೈತರಿಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಪತ್ರದಲ್ಲಿ ತಿಳಿಸಿದ್ದಾರೆ. 

ಪತ್ರದಲ್ಲಿ ಈಗಾಗಲೇ ತಮಿಳುನಾಡು ಸರ್ಕಾರದಿಂದ ‘ಸುಪ್ರೀಂ’ಗೆ ಅರ್ಜಿ ಸಲ್ಲಿಸಿರುವುದನ್ನು ಉಲ್ಲೇಖಿಸಿರುವ ಸಿಎಂ ಯಡಿಯೂರಪ್ಪ, ನಾವೂ ಯೋಜನೆಗೆ ಅನುಮತಿ ಕೋರಿ ಕೇಂದ್ರ ಸರ್ಕಾರದ ಮುಂದೆ ಮನವಿ ಸಲ್ಲಿಸಿದ್ದೇವೆ. ತಮಿಳುನಾಡು ಸರ್ಕಾರ ಕಾವೇರಿ ನೀರು ಬಳಸಿ ಪವರ್ ಪ್ರಾಜೆಕ್ಟ್ ಆರಂಭಿಸಲು ನಿರ್ಧರಿಸಿದೆ. ಎರಡೂ ರಾಜ್ಯದ ನಡುವೆ ಸಾಮರಸ್ಯ ಮುಂದುವರಿಯಲಿ. ಮೇಕೆದಾಟು ಯೋಜನೆಗೆ ತಮಿಳುನಾಡಿನಿಂದ ಅಡ್ಡಿ ಬೇಡ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಯಡಿಯೂರಪ್ಪ ಅವರ ಪತ್ರ ಕುರಿತು ಪ್ರತಿಕ್ರಿಯೆ ನೀಡಿರುವ ತಮಿಳುನಾಡು ರಾಜ್ಯದ ಜಲಸಂಪನ್ಮೂಲ ಸಚಿವ ದುರೈ ಮುರುಗನ್ ಅವರು, ಕರ್ನಾಟಕ ಪತ್ರ ರಾಜ್ಯ ಸರ್ಕಾರದ ಕೈ ಸೇರಿದೆ. ಮೇಕೆದಾಟು ಯೋಜನೆ ಕುರಿತು ಮುಖ್ಯಮಂತ್ರಿಗಳು ಶೀಘ್ರದಲ್ಲೇ ಸಭೆ ನಡೆಸಿ ಮಾತುಕತೆ ನಡೆಸಲಿದ್ದಾರೆ. ಕರ್ನಾಟಕದ ಪತ್ರಕ್ಕೆ ಶೀಘ್ರದಲ್ಲೇ ಸಿಎಂ ಸ್ಟಾಲಿನ್ ಅವರು ಉತ್ತರ ನೀಡಲಿದ್ದಾರೆಂದು ಹೇಳಿದ್ದಾರೆ. 

ಇದೇ ವೇಳೆ ಮೆಕೆದಾಟು ಯೋಜನೆಯ ಕುರಿತು ಮಾತುಕತೆಗೆ ಯಾವುದೇ ಅವಕಾಶವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಕರ್ನಾಟಕದ ರಾಜ್ಯದ ಪತ್ರಕ್ಕೆ ಪ್ರತಿಕ್ರಿಯೆ ನೀಡುವ ವೇಳೆ ಈ ಕುರಿತಂತೆಯು ಮುಖ್ಯಮಂತ್ರಿಗಳು ಮಾತನಾಡಲಿದ್ದಾರೆಂದು ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com