ತಮಿಳುನಾಡು ತೀರ್ಮಾನದ ಬಗ್ಗೆ ಮಾತು ಬೇಡ; ನಾವು ಮೇಕೆದಾಟು ಯೋಜನೆ ಜಾರಿ ಮಾಡುತ್ತೇವೆ: ಸಿಎಂ ಯಡಿಯೂರಪ್ಪ

ಬೆಂಗಳೂರಿಗೆ ಮಂಗಳವಾರ ಆಗಮಿಸಿದ್ದ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು.
ಕೇಂದ್ರ ಸಚಿವ ಶೇಖಾವತ್ ಅವರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರರು
ಕೇಂದ್ರ ಸಚಿವ ಶೇಖಾವತ್ ಅವರೊಂದಿಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತಿತರರು
Updated on

ಬೆಂಗಳೂರು: ಬೆಂಗಳೂರಿಗೆ ಮಂಗಳವಾರ ಆಗಮಿಸಿದ್ದ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಅವರೊಂದಿಗೆ ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದ ನೀರಾವರಿ ಯೋಜನೆಗಳ ಕುರಿತು ಚರ್ಚಿಸಿದರು.

ಭೇಟಿ ಬಳಿಕ ಮಾತನಾಡಿದ ಮುಖ್ಯಮಂತ್ರಿ, ಕೇಂದ್ರ ಸಚಿವರೊಂದಿಗೆ ರಾಜ್ಯದ ನೀರಾವರಿ ಯೊಜನೆಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ಕೃಷ್ಣಾ ಯೋಜನೆಗೆ ನೊಟಿಫಿಕೇಶನ್ ಹೊರಡಿಸುವುದು, ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಎಂದು ಪರಿಗಣಿಸುವುದು. ಕಳಸಾ ಬಂಡೂರಿ ಯೋಜನೆಗೆ ಕೇಂದ್ರದ ಕ್ಲಿಯರನ್ಸ್ ನೀಡುವುದು, ಎತ್ತಿನ ಹೊಳೆ ಯೋಜನೆಗಳ ಕುರಿತು ಚರ್ಚೆ ಮಾಡಲಾಗಿದೆ ಎಂದರು.

ಆದಷ್ಟು ಬೇಗ ಕೇಂದ್ರದದಿಂದ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಸಚಿವರು ಹೇಳಿದ್ದಾರೆ. ಅಲ್ಲದೇ ಬಹಳ ಮಹತ್ವದ್ದಾಗಿ ಜಲ ಜಿವನ್ ಮಿಷನ್ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲ ಮನೆಗಳಿಗೂ ನಲ್ಲಿ ಸಂಪರ್ಕ ಕಲ್ಪಿಸುವ ಕುರಿತು ಚರ್ಚೆ ಮಾಡಿದ್ದೇವೆ. ಇನ್ನೂ 25 ಲಕ್ಷ ಮನೆಗಳಿಗೆ ಸಂಪರ್ಕ ಕಲ್ಪಿಸಲು ತ್ವರಿತಗತಿಯಲ್ಲಿ ಯೋಜನೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಹೇಳಿದರು.

ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಮಾತನಾಡಿ, ಕರ್ನಾಟಕದ ಎಲ್ಲ ನೀರಾವರಿ ಯೋಜನೆಗಳ ಕುರಿತು ಚರ್ಚೆ ಮಾಡಲಾಗಿದೆ. ಮೇಕೆದಾಟು ಸೇರಿದಂತೆ ಎಲ್ಲ ಯೋಜನೆಗಳ ಕುರಿತು ಸುದೀರ್ಘ ಚರ್ಚೆ ನಡೆಸಲಾಗಿದೆ. ಈ ಬಗ್ಗೆ ಸಮಗ್ರ ಅಧ್ಯಯನ ಮಾಡಿ ಕೇಂದ್ರ ಮಟ್ಟದಲ್ಲಿ ಸಭೆ ಕರೆಯಲಾಗುವುದು ಎಂದರು.

ಮೇಕೆದಾಟು ಬಗ್ಗೆ ತಮಿಳುನಾಡು ಕ್ಯಾತೆ ವಿಚಾರವಾಗಿ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೇಖಾವತ್ ಪ್ರತಿಕ್ರಿಯಿಸಿ, ಕೇಂದ್ರ ಸರ್ಕಾರದ ಪಾತ್ರ ಏನಿದೆಯೋ ಅದನ್ನು ಮಾಡುತ್ತದೆ. ಪಕ್ಷ ಬೇರೆ, ಸರ್ಕಾರ ಬೇರೆಯಾದರೂ ಸರ್ಕಾರದ ಪಾತ್ರ ಏನಿರುತ್ತದೆಯೋ ಅದನ್ನು ಮಾಡುತ್ತದೆ ಎಂದು ಮಾರ್ಮಿಕವಾಗಿ ತಿಳಿಸಿದರು. ತಮಿಳುನಾಡು ರಾಜ್ಯ ಸರ್ಕಾರ ಏನೇ ನಿರ್ಣಯ ತೆಗೆದುಕೊಳ್ಳಲಿ, ಕೇಂದ್ರ ಸರ್ಕಾರ ಏನು ನಿರ್ಧಾರ ಮಾಡಬೇಕೋ ಅದನ್ನು ಮಾಡುತ್ತದೆ. ಈ ಸಂಬಂಧ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.

ನಿಗದಿತ ಕಾಲಮಿತಿಯೊಳಗೆ ಜಲಜೀವನ್ ಮಿಷನ್ ಪೂರ್ಣಗೊಳಿಸಲು ಕೇಂದ್ರ ಸಚಿವರ ಸಲಹೆ: ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೇಖಾವತ್ , ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ರಾಜ್ಯ ಮತ್ತು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲಿಸಿದರು.ಕರ್ನಾಟಕದ ಜಲಜೀವನ್ ಮಿಷನ್ ಕಾರ್ಯಕ್ರಮವನ್ನು ನಿಗದಿತ ಅವಧಿಯೊಳಗೇ ಪೂರ್ಣಗೊಳಿಸುವಂತೆ ಕೇಂದ್ರ ಸಚಿವರು ಸಲಹೆ ನೀಡಿದರು.

ಜಲಜೀವನ್ ಮಿಷನ್ ಯೋಜನೆ ಮೂಲಕ 2024ರ ವೇಳೆಗೆ ದೇಶದ 18.93 ಕೋಟಿ ಗ್ರಾಮೀಣ ಮನೆಗಳ್ಲಲಿ 15.70 ಕೋಟಿ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಯೋಜನೆಯಡಿ ಕೇವಲ ಸೌಲಭ್ಯ ಕಲ್ಪಿಸುವುದು ಮಾತ್ರವಲ್ಲ, ನಿರಂತರವಾಗಿ ಕುಡಿಯುವ ನೀರು ಒದಗಿಸುವುದು ಸರ್ಕಾರದ ಆದ್ಯತೆ. ಅಂತೆಯೇ ರಾಜ್ಯದಲ್ಲಿ ಆದ್ಯತಾ ಜಿಲ್ಲೆಗಳಾದ ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಕ್ರಿಯಾತ್ಮಕ ನಳ ಸಂಪರ್ಕಗಳನ್ನು ಆದ್ಯತೆಯ ಮೇರೆಗೆ ಒದಗಿಸುವಂತೆ ಸಚಿವರು ತಿಳಿಸಿದರು.

ನಳ ಸಂಪರ್ಕ ನೀಡುವುದರೊಂದಿಗೆ ಪೂರೈಸುವ ನೀರಿನ ಗುಣಮಟ್ಟವನ್ನೂ ಖಾತರಿ ಪಡಿಸುವಂತೆ ಸಚಿವರು ಸಲಹೆ ನೀಡಿದರು. ರಾಜ್ಯದಲ್ಲಿ ಯೋಜನೆಯ ಪ್ರಗತಿಯ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ರಾಜ್ಯದ 91.19 ಲಕ್ಷ ಗ್ರಾಮೀಣ ಕುಟುಂಬಗಳಿಗೆ ತಲಾ 55 ಎಲ್ ಪಿ ಸಿ ಡಿ ಶುದ್ಧ ನೀರು ಒದಗಿಸುವ ಗುರಿ ಇದೆ. ಈ ಯೋಜನೆಯಡಿ 2021-22 ನೆ ಆರ್ಥಿಕ ವರ್ಷದಲ್ಲಿ 25.17 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸಲು ಉದ್ದೇಶಿಸಲಾಗಿದೆ. 2022-23 ರಲ್ಲಿ 27.15 ಲಕ್ಷ ಹಾಗೂ 2023 ಡಿಸೆಂಬರ್ ಅಂತ್ಯದ ವೇಳೆಗೆ 10.72 ಲಕ್ಷ ಮನೆಗಳಿಗೆ ಕ್ರಿಯಾತ್ಮಕ ನಳ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ವಿವರಿಸಿದರು.

ಆದ್ಯತಾ ಜಿಲ್ಲೆಗಳಾದ ರಾಯಚೂರು ಜಿಲ್ಲೆಗೆ 2000 ಕೋಟಿ ವೆಚ್ಚದಲ್ಲಿ ಬಹುಗ್ರಾಮ ಯೋಜನೆ ರೂಪಿಸಲಾಗಿದ್ದು ಸಚಿವ ಸಂಪುಟ ಅನುಮೋದನೆ ನೀಡಲಾಗಿದೆ. ಶೀಘ್ರವೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಲಿದೆ. ಯಾದಗಿರಿ ಜಿಲ್ಲೆಯಲ್ಲಿಯೂ ಬಹುಗ್ರಾಮ ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com