ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಾಕ್ಡೌನ್ ತೆರವು ಬಳಿಕ ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಶೇ.15-20ರಷ್ಟು ಹೆಚ್ಚಳ!

ಲಾಕ್‌ಡೌನ್‌ ತೆರವಾದ ಬಳಿಕ ರಾಜ್ಯದಲ್ಲಿ ಶೇ 15ರಿಂದ 20ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇವುಗಳಲ್ಲಿ ಮಾದಕ ವಸ್ತು ಮತ್ತು ಸೈಬರ್‌ ಅಪರಾಧಗಳೂ ಸೇರಿವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. 
Published on

ಮೈಸೂರು: ಲಾಕ್‌ಡೌನ್‌ ತೆರವಾದ ಬಳಿಕ ರಾಜ್ಯದಲ್ಲಿ ಶೇ 15ರಿಂದ 20ರಷ್ಟು ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇವುಗಳಲ್ಲಿ ಮಾದಕ ವಸ್ತು ಮತ್ತು ಸೈಬರ್‌ ಅಪರಾಧಗಳೂ ಸೇರಿವೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. 

ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ಸಿಂಥೆಟಿಕ್‌ ಸ್ವರೂಪದ ಮಾದಕ ವಸ್ತು ಸಣ್ಣ ಪೇಪರಿನ ರೂಪದಲ್ಲಿ ಅಂಚೆಯ ಮೂಲಕ ರವಾನೆಯಾಗುತ್ತಿವೆ. ಈ ಕುರಿತ ಮಾಹಿತಿಗಳು ‘ಡಾರ್ಕ್‌ವೆಬ್‌’ನಲ್ಲಿ ವಿನಿಮಯವಾಗುತ್ತಿವೆ. ಕರ್ನಾಟಕ ಪೊಲೀಸರು ಡಾರ್ಕ್‌ವೆಬ್‌ನ್ನು ನಿಯಮಿತವಾಗಿ ಮೊದಲ ಬಾರಿಗೆ ಬೇಧಿಸಿ ಮಾಹಿತಿ ಪಡೆದು, ದಾಳಿಗಳನ್ನು ನಡೆಸುತ್ತಿದ್ದಾರೆಂದು ಹೇಳಿದ್ದಾರೆ. 

ಮಾದಕ ವಸ್ತು ಪ್ರಕರಣಗಳಿಗೆ ಸಂಬಂಧಿಸಿದಂತೆ ಒಂದು ವರ್ಷದಲ್ಲಿ 15ರಿಂದ 20 ಮಂದಿ ವಿದೇಶಿಯರನ್ನು ಬಂಧಿಸಲಾಗಿದೆ. ‘ಎನ್‌ಡಿಪಿಎಸ್‌’ ಕಾನೂನಿನ ನಿಯಮಗಳಿಗೆ ತಿದ್ದುಪಡಿ ತಂದು, ಬಂಧಿತರಿಗೆ ಕನಿಷ್ಠ 1 ವರ್ಷಗಳ ಕಾಲ ಅಥವಾ ತನಿಖೆ ಪೂರ್ಣಗೊಳ್ಳುವವರೆಗೂ ಜಾಮೀನು ಸಿಗದಂತೆ ಮಾಡುವ ಪ್ರಸ್ತಾವ ಇದೆ. ದೇಶದಲ್ಲೇ ಹೆಚ್ಚು ಮಾದಕವಸ್ತುಗಳನ್ನು ಕರ್ನಾಟಕ ಪೊಲೀಸರು ವಶಕ್ಕೆ ಪಡೆದಿದ್ದಾರೆ. 

ಸೈಬರ್ ಅಪರಾಧ ಪ್ರಕರಣಗಳನ್ನು ಬೇಧಿಸಲು ಬೆಂಗಳೂರಿನ ಪೊಲೀಸರು ‘ಆ್ಯಪ್‌’ ರೂಪಿಸಿದ್ದಾರೆ. ‘ಎಫ್‌ಐಆರ್‌’ ದಾಖಲಾಗುವುದಕ್ಕೂ ಮುನ್ನವೇ ಹಣ ವರ್ಗಾವಣೆಯಾಗುವ ಬ್ಯಾಂಕ್‌ ಖಾತೆಯನ್ನು ಮುಟ್ಟುಗೋಲು ಹಾಕಿಕೊಂಡು, ಒಂದು ತಿಂಗಳಿನಲ್ಲಿ ರೂ.40 ಕೋಟಿಯಷ್ಟು ಹಣವು ವಂಚಕರ ಕೈಗೆ ಸಿಗದಂತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ವ್ಯವಸ್ಥೆ ಮೈಸೂರಿನಲ್ಲಿಯೂ ರೂಪಿಸಬೇಕು ಎಂದು ತಿಳಿಸಿದರು.

ಸಂಚಾರ ನಿಯಮ ಉಲ್ಲಂಘನೆಯಿಂದ ಸಂಗ್ರಹವಾದ ಹಣವನ್ನು ರಸ್ತೆ ಸುರಕ್ಷತೆಗೆ ಹಾಗೂ ಅಭಿವೃದ್ಧಿಗೆ ಬಳಕೆ ಮಾಡಲು ನೇರವಾಗಿ ಪೊಲೀಸ್ ಇಲಾಖೆಗೆ ನೀಡಬೇಕು’ ಎಂದು ಹಣಕಾಸು ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗಿದೆ. 

ಕಾಲೇಜುಗಳು ಆರಂಭವಾದ ಬಳಿಕ ವಿದ್ಯಾರ್ಥಿನಿಯರಿಗೆ ಮಾನಸಿಕ, ದೈಹಿಕ ಸದೃಢತೆ ಕಾಪಾಡಿಕೊಳ್ಳಲು ತರಬೇತಿ ನೀಡಲಾಗುವುದು. ಪೊಲೀಸರ ತರಬೇತಿಗಾಗಿ ‘ನ್ಯಾಷನಲ್ ಡಿಫೆನ್ಸ್ ಅಕಾಡೆಮಿ’ ಮಾದರಿಯಲ್ಲಿ ‘ಆಫಿಸರ್ಸ್ ಟ್ರೈನಿಂಗ್ ಅಕಾಡೆಮಿ’ ಸ್ಥಾಪಿಸಲಾಗುವುದು. ಪೊಲೀಸ್ ತರಬೇತಿಯ ಪಠ್ಯಕ್ರಮ ಬದಲಾವಣೆಗೆ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದಾರೆ. 

ಇದೇ ವೇಳೆ ಮೇಕೆದಾಟು ಯೋಜನೆ ಕುರಿತು ಮಾತನಾಡಿದ ಸಚಿವರು, ಮೇಕೆದಾಟು ಹಾಗೂ ತಮಿಳುನಾಡಿನ ನದಿ ಜೋಡಣೆ ಯೋಜನೆ ಕುರಿತು ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಜತೆ ಮಾತುಕತೆ ನಡೆಸಲಾಗಿದೆ. ತಮಿಳುನಾಡಿಗೆ ಬಿಡುವ ನೀರಿನಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಂಡು, ಸುಪ್ರೀಂಕೋರ್ಟ್‌ ಆದೇಶದ ಪ್ರಕಾರ ನಮ್ಮಲ್ಲೇ ಉಳಿಯುವ ನೀರನ್ನು ಬಳಕೆ ಮಾಡಿಕೊಳ್ಳಲು ಪ್ರಸ್ತಾವ ಸಲ್ಲಿಸಲಾಗಿದೆ ಎಂದಿದ್ದಾರೆ. 

ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ 6 ವಿಧವಿಜ್ಞಾನ ಪ್ರಯೋಗಾಲಯಲಗಳನ್ನು ಸ್ಥಾಪನೆ ಮಾಡಲಾಗುತ್ತದೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುವುದಕ್ಕೂ ಮುನ್ನ ಪೊಲೀಸ ಇಲಾಖೆಯಲ್ಲಿ 27,000 ಹುದ್ದೆಗಳು ಖಾಲಿಯಿದ್ದವು. ಕಳೆದ ಒಂದೂವರೆ ವರ್ಷದಲ್ಲಿ 13,000 ಹುದ್ದೆಗಳನ್ನು ಭರ್ತಿ ಮಡಲಾಗಿದೆ. ಉಳಿದ ಹುದ್ದೆಗಳನ್ನು ಶೀಘ್ರದಲ್ಲೇ ಭರ್ತಿ ಮಡಲಾಗುತ್ತದೆ. ಈಗಾಗಲೇ ಈ ಪ್ರಕ್ರಿಯೆ ಆರಂಭವಾಗಿದ್ದು, 4,000 ಕಾನ್ಸ್'ಟೇಬಲ್ ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ. ಉಳಿದ ಹುದ್ದೆಗಳಿಗೆ ಶೀಘ್ರದಲ್ಲೇ ಅರ್ಜಿ ಸಲ್ಲಿಸಲು ಆಹ್ವಾನ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com