ಕೃಷ್ಣ, ಭೀಮ ನದಿ ಜಲಾಶಯಗಳ ಕ್ಷಣಕ್ಷಣದ ಮಾಹಿತಿ ವಿನಿಮಯಕ್ಕೆ ಕರ್ನಾಟಕ, ಮಹಾರಾಷ್ಟ್ರ ಒಪ್ಪಿಗೆ; ನೀರು ಹಂಚಿಕೆಗೆ ಸಮ್ಮತಿ!

ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಕ್ಷಣಕ್ಷಣದ ಮಾಹಿತಿ, ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿದವು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಮುಖ್ಯಮಂತ್ರಿ  ಬಿ ಎಸ್ ಯಡಿಯೂರಪ್ಪನವರು ಇಂದು ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆ ನಡೆಸಿದರು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರು ಇಂದು ಕೃಷ್ಣಾ ಮತ್ತು ಭೀಮಾ ಪ್ರದೇಶದ ಕರ್ನಾಟಕ ಮತ್ತು ಮಹಾರಾಷ್ಟ್ರದ ಅಂತರರಾಜ್ಯ ಪ್ರವಾಹ ಪರಿಶೀಲನಾ ಸಮಿತಿಯ ಸಭೆ ನಡೆಸಿದರು.
Updated on

ಬೆಂಗಳೂರು: ಕೃಷ್ಣ ಮತ್ತು ಭೀಮಾ ನದಿಗಳ ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ನಿಯಂತ್ರಣ ಮತ್ತು ನಿರ್ವಹಣೆ ಕುರಿತು ಶನಿವಾರ ನಡೆದ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳು ಕ್ಷಣಕ್ಷಣದ ಮಾಹಿತಿ, ಮಳೆಯ ಪ್ರಮಾಣ, ಜಲಾಶಯಗಳಿಂದ ನೀರು ಬಿಡುವ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಲಾಯಿತು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಜಯಂತ್ ಪಾಟೀಲ್ ಮತ್ತು ಅಲ್ಲಿನ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ದೂದ್ ಗಂಗಾ ಯೋಜನೆ ಎರಡೂ ರಾಜ್ಯಗಳ ಜಂಟಿ ಯೋಜನೆಯಾಗಿದ್ದು ನೆನೆಗುದಿಗೆ ಬಿದ್ದಿರುವ ಯೋಜನೆಯನ್ನು ಪೂರ್ಣಗೊಳಿಸಲು ಮತ್ತು ರಾಜ್ಯದ ಬಹುದಿನದ ಬೇಡಿಕೆ ಈಡೇರಿಸಲು ಸಭೆಯಲ್ಲಿ ನಿರ್ಧರಿಸಲಾಯಿತು ಎಂದರು.

ಮಹಾರಾಷ್ಟ್ರದಿಂದ 4 ಟಿಎಂಸಿ ನೀರನ್ನು ಬೇಸಿಗೆ ಕಾಲದಲ್ಲಿ ಪಡೆದು ಮಳೆಗಾಲದಲ್ಲಿ ಅವರಿಗೆ ಅಷ್ಟೇ ಪ್ರಮಾಣದ ನೀರನ್ನು ಒದಗಿಸುವ ಬಗ್ಗೆ ತಾಂತ್ರಿಕ ಸಮಿತಿಯನ್ನು ರಚಿಸಲು ಕೂಡ ಇಂದು ನಿರ್ಧಾರ ಮಾಡಲಾಯಿತು, ಇಂದಿನ ಸಭೆಯಲ್ಲಿ ಬಹಳ ಉಪಯುಕ್ತ ಚರ್ಚೆಗಳು ನಡೆದವು ಎಂದು ಅವರು ಹೇಳಿದ್ದಾರೆ.

ನಂತರ ಮಾತನಾಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕೃಷ್ಣಾ ನದಿ ನೀರಿನ ಹಂಚಿಕೆ ಮಹಾರಾಷ್ಟ್ರ ಮತ್ತು ಕರ್ನಾಟಕದ ನಡುವೆ ಆಗುತ್ತಿದೆ. ಪಶ್ಚಿಮ ಘಟ್ಟ ಮತ್ತು ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆಯಾದಾಗ ಮಹಾರಾಷ್ಟ್ರ ಹೆಚ್ಚುವರಿ ನೀರನ್ನು ಬಿಟ್ಟಾಗ ಆಲಮಟ್ಟಿ ಜಲಾಶಯ ತುಂಬುತ್ತದೆ.

ಇಲ್ಲಿ ನಮಗೆ ಎರಡು ಸವಾಲುಗಳಿವೆ, ಆಲಮಟ್ಟಿ ಹಿನ್ನೀರಿನಿಂದ ಪ್ರವಾಹವಾಗಬಾರದು ಮತ್ತು ಮುಂದೆ ನಾರಾಯಣಪುರ ಪ್ರದೇಶಗಳಲ್ಲಿ ಕೂಡ ಪ್ರವಾಹವಾಗಬಾರದು, ಆಲಮಟ್ಟಿ ಜಲಾಶಯದ ನಿರ್ವಹಣೆ ಸರಿಯಾಗಬೇಕು. ಇದಕ್ಕೆ ತಾಂತ್ರಿಕ ಸಲಹಾ ಸಮಿತಿಯನ್ನು ರಚಿಸಲಾಗಿದೆ ಎಂದರು.

ದೂದ್ ಗಂಗಾ ಯೋಜನೆ ಒಪ್ಪಿಗೆಯಾಗಿ ನಮ್ಮ ಭಾಗದ ಕೆಲಸ ಮುಗಿಸಿದ್ದು, ಮಹಾರಾಷ್ಟ್ರ ಪೂರ್ಣಗೊಳಿಸಬೇಕಿದೆ. ಕರ್ನಾಟಕಕ್ಕೆ ಒದಗಿಸುವ ಪಾಲನ್ನು ನೀಡುವ ಭರವಸೆಯನ್ನು ಇಂದಿನ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.ಬೇಸಿಗೆಯಲ್ಲಿ ಕೃಷ್ಣ ನದಿ ನೀರಿನ ಪಾತ್ರದ ಜನರಿಗೆ ಆಗುತ್ತಿರುವ ನೀರಿನ ಕೊರತೆಯನ್ನು ನೀಗಿಸಲು ಸೊಲ್ಲಾಪುರದಲ್ಲಿ ಮಳೆಗಾಲದಲ್ಲಿ ಆಗುವ ಬರಗಾಲಕ್ಕೆ ನಾವು ನೀರು ಒದಗಿಸಿ ಬೇಸಿಗೆ ಕಾಲದಲ್ಲಿ ಅಲ್ಲಿಂದ ಒದಗಿಸಲು ಇಂದಿನ ಸಭೆಯಲ್ಲಿ ಪರಸ್ಪರ ಒಪ್ಪಿಕೊಂಡಿದ್ದೇವೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com