ಬೆಡ್ ಬ್ಲಾಕಿಂಗ್ ಹಗರಣ: ಮಧ್ಯಾಹ್ನ ಶೂನ್ಯ ಬೆಡ್ ತೋರಿಸುತ್ತಿದ್ದ ಬಿಬಿಎಂಪಿ ವೆಬ್ ಸೈಟಿನಲ್ಲಿ ಈಗ 1504 ಬೆಡ್ ಗಳ ಲಭ್ಯತೆ ಇದೆ: ತೇಜಸ್ವಿ ಸೂರ್ಯ

ಕೋವಿಡ್ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣ ಬಯಲಾಗುತ್ತಿದ್ದಂತೆಯೇ ಶೂನ್ಯ ಬೆಡ್ ಗಳ ಲಭ್ಯತೆ ತೋರಿಸುತ್ತಿದ್ದ ಬಿಬಿಎಂಪಿ ವೆಬ್ ಸೈಟಿನಲ್ಲಿ ಈಗ 1504 ಬೆಡ್ ಗಳ ಲಭ್ಯತೆ ಇದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ
ಸಂಸದ ತೇಜಸ್ವಿ ಸೂರ್ಯ ಸುದ್ದಿಗೋಷ್ಠಿ

ಬೆಂಗಳೂರು: ಕೋವಿಡ್ ಆಸ್ಪತ್ರೆಗಳ ಬೆಡ್ ಬ್ಲಾಕಿಂಗ್ ಹಗರಣ ಬಯಲಾಗುತ್ತಿದ್ದಂತೆಯೇ ಶೂನ್ಯ ಬೆಡ್ ಗಳ ಲಭ್ಯತೆ ತೋರಿಸುತ್ತಿದ್ದ ಬಿಬಿಎಂಪಿ ವೆಬ್ ಸೈಟಿನಲ್ಲಿ ಈಗ 1504 ಬೆಡ್ ಗಳ ಲಭ್ಯತೆ ಇದೆ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

ಮಧ್ಯಾಹ್ನ ಶೂನ್ಯ ಬೆಡ್ ಗಳ ಲಭ್ಯತೆ ಕುರಿತು ಮಾಹಿತಿ ನೀಡುತ್ತಿದ್ದ ಬಿಬಿಎಂಪಿ ವೆಬ್ ಸೈಟಿನಲ್ಲಿ ಈಗ 1504 ಬೆಡ್ ಗಳ ಲಭ್ಯತೆ ಕುರಿತು ಮಾಹಿತಿ ಲಭ್ಯವಾಗುತ್ತಿದೆ. ಬಿಬಿಎಂಪಿ ಕೋವಿಡ್ ವಾರ್ ರೂಂನ ಬೆಡ್ ಬ್ಲಾಕಿಂಗ್ ಕರಾಳ ದಂಧೆಯನ್ನು ಬಯಲಿಗೆಳೆದ ಬೆನ್ನಲ್ಲೇ ಳಿಕ ಈ ಕುರಿತು ಟ್ವೀಟ್ ಮಾಡಿರುವ ಸಂಸದ  ತೇಜಸ್ವಿ ಸೂರ್ಯ, ಮಧ್ಯಾಹ್ನ ಬಿಬಿಎಂಪಿ ವೆಬ್ ಸೈಟಿನಲ್ಲಿ ಬೆಡ್ ಗಳ ಸಂಖ್ಯೆ ಶೂನ್ಯವಿತ್ತು. ಆದರೆ ಬೆಡ್ ಬ್ಲಾಕಿಂಗ್ ದಂಧೆ ಬಯಲಿಗೆಳೆದ ಬಳಿಕ ಈಗ ಬೆಂಗಳೂರಿನಲ್ಲಿ 1504 ಬೆಡ್ ಗಳ ಲಭ್ಯತೆ ಕುರಿತು ವೆಬ್ ಸೈಟಿನಲ್ಲಿ ಮಾಹಿತಿ ಲಭ್ಯವಿದೆ. ವ್ಯವಸ್ಥೆಯು ಸುಧಾರಣೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಇದೇ ವೇಳೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆಯನ್ನು ಸಿಸಿಗೆ ವಹಿಸಿದ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ಧನ್ಯವಾದ ತಿಳಿಸುತ್ತೇನೆ. ಅಂತೆಯೇ ಹಗರಣದ ಕಿಂಗ್ ಪಿನ್ ಗಳು, ಹಗರಣದಲ್ಲಿ ಭಾಗಿಯಾದ ಹಿರಿಯ ಅಧಿಕಾರಿಗಳು ತಮ್ಮ ತಪ್ಪಿಗೆ ತಕ್ಕ ಶಿಕ್ಷೆ ಅನುಭವಿಸುತ್ತಾರೆ  ಎಂದು ನಾನು ಪ್ರಾಮಾಣಿಕವಾಗಿ ಭಾವಿಸುತ್ತೇನೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿದ್ದಾರೆ.

ಹಾಸಿಗೆ ಬ್ಲಾಕ್‌ ದಂಧೆ; ಮಹಿಳೆ ಸೇರಿ ಇಬ್ಬರ ಬಂಧನ
ಇನ್ನು ಕೊರೊನಾ ಸೋಂಕಿತರ ಹೆಸರಿನಲ್ಲಿ ಹಾಸಿಗೆ ಬ್ಲಾಕ್ ಮಾಡಿಸಿ ದುಬಾರಿ ಬೆಲೆಗೆ ಬೇರೊಬ್ಬರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಜಯನಗರ ಪೊಲೀಸರು ಮಹಿಳೆ ಸೇರಿ ಇಬ್ಬರನ್ನು ಬಂಧಿಸಿದ್ದಾರೆ. ಬೇಗೂರು ನಿವಾಸಿಗಳಾದ ನೇತ್ರಾವತಿ (42) ಹಾಗೂ ರೋಹಿತ್‌ಕುಮಾರ್ (32) ಬಂಧಿತರು. ಅವರ  ಜೊತೆಗಿದ್ದ ಕೆಲವರು ತಲೆಮರೆಸಿಕೊಂಡಿದ್ದಾರೆ. ಅವರೆಲ್ಲರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಕಮಿಷನರ್ ಸೂಚನೆಯಂತೆ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಸಾಮಾಜಿಕ ಕಾರ್ಯಕರ್ತೆ ಎಂದು ಹೇಳಿಕೊಂಡು ಓಡಾಡುತ್ತಿದ್ದ ನೇತ್ರಾವತಿ, ನೆರೆಮನೆಯ ರೋಹಿತ್ ಕುಮಾರ್ ಹಾಗೂ ಹಲವರನ್ನು ತನ್ನ ಜೊತೆ ಸೇರಿಸಿಕೊಂಡು ದಂಧೆ ನಡೆಸುತ್ತಿದ್ದಳು. ತಾನೇ ಕೊರೊನಾ ಸೋಂಕಿತರ ನೆರವಿಗಾಗಿ ವಾಟ್ಸ್‌ಆ್ಯಪ್ ಗ್ರೂಪ್ ಮಾಡಿಕೊಂಡಿದ್ದಳು. ರೋಗಿಗಳನ್ನು ಅದರಲ್ಲಿ ಸೇರಿಸಿ  ಪರಿಚಯ ಮಾಡಿಕೊಂಡು ಅವರ ಹೆಸರಿನಲ್ಲೇ ಹಾಸಿಗೆ ಕಾಯ್ದಿರಿಸಿ ಬ್ಲಾಕ್ ಮಾಡಿಸುತ್ತಿದ್ದಳು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಅಂತೆಯೇ ಅಕ್ರಮದಲ್ಲಿ ಭಾಗಿಯಾದವರ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಬೆಂಗಳೂರು ಸಿಸಿಬಿಗೆ ವರ್ಗಾಯಿಸಲಾಗಿದೆ.

ಮಧ್ಯಾಹ್ನ ಬಿಬಿಎಂಪಿಯಿಂದ 12 ಆಸ್ಪತ್ರೆಗಳಲ್ಲಿ ಬೆಡ್  ಬುಕ್ಕಿಂಗ್ ದಂಧೆಯನ್ನು ಸ್ವತಃ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳಿದಿದ್ದು, ರಾಜ್ಯ ಸರ್ಕಾರವನ್ನು ಮುಜುಗರಕ್ಕೀಡು ಮಾಡಿದೆ. ಹೀಗಾಗಿ ಬೆಡ್ ಬ್ಲಾಕ್ ಅವ್ಯವಹಾರ ದಂಧೆ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಜೊತೆ ಚರ್ಚಿಸಿ ಕ್ರಮಕೈಗೊಳ್ಳುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಹಾಗೂ ಗೃಹ  ಸಚಿವ ಬಸವರಾಜ ಬೊಮ್ಮಾಯಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸೂಚಿಸಿರುವುದಾಗಿ ಹೇಳಿದ್ದಾರೆ.

ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ
ಈಬಗ್ಗೆ ವಿಧಾನಸೌಧದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಬೆಡ್ ಬ್ಲಾಕ್ ಅವ್ಯವಹಾರ ಬಗ್ಗೆ ಚರ್ಚೆ ಆಗಿದೆ.ಈ ಬಗ್ಗೆ ಸರ್ಕಾರ ಮಾಹಿತಿ ಪಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇರಲಿ ಅವರ ವಿರುದ್ಧ ಬಿಗಿ ಕ್ರಮ ಕೈಗೊಳ್ಳಲಾಗುವುದು.ಸಿಎಸ್ ಮತ್ತು‌ ಬಸವರಾಜ‌ ಬೊಮ್ಮಾಯಿ ಸಂಸದ ತೇಜಸ್ವಿ ಜೊತೆ ಚರ್ಚಿಸಿ  ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಏಜೆನ್ಸಿಗಳ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಇನ್ನು ಬಿಬಿಎಂಪಿ ಕೊವಿಡ್ ವಾರ್ ರೂಂನಲ್ಲಿ ಏಜೆನ್ಸಿಯವರು ಹೋಂ ಐಸೋಲೇಶನ್​ನಲ್ಲಿ ಇರುವವರ ಹೆಸರಿನಲ್ಲಿ ಬೆಡ್ ಬ್ಲಾಕ್ ಮಾಡುತ್ತಿದ್ದಾರೆ. ಬೆಡ್​ನ ಕೃತಕ ಅಭಾವ ಸೃಷ್ಟಿಸಿ 4 ಸಾವಿರಕ್ಕೂ ಹೆಚ್ಚು ಬೆಡ್​ಗಳ  ಅವ್ಯವಹಾರ ಬೆಂಗಳೂರಿ‌ನಾದ್ಯಂತ ನಡೆಯುತ್ತಿದೆ. ಓರ್ವ ವ್ಯಕ್ತಿಯ ಹೆಸರಿನಲ್ಲಿ 12 ಆಸ್ಪತ್ರೆಗಳಲ್ಲಿ ಬೆಡ್ ಬುಕ್ಕಿಂಗ್ ಆಗಿದೆ. ರಾತ್ರೋರಾತ್ರಿ ಈ ಅವ್ಯವಹಾರ ನಡೆಯುತ್ತಿದೆ. ಇದು ಭ್ರಷ್ಟಾಚಾರ ಅಲ್ಲ, ಕೊಲೆ ಎಂದು ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com