ಕೊರೋನಾ ಲಾಕ್'ಡೌನ್: ಲಾಠಿ ಹಿಡಿದ ಪೊಲೀಸರ ವಿರುದ್ಧ ಜನರ ಆಕ್ರೋಶ

ಕೋವಿಡ್‌ ನಿಯಂತ್ರಿಸಲು ರಾಜ್ಯ ಸರ್ಕಾರ ಸೋಮವಾರದಿಂದ ಜಾರಿಗೊಳಿಸಿರುವ 14 ದಿನಗಳ ಕಠಿಣ ಲಾಕ್‌ಡೌನ್‌ನ ಮೊದಲ ದಿನ ಪೊಲೀಸರು ಕಂಡ ಕಂಡವರ ಮೇಲೆ ಲಾಠಿ ಬೀಸಿದ್ದು, ಪೊಲೀಸರು ವರ್ತನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. 
ಶಿವಾಜಿನಗರದಲ್ಲಿ ಲಾಠಿ ಹಿಡಿದು ಗಸ್ತು ತಿರುಗುತ್ತಿರುವ ಪೊಲೀಸರು
ಶಿವಾಜಿನಗರದಲ್ಲಿ ಲಾಠಿ ಹಿಡಿದು ಗಸ್ತು ತಿರುಗುತ್ತಿರುವ ಪೊಲೀಸರು
Updated on

ಬೆಂಗಳೂರು: ಕೋವಿಡ್‌ ನಿಯಂತ್ರಿಸಲು ರಾಜ್ಯ ಸರ್ಕಾರ ಸೋಮವಾರದಿಂದ ಜಾರಿಗೊಳಿಸಿರುವ 14 ದಿನಗಳ ಕಠಿಣ ಲಾಕ್‌ಡೌನ್‌ನ ಮೊದಲ ದಿನ ಪೊಲೀಸರು ಕಂಡ ಕಂಡವರ ಮೇಲೆ ಲಾಠಿ ಬೀಸಿದ್ದು, ಪೊಲೀಸರು ವರ್ತನೆಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶಗಳು ವ್ಯಕ್ತವಾಗುತ್ತಿವೆ. 

ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಪಾಲನೆ ಮಾಡಲು ಸರ್ಕಾರ ಪೊಲೀಸರಿಗೆ ಸೂಚನೆ ನೀಡಿದ್ದು, ಪೊಲೀಸರು ಬೆಂಗಳೂರು ಮತ್ತು ವಿವಿಧ ಜಿಲ್ಲೆಗಳಲ್ಲಿ ಎರಡು ದಿನಗಳಿಂದ ಲಾಠಿ ಹಿಡಿದು ಕಾರ್ಯನಿರ್ವಹಿಸುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಳಿಗೆ ವಾಹನ ತೆಗೆದುಗೊಂಡು ಬರುತ್ತಿರುವ ಸವಾರರ ಮೇಲೆ ಲಾಠಿ ಬೀಸುತ್ತಿದ್ದಾರೆ. 

ಪೊಲೀಸರು ಲಾಠಿ ಬೀಸಿದ ಹಲವು ಘಟನೆಗಳ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವಿಡಿಯೋ ವೈರಲ್ ಆಗುತ್ತಿವೆ. ಜನರ ಮೇಲೆ ಪೊಲೀಸರು ನಿರ್ದಯವಾಗಿ ಲಾಠಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಪೊಲೀಸರ ವರ್ತನೆ ಬಗ್ಗೆ ಆಕ್ರೋಶ ವ್ಯಕ್ತವಾಗುತ್ತಿದೆ. 

ಮನುಷ್ಯತ್ವವನ್ನು ಮರೆತು ಜನರ ಮೇಲೆ ದಬ್ಬಾಳಿಕೆ ನಡೆಸುವ ಪೊಲೀಸರ ವಿರುದ್ಧ ಅಸಮಾಧಾನವನ್ನು ಜನರು ಹೊರಹಾಕಿದ್ದಾರೆ.

ಜನರು ಮನೆಯಲ್ಲೇ ಇದ್ದು ಲಾಕ್‌ಡೌನ್ ನಿಯಮಗಳನ್ನು ಪಾಲನೆ ಮಾಡಬೇಕು. ಆದರೆ, ತುರ್ತು ಕೆಲಸದ ಮೇಲೆ ಹೊರಗೆ ಬಂದ ಜನರ ಮೇಲೆಯೂ ಲಾಠಿ ಬೀಸಲಾಗುತ್ತಿದೆ. ಇದರಿಂದಾಗಿ ಪೊಲೀಸರ ವಿರುದ್ಧ ಜನರು ಆಕ್ರೋಶಗೊಂಡಿದ್ದಾರೆ. 

ನಾನು ಬಾಗಲುಗುಂಟೆಯಲ್ಲಿದ್ದು, ನೆರೆಮನೆಯವರಿಗೆ ತುರ್ತು ವೈದ್ಯಕೀಯ ಚಿಕಿತ್ಸೆ ಬೇಕಿತ್ತು. ಜ್ವರದಿಂದ ಬಳಲುತ್ತಿದ್ದ ವಯಸ್ಸಾದ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದೆ. ಪೊಲೀಸರು ನನ್ನ ವಾಹನವನ್ನು ನಿಲ್ಲಿಸಿ ಲಾಠಿ ಪ್ರಹಾರ ನಡೆಸಲು ಆರಂಭಿಸಿದ್ದರು. ವಾಹನದ ಇಂಡಿಕೇಟರ್ ನ್ನು ಹಾಳು ಮಾಡಿದ್ದಾರೆ. ನಾನು ಹೇಳುವುದನ್ನು ಕೇಳಲು ಪೊಲೀಸರು ಸಿದ್ಧರೇ ಇರಲಿಲ್ಲ. ನಿಜಕ್ಕೂ ಇದೊಂದು ಭಯಾನಕ ಅನುಭವ. ಇದೇ ರೀತಿ ಸಾಕಷ್ಟು ಜನರಿಗೆ ಮಾಡುತ್ತಿದ್ದರು. ಸರ್ಕಾರ ನೀಡಿದ್ದ ಗಡುವಿನ ಸಮಯ ಮುಗಿಯುವುದಕ್ಕೂ ಕೆಲ ನಿಮಿಷಗಳಿರುವಾಗಲೇ ತರಕಾರಿ ಮಾರಾಟಗಾರರ ಮೇಲೂ ಲಾಠಿ ಪ್ರಹಾರ ನಡೆಸಿದ್ದರು ಎಂದು ಆಟೋ ಚಾಲಕ ಧನುಷ್ ಎಂಬುವವರು ಹೇಳಿದ್ದಾರೆ. 

ಜನರು ತರಕಾರಿ ತೆಗೆದುಕೊಳ್ಳುತ್ತಿರುವಾಗ ನಿಲ್ಲಿಸಿ ಎಂದು ಹೇಳಿ ನಾನು ಗಾಡಿ ತೆಗೆದುಕೊಂಡು ಬರಲು ಸಾಧ್ಯವೇ? ಕೇವಲ 4 ಗಂಟೆಗಳಷ್ಟೇ ಅವಕಾಶ ಇರುವುದರಿಂದ ಸಾಕಷ್ಟು ಜನರು ತರಕಾರಿ ತೆಗೆದುಕೊಳ್ಳಲು ಹೊರಗೆ ಬರುತ್ತಾರೆ. ಇದರಿಂದ ನಮಗೆ ತಡವಾಗುತ್ತಿದೆ. ಪೊಲೀಸರು ನಮ್ಮ ಕಷ್ಟವನ್ನು ಅರಿತುಕೊಂಡು ವರ್ತಿಸಬೇಕು ಎಂದು ರಾಜಾಜಿನಗರದ ತರಕಾರಿ ಮಾರಾಟಗಾರ ರಾಜಣ್ಣ ಎಂಬುವವರು ಹೇಳಿದ್ದಾರೆ. 

ಸಾರ್ವಜನಿಕರಿಂದ ಆಕ್ರೋಶಗಳು ವ್ಯಕ್ತವಾಗದ ಬೆನ್ನಲ್ಲೇ ಎಚ್ಚೆತ್ತ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು, ನಾಗರೀಕರ ಮೇಲೆ ಬಲ ಪ್ರಯೋಗ ಮಾಡದಂತೆ ಪೊಲೀಸರಿಗೆ ಸೂಚಿಸಿದ್ದಾರೆ. 

ಸಾರ್ವಜನಿಕರು ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘಿಸಿದ್ದು ಕಂಡು ಬಂದಲ್ಲಿ ಮಾತ್ರ ಕಾನೂನಿನಡಿ ಕ್ರಮ ಕೈಗೊಳ್ಳಬೇಕೇ ಹೊರತು ಬೇರೆ ಯಾವುದೇ ರೀತಿಯ ಬಲಪ್ರಯೋಗ ಮಾಡಬಾರದು ಎಂದು ಪೊಲೀಸರಿಗೆ ಸೂಚಿಸಿರುವುದಾಗಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿದ್ದಾರೆ. 

ಲಾಕ್ಡೌನ್ ಜಾರಿಯಾಗಿರುವ ಸಮಯದಲ್ಲಿ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಒಪ್ಪಿಗೆ ನೀಡಲಾದ ಚಟುವಟಿಕೆಗಳಿಗೆ ಸಂಬಂಧಿಸಿದ ಅಥವಾ ಕೆಲಸ ಸ್ಥಳಕ್ಕೆ ಪ್ರಯಾಣಿಸುವ ಸಂದರ್ಭದಲ್ಲಿ ಯಾವುದೇ ಸಮಸ್ಯೆಗಳಾದಲ್ಲಿ ಗುಪ್ತಚರ ವಿಭಾಗದ ಡಿಸಿಪಿ ಸಂತೋಷ್ ಬಾಬು ಅವರನ್ನು ಸಂಪರ್ಕಿಸಬಹುದು. ದೂರವಾಣಿ ಸಂಖ್ಯೆ 080-22942354 ಕರೆ ಮಾಡುವಂತೆ ಆಯುಕ್ತರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com