ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಪಡೆಯಲು ಗುರುತಿನ ಚೀಟಿ ಬೇಕಿಲ್ಲ: ಬಿಬಿಎಂಪಿ ಆಯುಕ್ತ

ಕೋವಿಡ್-19 ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕೂಲಿ ಕಾರ್ಮಿಕರ ಮುಂತಾದವರು ಗುರುತಿನ ಚೀಟಿ ಇಲ್ಲದೇ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ
Updated on

ಬೆಂಗಳೂರು: ಕೋವಿಡ್-19 ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಬಡವರು, ಕೂಲಿ ಕಾರ್ಮಿಕರ ಮುಂತಾದವರು ಗುರುತಿನ ಚೀಟಿ ಇಲ್ಲದೇ ಇಂದಿರಾ ಕ್ಯಾಂಟೀನ್ ನಲ್ಲಿ ಉಚಿತ ಆಹಾರ ಪಡೆಯಬಹುದು ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಹೇಳಿದ್ದಾರೆ.

ಕೊರೊನಾ ಸೋಂಕಿನ ಎರಡನೇ ಅಲೆಯ ನಿಯಂತ್ರಣಕ್ಕೆ ಮೇ 24ರವರೆಗೆ ಲಾಕ್‌ಡೌನ್‌ ಹೇರಿರುವ ಹಿನ್ನೆಲೆಯಲ್ಲಿ ಬಡವರು, ಕೂಲಿ ಕಾರ್ಮಿಕರ ಹಸಿವು ನೀಗಿಸಲು ನಗರದಲ್ಲಿನ ಎಲ್ಲಇಂದಿರಾ ಕ್ಯಾಂಟೀನ್‌ಗಳಲ್ಲಿ ಬುಧವಾರ ಬೆಳಗಿನ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ಪೊಟ್ಟಣಗಳನ್ನು ಉಚಿತವಾಗಿ  ವಿತರಣೆ ಮಾಡಲಾಯಿತು. ಇಂದಿರಾ ಕ್ಯಾಂಟೀನ್‌ಗಳಲ್ಲಿ ಮೇ 24ರವರೆಗೆ ಉಚಿತವಾಗಿ ಮೂರು ಹೊತ್ತು ಊಟ, ತಿಂಡಿ ನೀಡಲು ಸರಕಾರ ಆದೇಶಿಸಿದೆ. 

ಈ ಹಿಂದೆ ಆಹಾರದ ಪೊಟ್ಟಣಗಳನ್ನು ಪಡೆಯಲು ಗುರುತಿನ ಚೀಟಿ ಕಡ್ಡಾಯ ಆದೇಶವನ್ನು ಬಿಬಿಎಂಪಿ ಹಿಂಪಡೆದಿದೆ. ಬಡವರು, ಕೂಲಿ ಕಾರ್ಮಿಕರು, ವಲಸಿಗರು ಗುರುತಿನ ಚೀಟಿಗಳನ್ನು ತೋರಿಸಿ ಆಹಾರ ಪೊಟ್ಟಣಗಳನ್ನು ಪಡೆಯಲು ಸಮಸ್ಯೆಯಾಗುತ್ತಿತ್ತು. ಇದೀಗ ಗುರುತಿನ ಚೀಟಿ ತೋರಿಸದೆಯೇ  ಕ್ಯಾಂಟೀನ್‌ಗಳಲ್ಲಿ ಆಹಾರದ ಪೊಟ್ಟಣಗಳನ್ನು ಪಡೆಯಬಹುದು ಎಂದು ಮುಖ್ಯ ಆಯುಕ್ತ ಗೌರವ್‌ ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ಬುಧವಾರ ಧರ್ಮರಾಯಸ್ವಾಮಿ ವಾರ್ಡ್‌ನಲ್ಲಿರುವ ಇಂದಿರಾ ಕ್ಯಾಂಟೀನ್‌ ಅಡುಗೆ ಮನೆಗೆ ಭೇಟಿ ನೀಡಿ ಆಹಾರ ತಯಾರಿಕೆ ವಿಧಾನವನ್ನು ಪರಿಶೀಲಿಸಿದ ಮುಖ್ಯ ಆಯುಕ್ತರು, ನಗರದಲ್ಲಿ 15 ಕೇಂದ್ರೀಕೃತ ಅಡುಗೆ ಮನೆಗಳಿದ್ದು, ಇಲ್ಲಿತಯಾರಿಸಿದ ಆಹಾರವನ್ನು ಕಂಟೈನರ್‌ಗಳ ಮೂಲಕ ಇಂದಿರಾ ಕ್ಯಾಂಟೀನ್‌ಗಳಿಗೆ  ಪೂರೈಸಲಾಗುತ್ತದೆ. ಕ್ಯಾಂಟೀನ್‌ಗಳಲ್ಲಿ ಪೊಟ್ಟಣಗಳನ್ನು ಸಿದ್ಧಪಡಿಸಿ ಬಡವರು, ಕೂಲಿ ಕಾರ್ಮಿಕರು, ವಲಸಿಗರಿಗೆ ಮೂರು ಹೊತ್ತು ಉಚಿತವಾಗಿ ನೀಡಲಾಗುವುದು. ಒಂದು ಹೊತ್ತಿಗೆ 1 ಲಕ್ಷದಂತೆ ದಿನಕ್ಕೆ 3 ಲಕ್ಷ ಆಹಾರದ ಪೊಟ್ಟಣಗಳನ್ನು ವಿತರಿಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

'ನಗರದಲ್ಲಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳಲ್ಲಿ ಬಡವರು, ವಲಸಿಗರು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ನಗರದ ಎಲ್ಲಾ ಇಂದಿರಾ ಕ್ಯಾಂಟೀನ್‌ಗಳಲ್ಲಿ ಊಟದ  ಪೊಟ್ಟಣಗಳನ್ನು ಪಡೆಯಲು ಬರುವ ಫಲಾನುಭವಿಗಳು ಕಡ್ಡಾಯವಾಗಿ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಯ್ದುಕೊಂಡು ಸರರಿ ಸಾಲಿನಲ್ಲಿ ನಿಂತು ಆಹಾರ ಪೊಟ್ಟಣಗಳನ್ನು ಪಡೆಯಬಹುದು ಎಂದು ವಿವರಿಸಿದರು.

ಫೋನ್ ನಂಬರ್ ಬರೆದುಕೊಳ್ಳುತ್ತಿದ್ದ ಸಿಬ್ಬಂದಿ
ಇನ್ನು ನಗರದ ಅನೇಕ ಇಂದಿರಾ ಕ್ಯಾಂಟೀನ್‌ಗಳ ಸಿಬ್ಬಂದಿ ಉಚಿತ ಆಹಾರ ಪೊಟ್ಟಣಗಳ ಫಲಾನುಭವಿಗಳ ಫೋನ್ ಸಂಖ್ಯೆಗಳು ಮತ್ತು ಗುರುತಿನ ಚೀಟಿಗಳನ್ನು ಪರಿಶೀಲಿಸುತ್ತಿದ್ದರು. ಅನೇಕ ಸಿಬ್ಬಂದಿಗಳು ಗುರುತಿನ ಚೀಟಿಗಳು ಮತ್ತು ಫೋನ್ ಸಂಖ್ಯೆಗಳನ್ನು ಹೊಂದಿರದ ಕಾರಣ ಅನೇಕರಿಗೆ ಅಹಾರ ಪೊಟ್ಟಣಗಳನ್ನು  ನೀಡಲು ನಿರಾಕರಿಸಿದ್ದ ಘಟನೆಗಳು ಕೂಡ ನಡೆದಿದೆ. 

ಮತ್ತೆ ಕೆಲವೆಡೆ ಸಾರ್ವಜನಿಕರೇ ಆಹಾರಪೊಟ್ಟಣಗಳನ್ನು ತಂದು ಗುರುತಿನ ಚೀಟಿ ಇಲ್ಲದೇ ಇಂದಿರಾ ಕ್ಯಾಂಟೀನ್ ನಲ್ಲಿ ಆಹಾರ ನಿರಾಕರಿಸಲ್ಪಟ್ಟ ಬಡವರಿಗೆ ಕೂಲಿ ಕಾರ್ಮಿಕರಿಗೆ ವಿತರಿಸಿದ್ದು ಗಮನ ಸೆಳೆಯಿತು. ಇಂದಿರಾ ಕ್ಯಾಂಟೀನ್ ನಲ್ಲಿ ಗುರುತಿನ ಚೀಟಿ ಇಲ್ಲದ ವ್ಯಕ್ತಿಗಳಿಗೆ ಆಹಾರ ನೀಡದ ಕುರಿತು  ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಎಚ್ಚೆತ್ತ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಅವರು ಸಂಬಂಧ ಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿ ಗುರುತಿನ ಚೀಟಿ ಇಲ್ಲದವರಿಗೂ ಆಹಾರ ವಿತರಿಸುವಂತೆ ಸೂಚನೆ ನೀಡಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com