ಸರ್ಕಾರವೇ ಜನರ ಬಳಿಗೆ ತೆರಳಿ ಸೇವೆ ತಲುಪಿಸಿದಾಗ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಗಟ್ಟಿಗೊಳ್ಳುತ್ತದೆ: ಸಿಎಂ ಬೊಮ್ಮಾಯಿ

ಸರ್ಕಾರವೇ ಜನರ ಬಳಿಗೆ ತೆರಳಿ ಸೇವೆಗಳನ್ನು ತಲುಪಿಸಿದಾಗ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಗಟ್ಟಿಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಲ್ಲೇಶ್ವರಂನಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಜನಸೇವಕ ಕಾರ್ಯಕ್ರಮಕ್ಕೆ ಚಾಲನೆ
ಮಲ್ಲೇಶ್ವರಂನಲ್ಲಿ ಸಿಎಂ ಬೊಮ್ಮಾಯಿ ಅವರಿಂದ ಜನಸೇವಕ ಕಾರ್ಯಕ್ರಮಕ್ಕೆ ಚಾಲನೆ
Updated on

ಬೆಂಗಳೂರು: ಸರ್ಕಾರವೇ ಜನರ ಬಳಿಗೆ ತೆರಳಿ ಸೇವೆಗಳನ್ನು ತಲುಪಿಸಿದಾಗ ಪ್ರಜಾಪ್ರಭುತ್ವದ ಮೇಲಿನ ವಿಶ್ವಾಸ ಗಟ್ಟಿಗೊಳ್ಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

ಅವರು ಇಂದು ಮಲ್ಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಜನಸೇವಕ ಯೋಜನೆಯಡಿಯಲ್ಲಿ ನಾಗರಿಕರಿಂದ ಸೇವೆಗಳನ್ನು ಕೋರಿ ನೀಡಲಾಗುವ ಅರ್ಜಿಗಳನ್ನು ಸ್ವೀಕರಿಸಿ ಸೇವೆಗಳನ್ನು ವಿತರಿಸಿ ಮಾಧ್ಯಮದವರೊಂದಿಗೆ ಮಾತನಾಡಿದರು.

'ಜನರ ಸುತ್ತಲೂ ಆಡಳಿತ ಇರಬೇಕು, ಅಭಿವೃದ್ಧಿ ಇರಬೇಕು. ಜನರ ಮನೆ ಬಾಗಿಲಿಗೆ ಸರ್ಕಾರ ಹೋಗುವಂತಹ ಕೆಲಸ ಇದಾಗಿದೆ. ಜನಸೇವಕ, ಜನ ಸ್ಪಂದನೆ, ಸಾರಿಗೆ ಇಲಾಖೆ ಯೋಜನೆಯ ಮೂಲಕ ಜನರ ಮನೆ ಬಾಗಿಲಿಗೆ ಸರ್ಕಾರ ಹೋಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಜನಸೇವಕ ಕಾರ್ಯಕ್ರಮ ಪ್ರಾರಂಭದಡಿ ಸುಮಾರು 56 ಸೇವೆಗಳನ್ನು ಬೆಂಗಳೂರು ನಗರದ 28 ವಿಧಾನಸಭಾ ಕ್ಷೇತ್ರದ 197 ವಾರ್ಡ್ ಗಳಲ್ಲಿ ಪ್ರಾರಂಭಿಸಲಾಗಿದೆ. ಡಾ:ಅಶ್ವತ್ಥ್ ನಾರಾಯಣ್ ಅವರ ಕ್ಷೇತ್ರದಲ್ಲಿ 10 ಮನೆಗಳನ್ನು ಆಯ್ಕೆ ಮಾಡಿ, ಜಾತಿ, ವಾಸಸ್ಥಳ ಪ್ರಮಾಣ ಪತ್ರ, ವೃದ್ದಾಪ್ಯ ಹಾಗೂ ವಿಧವಾ ವೇತನ, ಖಾತಾ ನೀಡಲಾಗಿದೆ.  ನಾನು ಸಿಎಂ ಆಗಿದ್ದಾಗ ಜನಪರ ಆಡಳಿತ ನೀಡುತ್ತೇನೆ ಎಂದಿದ್ದೆ. ಅದರಂತೆಯೇ ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದೇನೆ. ಇದು ಕ್ರಾಂತಿಕಾರಕ ಬದಲಾವಣೆ. ಜನರಿಂದ, ಜನರಿಗಾಗಿ ಆಡಳಿತ ಮಾಡಲು ನಾವು ಹೊರಟಿದ್ದೇವೆ. ಆಡಳಿತ ಕೇವಲ ಕೆಲವೇ ಜನರ ಕಪಿಮುಷ್ಟಿಯಲ್ಲಿರಬಾರದು. ಜನ ಕೇಳುವ ಸೇವೆ ಮನೆಯ ಬಾಗಿಲಿಗೆ ಬಂದರೆ ಅನುಕೂಲವಾಗುತ್ತದೆ. ಇದರಿಂದ ಭ್ರಷ್ಟಾಚಾರವೂ ನಿಲ್ಲುತ್ತದೆ ಎಂದು ಸಿಎಂ ತಿಳಿಸಿದ್ದಾರೆ.

ಜನ ಸೇವಕ ಯೋಜನೆಗೆ ಚಾಲನೆ
ಮಲ್ಲೇಶ್ವರಂ ಕ್ಷೇತ್ರದ ಎರಡು ರಸ್ತೆಗಳಲ್ಲಿ ಪ್ರಾಯೋಗಿಕ ಜನ ಸೇವಕ ಯೋಜನೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಸ್ಕೂಟರ್ ಚಲಾಯಿಸಿಕೊಂಡು ಮನೆ ಮನೆಗೆ ಯೋಜನೆ ತಲುಪಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಈ ವೇಳೆ ಬೊಮ್ಮಾಯಿಗೆ ರಸ್ತೆಯುದ್ದಕ್ಕೂ ಹೂ ಸುರಿಮಳೆ ಮಾಡಲಾಗಿದೆ. ಆಧಾರ್ ಕಾರ್ಡ್, ಆರೋಗ್ಯ ಕಾರ್ಡ್, ಉದ್ಯೋಗ ಕಾರ್ಡ್, ವಿಧವಾ ವೇತನ, ಪಹಣಿ, ಪಿಂಚಣಿಯನ್ನು ಆ ಮೂಲಕ ಜನರಿಗೆ ತಲುಪಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಕ್ರಾಂತಿಕಾರಿ ಬದಲಾವಣೆ ಆಗುವ ದಿನ
ಜನ ಸೇವಕ ಕಾರ್ಯಕ್ರಮ ಹೆಚ್ಚು ಜನಸಂಖ್ಯೆ ಇರುವ ಬೆಂಗಳೂರು ನಗರದಲ್ಲಿ ಯಶಸ್ವಿಯಾಗಬೇಕು. ಇಲ್ಲಿ ಯಶಸ್ವಿಯಾದರೆ ಜಿಲ್ಲೆಗಳಿಗೆ ವಿಸ್ತರಿಸುವುದು ಸುಲಭ. ಜನವರಿ 26ರಂದು ಗ್ರಾಮೀಣ ಪ್ರದೇಶಗಳಿಗೆ ಈ ಕಾರ್ಯಕ್ರಮ ವಿಸ್ತರಿಸುತ್ತೇವೆ. ಕ್ರಾಂತಿಕಾರಿ ಬದಲಾವಣೆ ಆಗುವ ದಿನ ಇದು. ಶಕ್ತಿ ಕೇಂದ್ರದ ಹತ್ತಿರವೇ ಮಾಡುತ್ತಿರುವ ಈ ಯೋಜನೆ ಯಶಸ್ವಿ ಆಗಲೇಬೇಕು. ಮುಂದಿನ ದಿನಗಳಲ್ಲಿ ಇಡೀ ವ್ಯವಸ್ಥೆ ಬದಲಾವಣೆಗೆ ಇದು ಭದ್ರ ಬುನಾದಿ ಆಗುತ್ತದೆ. ಸ್ಪಷ್ಟ ದಿಕ್ಸೂಚಿ, ನಿರ್ದಿಷ್ಟ ಗುರಿ, ಸಮಸ್ಯೆ ಬಗೆಹರಿಸುವ ಬದ್ಧತೆ ಮೂಲಕ ನಾವು ಮುನ್ನಡೆಯುತ್ತೇವೆ. ಕೇವಲ ರಾಜ್ಯೋತ್ಸವ ಮಾಡಿದರೆ ಸಾಲದು ಅದು ಜನೋತ್ಸವ ಆಗಬೇಕು. ಆಡಳಿತ ಸುಧಾರಣೆ ಆದಾಗ ರಾಜ್ಯೋತ್ಸವ ಜನೋತ್ಸವ ಆಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

ವಾಹನ ಮಾರುವವರು ರಿಜಿಸ್ಟ್ರೇಷನ್ ನೀಡುವ ವ್ಯವಸ್ಥೆ
ಸಾರಿಗೆ ಇಲಾಖೆಯಲ್ಲಿ ಬಹಳ ದೊಡ್ಡ ಬದಲಾವಣೆ ಮಾಡಲು ಸಾರಿಗೆ ಸಚಿವರು ಮುಂದಾಗಿದ್ದಾರೆ. 60 ಲಕ್ಷ ರೂ. ಜನ ಸಾರಿಗೆ ಕಚೇರಿಗೆ ಹೋಗುತ್ತಾರೆ. ಅದನ್ನು ತಪ್ಪಿಸಬೇಕು. 30 ಸೇವೆಗಳನ್ನು ಇದರ ಅಡಿಯಲ್ಲಿ ತರುತ್ತಿದ್ದೇವೆ. ವಾಹನವನ್ನು ಯಾರು ಮಾರುತ್ತಾರೋ ಅವರೇ ರಿಜಿಸ್ಟ್ರೇಷನ್ ನೀಡುವ ವ್ಯವಸ್ಥೆ ತರುತ್ತಿದ್ದೇವೆ. 10 ಸಂಸ್ಥೆಗಳಿಗೆ ಮಾತ್ರ ಇದೀಗ ರಿಜಿಸ್ಟ್ರೇಷನ್ ಅವಕಾಶ ನೀಡುತ್ತಿದ್ದೇವೆ. ಇವೆಲ್ಲವೂ ಜನಪರವಾದ ಸರ್ಕಾರದ ನಿರ್ಣಯ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com