ಕೋರಮಂಗಲ ಆಡಿ ಕಾರು ದುರಂತ: ಮೃತರ ಮರಣೋತ್ತರ ಪರೀಕ್ಷೆ, ಎಫ್ಎಸ್'ಎಲ್ ವರದಿ ಇಂದು ಅಧಿಕಾರಿಗಳ ಕೈಗೆ

ಕೋರಮಂಗಲದಲ್ಲಿ ಸಂಭವಿಸಿದ ಐಷಾರಾಮಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿ ಶುಕ್ರವಾರ ತನಿಖೆ ನಡೆಸುತ್ತಿರುವ ಆಡುಗೋಡಿ ಸಂಚಾರಿ ಪೊಲೀಸರ ಕೈಸೇರಲಿದೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸಿದ ಸ್ಥಳ
ಅಪಘಾತ ಸಂಭವಿಸಿದ ಸ್ಥಳ

ಬೆಂಗಳೂರು: ಕೋರಮಂಗಲದಲ್ಲಿ ಸಂಭವಿಸಿದ ಐಷಾರಾಮಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಮರಣೋತ್ತರ ಪರೀಕ್ಷೆ ಹಾಗೂ ಎಫ್ಎಸ್ಎಲ್ ವರದಿ ಶುಕ್ರವಾರ ತನಿಖೆ ನಡೆಸುತ್ತಿರುವ ಆಡುಗೋಡಿ ಸಂಚಾರಿ ಪೊಲೀಸರ ಕೈಸೇರಲಿದೆ ಎಂದು ತಿಳಿದುಬಂದಿದೆ. 

ಪ್ರಕರಣ ಸಂಬಂಧ ಸಾಕಷ್ಟು ಊಹಾಪೋಹಗಳು ಹಾಗೂ ಟೀಕೆಗಳು ವ್ಯಕ್ತವಾಗತೊಡಗಿದ್ದು, ವೈದ್ಯಕೀಯ ವರದಿ ಬಳಿಕ ಎಲ್ಲದ್ದಕ್ಕೂ ಸ್ಪಷ್ಟ ಮಾಹಿತಿಗಳು ಲಭ್ಯವಾಗಲಿವೆ. 

ಘಟನೆ ಬಳಿಕ ಕೆಲ ಪ್ರತ್ಯಕ್ಷದರ್ಶಿಗಳು ಕಾರಿನಲ್ಲಿದ್ದವರೆಲ್ಲರೂ ಸೀಟ್ ಬೆಲ್ಟ್ ಧರಿಸಿದ್ದು, ಸೀಟ್ ಬೆಲ್ಟ್ ಗಳನ್ನು ಕತ್ತರಿಸಿಯೇ ಮೃತದೇಹಗಳನ್ನು ಹೊರತೆಗೆಯಲಾಗಿತ್ತು. ಅಪಘಾತದ ಸಂದರ್ಭದಲ್ಲಿ ಕಾರಿನ ಏರ್ ಬ್ಯಾಗ್ ಕಾರ್ಯನಿರ್ವಹಿಸಿಲ್ಲ ಎಂದು ಹೇಳಿದ್ದರು. ಇನ್ನೂ ಕೆಲವರು ಕುಡಿದು ಕಾರು ಚಾಲನೆ ಮಾಡಿದ್ದರಿಂದಾಗಿ ಅಪಘಾತ ಸಂಭವಿಸಿದೆ ಎಂದು ಹೇಳಿದ್ದರು. 

ಪ್ರಕರಣ ಕುರಿತು ಹೇಳಿಕೆ ನೀಡಿರುವ ತನಿಖಾಧಿಕಾರಿ, ದೂರು ನೀಡಿದ್ದವರ ಹೇಳಿಕೆ ಹಾಗೂ ಸ್ಥಳೀಯರ ಹೇಳಿಕೆಗಳನ್ನು ದಾಖಲು ಮಾಡಿಕೊಳ್ಳಲಾಗಿದೆ. ಕೆಲವರು ಮೃತರು ಕಾರಿನಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಸೀಟ್ ಬೆಲ್ಟ್ ಧರಿಸಿದ್ದರು ಎಂದು ಹೇಳಿದ್ದಾರೆ. ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಕೆಲವರು ರಕ್ಷಣೆಗೆ ಧಾವಿಸಿದ್ದು, ಈ ವೇಳೆ ಸೀಟ್ ಬೆಲ್ಟ್ ತೆಗೆದು ಮೃತದೇಹಗಳನ್ನು ಹೊರತೆಗೆದಿದ್ದರು ಎಂದು ಹೇಳಿದ್ದಾರೆ. ಕತ್ತರಿಸಿರುವ ಸೀಟ್ ಬೆಲ್ಟ್'ನ್ನೂ ಸಂಗ್ರಹಿಸಿ ಎಫ್ಎಸ್ಎಲ್'ಗೆ ಕಳುಹಿಸಲಾಗಿದೆ ಎಂದು ಹೇಳಿದ್ದಾರೆ. 

ಈ ವರೆಗೂ ಮರಣೋತ್ತರ ಪರೀಕ್ಷಾ ವರದಿ, ರಕ್ತ ಪರೀಕ್ಷೆಯ ವರದಿಗಳು ನಮ್ಮ ಕೈ ಸೇರಿಲ್ಲ. ಹೀಗಾಗಿ ಈಗಲೇ ತನಿಖೆ ಬಗ್ಗೆ ಮಾಹಿತಿ ನೀಡಲು ಸಾಧ್ಯವಿಲ್ಲ. ತನಿಖೆಗಾಗಿ ಇತರೆ ಇಲಾಖೆಗಳಿಂದ ತಾಂತ್ರಿಕ ಮಾಹಿತಿಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. 

ಸೆಂಟ್ ಜಾನ್ಸ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ಮಾತನಾಡಿ, ಶೀಘ್ರದಲ್ಲೇ ಮರಣೋತ್ತರ ಪರೀಕ್ಷಾ ವರದಿಯನ್ನು ಅಧಿಕಾರಿಗಳಿಗೆ ನೀಡಲಾಗುತ್ತದೆ. ಮಡಿವಾಳದಲ್ಲಿರುವ ಸರ್ಕಾರಿ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಟಾಕ್ಸಿಕೋಲಜಿ  (ವಿಷವೈದ್ಯಶಾಸ್ತ್ರ) ವರದಿ ಬರುವುದು ಬಾಕಿಯಿದೆ ಎಂದು ಮಾಹಿತಿ ನೀಡಿದ್ದಾರೆ. 

ಈ ನಡುವೆ, ಐಪಿಸಿ ಸೆಕ್ಷನ್ 279 (ಬೇಜವಾಬ್ದಾರಿಯುತ ಚಾಲನೆ ಅಥವಾ ಸಾರ್ವಜನಿಕ ದಾರಿಯಲ್ಲಿ ಚಾಲನೆ ಮಾಡಿರುವುದು) ಮತ್ತು 304 ಎ (ನಿರ್ಲಕ್ಷ್ಯದಿಂದ ಸಂಭವಿಸಿದ ಸಾವು) ಅಡಿಯಲ್ಲಿ ಪ್ರಕರಣವನ್ನು ದಾಖಲಾಗಿದೆ ಎಂದು ತಿಳಿದುಬಂದಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com