ಪಾಲಿಕೆ ಪೈಪೋಟಿ: ಮತ ಎಣಿಕೆ ಕಾರ್ಯ ಆರಂಭ

ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣಾ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಫಲಿತಾಂಶ ಲಭ್ಯವಾಗಲಿದೆ.
ಮತ ಎಣಿಕೆ ಕಾರ್ಯ
ಮತ ಎಣಿಕೆ ಕಾರ್ಯ
Updated on

ಬೆಂಗಳೂರು: ಬೆಳಗಾವಿ, ಹುಬ್ಬಳ್ಳಿ-ಧಾರವಾಡ ಮತ್ತು ಕಲಬುರಗಿ ಮಹಾನಗರ ಪಾಲಿಕೆ ಚುನಾವಣಾ ಮತಎಣಿಕೆ ಕಾರ್ಯ ಆರಂಭವಾಗಿದ್ದು, ಕೆಲವೇ ಗಂಟೆಗಳಲ್ಲಿ ಸಂಪೂರ್ಣ ಫಲಿತಾಂಶ ಲಭ್ಯವಾಗಲಿದೆ.

ಬೆಳಗಾವಿ:
ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ 385 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದ್ದು, ಜಿಲ್ಲೆಯ ಬಿ.ಕೆ.ಮಾಡೆಲ್ ಶಾಲೆಯಲ್ಲಿ ಬೆಳಗ್ಗೆ 8 ಗಂಟೆಯಿಂದ ಮತಎಣಿಕೆ ಕಾರ್ಯ ಆರಂಭವಾಗಿದೆ. ಮತ ಎಣಿಕೆ ನಡೆಸಲು 58 ವಾರ್ಡ್‍ಗಳಲ್ಲಿ 12 ಕೊಠಡಿಗಳನ್ನು ವ್ಯವಸ್ಥೆಗೊಳಿಸಲಾಗಿದೆ. ಪ್ರತಿ ಕೊಠಡಿಗೆ ಓರ್ವರಂತೆ 12 ಚುನಾವಣಾಧಿಕಾರಿಗಳ ನಿಯೋಜನೆ ಮಾಡಲಾಗಿದೆ. ಪ್ರತಿ ಕೊಠಡಿಯಲ್ಲಿ 2 ಇವಿಎಂ ಟೇಬಲ್ ಹಾಗೂ ಒಂದು ಅಂಚೆ ಮತಗಳ ಎಣಿಕೆ ಟೇಬಲ್ ವ್ಯವಸ್ಥೆಗೊಳಿಸಲಾಗಿದ್ದು, ಪ್ರತಿ ಕೊಠಡಿಗೆ ಓರ್ವ ಚುನಾವಣಾಧಿಕಾರಿ, ಮೂವರು ಎಣಿಕೆ ಮೇಲ್ವಿಚಾರಕರು ಇರಲಿದ್ದಾರೆ. ಜೊತೆಗೆ 6 ಜನ ಎಣಿಕೆ ಸಹಾಯಕರು, 3 ಸಹಾಯಕ ಸಿಬ್ಬಂದಿ, ಟ್ಯಾಬ್ಯುಲೇಷನ್ ಸಿಬ್ಬಂದಿ, ಓರ್ವ ಅಭಿಯಂತರ, ಇವಿಎಂಗಳ ಸಾಗಣೆಗೆ ಮೂವರು ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. 

ಕಲಬುರಗಿ
ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಲಬುರಗಿ ಮಹಾನಗರ ಪಾಲಿಕೆಗೆ 2013ರಲ್ಲಿ ನಡೆದ ನಂತರ 2018ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ವಾರ್ಡ್ ವಿಂಗಡನೆ ಹಾಗು ಕೊರೊನಾ ಕಾರಣ ಮೂರು ವರ್ಷಗಳು ತಡವಾಗಿ 2021ರಲ್ಲಿ ಇದೀಗ ನಡೆದಿದೆ. ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಕೋಟೆ ಛಿದ್ರ ಮಾಡುವ ತವಕದಲ್ಲಿದ್ದಾರೆ. ಕೈ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್ ನೇತೃತ್ವದಲ್ಲಿ ಕಣಕ್ಕಿಳಿಸಿದೆ. ಇತ್ತ ಕಳೆದ ಬಾರಿ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಇಲಿಯಾಸ್ ಸೇಟ್ ಬಾಗವಾನ್ ಕೆಲ ತಿಂಗಳ ಹಿಂದೆ ಎಐಎಂಐಎಂ ಪಕ್ಷ ಸೇರಿದ್ದಾರೆ.

ಕಲಬುರಗಿಯಲ್ಲಿ ಒಟ್ಟು 55 ವಾರ್ಡ್ಗಳಿದ್ದು, ಅಧಿಕಾರದ ಗದ್ದುಗೆ ಏರಲು 28 ಸ್ಥಾನಗಳ ಅವಶ್ಯಕತೆ ಇದೆ. ಇಲ್ಲಿ ಒಟ್ಟು  276 ಅಭ್ಯರ್ಥಿಗಳು (ಕಾಂಗ್ರೆಸ್ 55, ಬಿಜೆಪಿ 47, ಜೆಡಿಎಸ್ 45, ಇತರೆ 129) ಸ್ಪರ್ಧಿಸಿದ್ದು, ಮತದಾನದ ದಿನದಂದು ಶೇ.48ರಷ್ಟು ಮತದಾನವಾಗಿತ್ತು. 

ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಗೆ ಸೆ. 3ರಂದು ನಡೆದಿದ್ದ ಚುನಾವಣೆಗೆ ಇಲ್ಲಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಸೋಮವಾರ ಮತ ಎಣಿಕೆ ಆರಂಭವಾಗಲು ಕ್ಷಣಗಣನೆ ಶುರುವಾಗಿದೆ. 82 ವಾರ್ಡ್‌ಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 420 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಎಲ್ಲಾ ವಾರ್ಡ್‌ಗಳಲ್ಲಿ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಆಮ್‌ ಆದ್ಮಿ ಪಕ್ಷದಿಂದ 41, ಜೆಡಿಎಸ್‌ನಿಂದ 49 ವಾರ್ಡ್‌ಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ. ಮತ ಎಣಿಕೆ ಪ್ರಕ್ರಿಯೆ ಸುಲಭವಾಗಿ ನಡೆಸಲು 140 ಜನ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಪ್ರತಿ ಚುನಾವಣಾಧಿಕಾರಿಗೆ ಮೂರು ಟೇಬಲ್‌ಗಳನ್ನು ಕೊಡಲಾಗಿದೆ.

ಕಡಿಮೆ ಮತದಾನ
ಹುಬ್ಬಳ್ಳಿ-ಧಾರವಾಡ ಪಾಲಿಕೆ ಚುನಾವಣೆಯಲ್ಲಿ ‌ಶೇ 53.81ರಷ್ಟು ಮಾತ್ರ ಮತದಾನವಾಗಿದ್ದು, ಒಟ್ಟು 8,18,096 ಮತದಾರರಲ್ಲಿ 4,40,251 ಮತದಾರರು ಹಕ್ಕು ಚಲಾಯಿಸಿದ್ದರು. ಇದಕ್ಕಾಗಿ 842 ಮತಯಂತ್ರಗಳನ್ನು ಸ್ಥಾಪಿಸಲಾಗಿತ್ತು. ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ, ಪುರುಷರೇ ಹೆಚ್ಚು ಮತದಾನದ ಹಕ್ಕು ಚಲಾಯಿಸಿದ್ದಾರೆ. 
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com