ಆರೋಪಿಗಳಿಂದ ವಶಕ್ಕೆ ಪಡೆದಿರುವ ಮಾರಕಾಸ್ತ್ರಗಳು
ಆರೋಪಿಗಳಿಂದ ವಶಕ್ಕೆ ಪಡೆದಿರುವ ಮಾರಕಾಸ್ತ್ರಗಳು

ಕ್ಯಾಮ್ಸ್ ಕಾರ್ಯದರ್ಶಿ ಕೊಲೆ ಯತ್ನ ಪ್ರಕರಣ; ಪ್ರಮುಖ ಆರೋಪಿ ಸೇರಿ 7 ಮಂದಿ ಬಂಧನ

ಕರ್ನಾಟಕ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಸೇರಿ ಒಟ್ಟು 7 ಮಂದಿಯನ್ನು ಜಾಲಹಳ್ಳಿ ಪೊಲೀಸರು ತಮಿಳುನಾಡು ಗಡಿ ಭಾಗದ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಬಂಧನಕ್ಕೊಳಪಡಿಸಿದ್ದಾರೆ. 
Published on

ಬೆಂಗಳೂರು; ಕರ್ನಾಟಕ ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲಾ ಆಡಳಿತ ಮಂಡಳಿಗಳ ಒಕ್ಕೂಟದ (ಕ್ಯಾಮ್ಸ್) ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರ ಕೊಲೆ ಯತ್ನ ಪ್ರಕರಣದ ಪ್ರಮುಖ ಆರೋಪಿ ಸೇರಿ ಒಟ್ಟು 7 ಮಂದಿಯನ್ನು ಜಾಲಹಳ್ಳಿ ಪೊಲೀಸರು ತಮಿಳುನಾಡು ಗಡಿ ಭಾಗದ ಸತ್ಯಮಂಗಲ ಅರಣ್ಯ ಪ್ರದೇಶದಲ್ಲಿ ಬಂಧನಕ್ಕೊಳಪಡಿಸಿದ್ದಾರೆ. 

ಆರ್'ಟಿಇ ಕಾರ್ಯಕರ್ತ ಹಾಗೂ ರಾಜ್ಯ ವಿದ್ಯಾರ್ಥಿ-ಪೋಷಕರ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರವಿ ಅಲಿಯಾಸ್ ಲಗ್ಗೆರೆ ರವಿ ಹಾಗೂ ಆತನ ಸಹಚರರಾದ ಚಿನ್ನ ಅರಸು, ಗಣೇಶ, ಮನೋಹರ್ ಅಲಿಯಾಸ್ ಮನು, ವಿಜಯ ಕುಮಾರ್, ಶ್ರೀನಿವಾಸ್ ಅಲಿಯಾಸ್ ಸೀನ ಹಾಗೂ ಸುಭಾಷ್ ಅಲಿಯಾಸ್ ಕರಿಯ ಬಂಧಿತರಾಗಿದ್ದು, ಆರೋಪಿಗಳಿಂದ 3 ಪಿಸ್ತೂಲ್, 3 ಜೀವಂತ ಗುಂಡುಗಳು, ಖಾಲಿ ಮ್ಯಾಗ್ಜಿನ್ ಗಳು, ಮೊಬೈಲ್ ಹಾಗೂ ಕಾರು ಸೇರಿದಂತೆ ಮಾರಕಾಸ್ತ್ರಗಳ್ನನು ಜಪ್ತಿ ಮಾಡಲಾಗಿದೆ. 

ಖಾಸಗಿ ಶಾಲೆಗಳ ಮಾಲೀಕರಿಂದ ಹಣ ವಸೂಲಿ ವಿಚಾರವಾಗಿ ರವಿ ವಿರುದ್ಧ ಶಶಿಕುಮಾರ್ ಗಲಾಟೆ ಮಾಡಿದ್ದರು. ಇದರಿಂದ ಕೆರಳಿದ ರವಿ, ಕೊನೆಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಶಿಕುಮಾರ್ ರನ್ನು ಪದಚ್ಯುತಿಗೊಳಿಸಿ ತಾನು ಆ ಸ್ಥಾನವನ್ನು ಅಲಂಕರಿಸಲು ಯತ್ನಿಸಿದ್ದ. ಆದರೆ, ಇದಕ್ಕೆ ಆರೋಪಿಗೆ ನಿರೀಕ್ಷಿತ ಬೆಂಬಲ ಸಿಗಲಿಲ್ಲ. ಈ ಬೆಳವಣಿಗೆಯಿಂದ ಮತ್ತಷ್ಟು ಕೆರಳಿದ ಆತ, ತನ್ನ ವ್ಯವಹಾರಗಳಿಗೆ ಅಡ್ಡಿಯಾಗಿರುವ ಶಶಿಕುಮಾರ್ ಹತ್ಯೆಗೆ ನಿರ್ಧರಿಸಿದ್ದ ಎಂದು ಹೇಳಲಾಗುತ್ತಿದೆ. 

ಇದರಂತೆ ಹತ್ಯೆಗೆ ಸಂಚು ರೂಪಿಸಿದ್ದ ಆರೋಪಿ, ಜಾಲಹಳ್ಳಿಯ ಮುತ್ಯಾಲ ನಗರದಲ್ಲಿ ತನ್ನ ಸಹಚರರಿಗೆ ಶಶಿಕುಮಾರ್ ಮನೆ ಪಕ್ಕದಲ್ಲೇ ಆತ ಬಾಡಿಗೆ ಮನೆ ಮಾಡಿಕೊಟ್ಟಿದ್ದ. ಪೂರ್ವ ಯೋಜಿತ ಸಂಚಿನಂತೆ ಜು.9 ರಂದು ಶಶಿಕುಮಾರ್ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಕೃತ್ಯ ಎಸಗಿದ ಬಳಿಕ ಬಂಧನ ಭೀತಿಯಿಂದ ರವಿ ಕಾಡು ಸೇರಿದ್ದ. ಬೆಂಗಳೂರಿನಲ್ಲಿ ಅಪರಾಧ ಕೃತ್ಯ ಎಸಗಿದ ಬಳಿಕ ಪೊಲೀಸರಿಗೆ ಸಿಗದೆ ಸತ್ಯಮಂಗಲ ಕಾಡಿನಲ್ಲಿ ರವಿ ಅಡಗಿಕೊಳ್ಳುತ್ತಿದ್ದ. 

ಅಂತೆಯೇ ಈ ಬಾರಿ ಕೂಡ ಕಾಡಿನಲ್ಲೇ ಆತ ತಲೆಮರೆಸಿಕೊಂಡಿರುವುದು ಖಚಿತವಾಯಿತು. ಈ ಸುಳಿವು ಆಧರಿಸಿ ಇನ್ಸ್ ಪೆಕ್ಟರ್ ಎ.ಗುರುಪ್ರಸಾದ್, ಪಿಎಸ್ಐಗಳಾದ ಲೇಪಾಕ್ಷ ಮೂರ್ತಿ ಹಾಗೂ ರೂಪಾ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Google Preferred source

Advertisement

X
Kannada Prabha
www.kannadaprabha.com