ಮೇಲ್ಮನೆಯಲ್ಲೂ ಮೈಸೂರು ಅತ್ಯಾಚಾರ ಪ್ರಕರಣ ಸದ್ದು; ‘ಕೇಸ್ ಮುಚ್ಚಿಹಾಕುವ ಹುನ್ನಾರವಿತ್ತೇ?'

ವ್ಯಾಪಕ ಸುದ್ದಿಯಾದ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಘಟನೆ ಮೇಲ್ಮನೆಯಲ್ಲಿ ಬುಧವಾರ ಚರ್ಚೆಯಾಗಿದೆ. 
ಕರ್ನಾಟಕ ವಿಧಾನ ಪರಿಷತ್
ಕರ್ನಾಟಕ ವಿಧಾನ ಪರಿಷತ್

ಬೆಂಗಳೂರು: ವ್ಯಾಪಕ ಸುದ್ದಿಯಾದ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ನಡೆದ ಘಟನೆ ಮೇಲ್ಮನೆಯಲ್ಲಿ ಬುಧವಾರ ಚರ್ಚೆಯಾಗಿದೆ. 

ಅತ್ಯಾಚಾರ ಪ್ರಕರಣ ಸಂಬಂಧ ನಿಯಮ 68ರ ಅಡಿ ನೀಡಲಾದ ನಿಲುವಳಿ ಸೂಚನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಸದಸ್ಯರಾದ ಭಾರತಿ ಶೆಟ್ಟಿ, ತೇಜಸ್ವಿನಿ ರಮೇಶ್ ಬಳಿಕ ಮಾತನಾಡಿದ ವಿಧಾನ ಪರಿಷತ್​ ಕಾಂಗ್ರೆಸ್ ಸಚೇತಕ ನಾರಾಯಣಸ್ವಾಮಿ, ಶೃಂಗೇರಿಯಲ್ಲಿ 15 ವರ್ಷ ವಯಸ್ಸಿನ ಬಾಲಕಿಯ ಮೇಲೆ 4 ತಿಂಗಳು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ, ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ನಡೆದ ಅತ್ಯಾಚಾರ ಪ್ರಕರಣ ಪ್ರಸ್ತಾಪಿಸಿದರು.

ಪ್ರಕರಣವನ್ನು ದಾಖಲಿಸಿಕೊಂಡಿರುವ ರೀತಿ ರಿವಾಜು ಗಮನಿಸಿದರೆ ಪೊಲೀಸರು ಹಾಗೂ ವೈದ್ಯರ ನಡೆ ಶಂಕೆ ಹುಟ್ಟಿಸುತ್ತದೆ. ಯುಗ ಯುಗದಿಂದಲೂ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಿದೆ. ನಿರ್ಭಯಾ ಪ್ರಕರಣದಂತಹ ಸಮಾಜ ತಲೆತಗ್ಗಿಸುವ ಘಟನೆ ಜರುಗುತ್ತಿವೆ ಎಂದರು. ಸಂತ್ರಸ್ತೆಗೆ ರಕ್ತಸ್ರಾವವಾಗುತ್ತಿದ್ದರೂ ವೈದ್ಯರು ಕೇವಲ ಹಲ್ಲೆಯಾಗಿರುವುದಾಗಿ ಎಂಎಲ್ ಸಿ ಕೇಸ್ ದಾಖಲಿಸಿದರು. ಪೊಲೀಸರು ಎಫ್ ಐಆರ್ ದಾಖಲಿಸುವಲ್ಲಿ 15 ಗಂಟೆ ವಿಳಂಬ ನೀತಿ ಅನುಸರಿಸಿದರು. ಇದಲ್ಲದೆ, ವಿದ್ಯಾರ್ಥಿನಿಯು ರಾತ್ರಿ 7 ಗಂಟೆಯಲ್ಲಿ ವಾಯುವಿಹಾರಕ್ಕೆ ಹೋಗಿದ್ದೇಕೆ ಎಂದು ಸ್ವತಃ ಗೃಹ ಮಂತ್ರಿಗಳು ಹೇಳಿಕೆ ನೀಡಿದ್ದು ತಪ್ಪು ಎಂದು ಹೇಳಿದರು.

ಅತ್ಯಾಚಾರಿಗಳಿಗೆ ಶಿಕ್ಷೆ ತಪ್ಪಲು ಹಾಗೂ ನಿಧಾನವಾಗಲು ವೈದ್ಯರು ಹಾಗೂ ಪೊಲೀಸರ ಇಂತಹ ನಡೆ ಕಾರಣವಾಗುತ್ತದೆ. ಅತ್ಯಾಚರ ಪ್ರಕರಣವಾದರೂ, ಹಲ್ಲೆ ಪ್ರಕರಣ ದಾಖಲಾಗಿದ್ದೇಕೆ? ಸಂತ್ರಸ್ತೆಯ ಹೇಳಿಕೆ ಪಡೆಯಲು ಮುಂದಾಗಲಿಲ್ಲವೇಕೆ, ಪ್ರಯತ್ನಿಸಲಿಲ್ಲವೇಕೆ? ಸುಪ್ರೀಂಕೋರ್ಟ್ ಮಾರ್ಗದರ್ಶನವನ್ನು ಅನುಸರಿಸಲಿಲ್ಲವೇಕೆ ಎಂಬುದರ ಬಗ್ಗೆ ತನಿಖೆ ನಡೆಯಬೇಕು ಎಂದು ನಾರಾಯಣಸ್ವಾಮಿ ಒತ್ತಾಯಿಸಿದರು.

ಸಂಜೆಯಾದ ಮೇಲೆ ಹೆಣ್ಣುಮಕ್ಕಳು ಮನೆ ಸೇರಿಕೊಳ್ಳಬೇಕೇ?
ಸ್ವತಂತ್ರವಾಗಿ ಓಡಾಡಿಕೊಂಡಿರಬೇಕಾದ ಸ್ತ್ರೀಯರು ಸಂಜೆಯಾದ ಮೇಲೆ ಮನೆ ಸೇರಿ ಬಾಗಿಲು ಹಾಕಿಕೊಳ್ಳಬೇಕೇ ಎಂದು ಗೃಹ ಸಚಿವರು ಹೇಳಿಕೆ ನೀಡಿದ್ದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಎಸ್ ಎನ್ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತ್ಯಾಚಾರ ಪ್ರಕರಣ ಸಂಬಂಧ ನಿಯಮ 68ರ ಅಡಿ ನೀಡಲಾದ ನಿಲುವಳಿ ಸೂಚನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಅವರು ಮಾತನಾಡಿ, ಗೃಹ ಸಚಿವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಿದ ನಂತರ ಮೈಸೂರು ವಿವಿ ಕುಲಪತಿ, ಉಪ ಕುಲಪತಿಗಳೂ ಸಹ 7 ಗಂಟೆ ನಂತರ ವಿದ್ಯಾರ್ಥಿನಿಯರು ಕ್ಯಾಂಪಸ್ ನ ಹೊರಗೆ ಓಡಾಡದಂತೆ ಸೂಚಿಸುತ್ತಾರೆ. ಹಾಗಾದರೆ ರಕ್ಷಣೆ, ಭದ್ರತೆ ನೀಡುವ ಸಾಮರ್ಥ್ಯ ವಿವಿಗೆ, ಸರ್ಕಾರಕ್ಕೆ ಇಲ್ಲವೇ ಎಂದರು.

ಮೈಸೂರು ಅತ್ಯಾಚಾರ ಪ್ರಕರಣ ನಡೆದ ನಂತರ ಸ್ಥಳ ಪರಿಶೀಲನೆ ನಡೆಸದ ಗೃಹ ಸಚಿವರು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಹೋಗುತ್ತಾರೆ. ದೇವಿ ದರ್ಶನ ಪಡೆಯುವುದು ತಪ್ಪಲ್ಲ. ಆದರೆ ಘಟನೆಯ ಗಂಭೀರತೆ ಸಚಿವರಿಗೆ ಇರಲಿಲ್ಲ. ತಿಂಡಿ, ಊಟದ ನಂತರ ಸ್ಥಳ ಪರಿಶೀಲನೆಗೆ ಹೋದದ್ದು ಎಷ್ಟರಮಟ್ಟಿಗೆ ಸರಿ ಎಂದರು.

ಕೇರಳ, ತಮಿಳುನಾಡು ವಿದ್ಯಾರ್ಥಿಗಳು ಈ ಪ್ರಕರಣದಲ್ಲಿ ಒಳಗೊಂಡಿದ್ದಾರೆ ಎಂಬ ವಿಷಯ ಹೊರಬಂದ ಬೆನ್ನಲ್ಲೇ ಎಪಿಎಂಸಿ ಮಾರುಕಟ್ಟೆಗೆ ತರಕಾರಿ ತರುತ್ತಿದ್ದವರು ಬಂಧಿತರಾದರು. ಹಾಗಾದರೆ ಬಂಧಿತರಾದವರು ನಿಜವಾದ ಅತ್ಯಾಚಾರಿಗಳು ಎಂದು ನಂಬುವುದು ಹೇಗೆ? ಸಂತ್ರಸ್ತೆ ಈ ಅತ್ಯಾಚಾರಿಗಳನ್ನು ಗುರುತಿಸಬೇಕಿತ್ತಲ್ಲವೇ. ರಾಜ್ಯದ ಮಹಿಳೆಯರ ರಕ್ಷಣೆಗೆ ಬದ್ಧ ಎಂದು ಗೃಹ ಸಚಿವರು ಆಶ್ವಾಸನೆ ನೀಡಲಿಲ್ಲ. ಆಡಳಿತ ಪಕ್ಷ ರಾಜಕಾರಣಿಗಳು ದನಿಯೆತ್ತಲಿಲ್ಲ ಎಂದು ಖಂಡಿಸಿದರು. ಪೊಲೀಸರು ಚಾರ್ಚ್ ಶೀಟ್ ಹಾಕುವಾಗ ಕಾನೂನಿನ ಚೌಕಟ್ಟಿನಿಂದ ತಪ್ಪಿಸಿಕೊಳ್ಳದಂತಿರಬೇಕು. ಸಂತ್ರಸ್ತರಿಗೆ ನ್ಯಾಯ ಸಿಗಬೇಕು ಎಂದರು.

‘ಮೈಸೂರು ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಹುನ್ನಾರವಿತ್ತೇ?’
ಇದೇ ವೇಳೆ ಸಾಂಸ್ಕೃತಿಕ ನಗರಿ ಎಂದು ಕರೆಸಿಕೊಳ್ಳುವ ಮೈಸೂರಿನಲ್ಲಿ ಇತ್ತೀಚೆಗೆ ನಡೆದ ಅತ್ಯಾಚಾರ ಪ್ರಕರಣ ಮುಚ್ಚಿಹಾಕುವ ಹುನ್ನಾರ ನಡೆದಿದೆಯೇ ಎಂದು ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ. 'ಅತ್ಯಾಚಾರ ಪ್ರಕರಣ ಸಂಬಂಧ ನಿಯಮ 68ರ ಅಡಿ ನೀಡಲಾದ ನಿಲುವಳಿ ಸೂಚನೆಗೆ ಸಂಬಂಧಿಸಿದ ಚರ್ಚೆಯಲ್ಲಿ ಅವರು ಮಾತನಾಡಿ, ಮೈಸೂರಿನಲ್ಲಿ ನಡೆದ ಹೀನಾಯ ಪ್ರಕರಣವನ್ನು ಮುಚ್ಚಿ ಹಾಕುವ ಹುನ್ನಾರವಿತ್ತೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬಂದಿದೆ. 15 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ಹಾಗೂ ದೇಶ, ವಿದೇಶಗಳ ಪ್ರವಾಸಿಗರು ನಿತ್ಯ ಭೇಟಿ ನೀಡುವ ಮೈಸೂರಿನಲ್ಲಿ ಪೊಲೀಸ್ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಬೇಕು. ಸಂತ್ರಸ್ತೆಯ ಹೇಳಿಕೆ ಪಡೆಯಲಾಗಿದೆ ಎಂಬ ವಿಚಾರವನ್ನು ಸ್ವಾಗತಿಸುವುದಾಗಿ ಹೇಳಿದ ಅವರು, ಮೈಸೂರು ಮಾತ್ರವಲ್ಲದೆ ರಾಜ್ಯದ ಬಹುತೇಕ ಪ್ರದೇಶಗಳಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಆರೋಪಿಗಳ ವಿಚಾರಣೆ ನಡೆಸಿ, ಅಪರಾಧಿಗಳಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಮೈಸೂರು ಅತ್ಯಾಚಾರ ಪ್ರಕರಣಕ್ಕೆ ಪೊಲೀಸ್ ವ್ಯವಸ್ಥೆಯ ವೈಫಲ್ಯವೇ ಕಾರಣ. ಈ ಘಟನೆ ಬಗ್ಗೆ ಗೃಹ ಸಚಿವರು ನೈತಿಕ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದರು. 
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com