ಪ್ರೊ.ವೆಂಕಟಸುಬ್ಬಯ್ಯ ನಿಧನಕ್ಕೆ ಗಣ್ಯರ ಸಂತಾಪ

ಇಂದು ನಿಧನರಾದ ಕನ್ನಡದ ನಿಘಂಟು ತಜ್ಞರೆಂದೇ ಖ್ಯಾತಿ ಪಡೆದಿದ್ದ ಪ್ರೊ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಪ್ರೊ. ಜಿ. ವೆಂಕಟಸುಬ್ಬಯ್ಯ
ಪ್ರೊ. ಜಿ. ವೆಂಕಟಸುಬ್ಬಯ್ಯ

ಬೆಂಗಳೂರು: ಇಂದು ನಿಧನರಾದ ಕನ್ನಡದ ನಿಘಂಟು ತಜ್ಞರೆಂದೇ ಖ್ಯಾತಿ ಪಡೆದಿದ್ದ ಪ್ರೊ.ವೆಂಕಟಸುಬ್ಬಯ್ಯ ಅವರ ನಿಧನಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

ಈ ಕುರಿತಂತೆ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್ ಡಿ ಕುಮಾರ ಸ್ವಾಮಿ ಅವರು, 'ನಾಡಿನ ಖ್ಯಾತ ಸಂಶೋಧಕ, ನಿಘಂಟು ತಜ್ಞ ಫ್ರೊ. ಜಿ. ವೆಂಕಟಸುಬ್ಬಯ್ಯ ಅವರ  ನಿಧನಕ್ಕೆ  ತೀವ್ರ ಕಂಬನಿ  ಮಿಡಿಯುತ್ತೇನೆ. ಕನ್ನಡ ಸಾಹಿತ್ಯ ಪರಿಷತ್ತಿನ ಕನ್ನಡ-ಕನ್ನಡ ನಿಘಂಟುವಿನ ಪ್ರಧಾನ ಸಂಪಾದಕರಾಗಿ ಸೇವೆ ಸಲ್ಲಿಕೆ.  ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಅಖಿಲ ಕರ್ನಾಟಕ ವ್ಯಾಪ್ತಿಯನ್ನು ತಂದುಕೊಟ್ಟ ಹಿರಿಮೆ ಶ್ರೀಯುತರದು. ನಾಡು-ನುಡಿಗೆ ಸಲ್ಲಿಸಿದ ಸೇವೆ ಅನನ್ಯವಾದದ್ದು. ನಾಡು-ನುಡಿಯ ಶ್ರೇಷ್ಠ ವಿದ್ವಾಂಸಕನನ್ನು ರಾಜ್ಯ ಕಳೆದುಕೊಂಡಂತಾಗಿದೆ. ಅವರ ಕುಟುಂಬ ವರ್ಗದವರಿಗೆ ಅವರ  ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಅಂತೆಯೇ ಬಿಜೆಪಿ ನಾಯಕ ಸಿಟಿ ರವಿ ಅವರು ಕೂಡ ಸಂತಾಪ ಸೂಚಿಸಿದ್ದು, 'ನಡೆದಾಡುವ ನಿಘಂಟು, ಶಬ್ದ ಬ್ರಹ್ಮ ಎಂದು ಪ್ರಖ್ಯಾತರಾಗಿದ್ದ, ಕನ್ನಡ ಭಾಷೆಯ ಏಳಿಗೆಗಾಗಿ ದುಡಿದ ಮಹನೀಯರಲ್ಲಿ ಪ್ರಮುಖರಾದ, ಶತಾಯುಷಿ, ನಾಡೋಜ ಪ್ರೊ. ಜಿ ವೆಂಕಟಸುಬ್ಬಯ್ಯನವರು ನಮ್ಮನ್ನು ಅಗಲಿದ ಆಘಾತಕಾರಿ ಸುದ್ದಿ  ತಲುಪಿದೆ. ಹಿರಿಯರು, ಮಾರ್ಗದರ್ಶಕರು ಆದ ಶ್ರೀಯುತರು ಕನ್ನಡದ ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಭಾಷಾ ಶಾಸ್ತ್ರ, ಸಂಶೋಧನೆ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಅವರ ಅಗಲುವಿಕೆಯಿಂದ  ಕನ್ನಡ ಸಾರಸ್ವತ ಲೋಕದಲ್ಲೊಂದು ಶೂನ್ಯ ಸೃಷ್ಟಿಯಾಗಿದೆ. ಅವರಿಂದು ಇಹಕಾಯವನ್ನು ತ್ಯಜಿಸಿದರೂ ಅವರ ಬರವಣಿಗೆಯ ಮೂಲಕ, ಕನ್ನಡ ಭಾಷೆಗೆ ಅವರು ನೀಡಿದ ಕೊಡುಗೆಗಳ ಮೂಲಕ ನಮ್ಮೆಲ್ಲರ ಮನದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತಾರೆ.  ಅಗಲಿದ ಅವರಾತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ  ಎಂಬ  ಪ್ರಾರ್ಥನೆ ನಮ್ಮೆಲ್ಲರದಾಗಲಿ ಎಂದು ಟ್ವೀಟ್ ಮಾಡಿದ್ದಾರೆ.

ಡಿಸಿಎಂ ಅಶ್ವಥ್ ನಾರಾಯಣ ಅವರು ಕೂಡ ಟ್ವೀಟ್ ಮೂಲಕ ಕಂಬನಿ ಮಿಡಿದಿದ್ದು, ಕನ್ನಡದ ವಿದ್ವಾಂಸ, ನಿಘಂಟು ತಜ್ಞ ನಾಡೋಜ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ ಅಗಲಿಕೆಯ ಸುದ್ದಿ ದುಃಖ ತಂದಿದೆ. ಅಕ್ಷರ ಲೋಕದ ಅಜಾತಶತ್ರು ಆಗಿದ್ದ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಈ ನೋವನ್ನು ಭರಿಸುವ ಶಕ್ತಿ  ಭಗವಂತನು ಕುಟುಂಬ-ಹಿತೈಷಿವರ್ಗಕ್ಕೆ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಅಂತೆಯೇ ಬಿಜೆಪಿ ಸಂಸದ ಪ್ರತಾಪ್ ಸಿಂಹಾ ಅವರು ಕೂಡ ಸಂತಾಪ ಸೂಚಿಸಿದ್ದು, ' ಭಾಷಾತಜ್ಞ, ಕನ್ನಡ ನಿಘಂಟು ತಜ್ಞ, ಬರಹಗಾರ, ಸಂಶೋಧಕ, ಶಿಕ್ಷಕ, ಚಿಂತಕ, ಪದ್ಮಶ್ರೀ ಪ್ರಶಸ್ತಿ ಪಡೆದ ಶತಾಯುಷಿ ಪ್ರೊ ಜಿ.ವೆಂಕಟಸುಬ್ಬಯ್ಯ  ಅವರು ನಮ್ಮನ್ನಗಲಿದ್ದಾರೆ. ಆ ಮಹಾನ್ ಚೇತನಕ್ಕೆ ಅನಂತ ನಮನಗಳು  ಎಂದು ಟ್ವೀಟ್ ಮಾಡಿದ್ದಾರೆ.

ಆರೋಗ್ಯ ಸಚಿವ ಕೆ ಸುಧಾಕರ್ ಅವರು ಟ್ವೀಟ್ ಮಾಡಿದ್ದು, 'ನಿಘಂಟು ಬ್ರಹ್ಮ, ಶಬ್ಧರ್ಷಿ, ನಾಡೋಜ, ಪದ್ಮಶ್ರೀ ಪ್ರೊ|| ಜಿ.ವೆಂಕಟಸುಬ್ಬಯ್ಯ ಅವರ ನಿಧನದಿಂದ ಕನ್ನಡ ಸಾರಸ್ವತ ಲೋಕ ಅನರ್ಘ್ಯ ರತ್ನವೊಂದನ್ನು ಕಳೆದುಕೊಂಡಿದೆ. ನಿಘಂಟುಶಾಸ್ತ್ರ, ಪ್ರಾಚೀನ ಸಾಹಿತ್ಯ ಅಧ್ಯಯನ, ಅನುವಾದ ಕ್ಷೇತ್ರಗಳಲ್ಲಿ ಅಪೂರ್ವ  ಸಾಧನೆ ಮಾಡಿರುವ ಶ್ರೀಯುತರು ಕನ್ನಡ ಭಾಷೆಯ ಸಿರಿವಂತಿಕೆವನ್ನು  ಶ್ರೀಮಂತಗೊಳಿಸಿದ್ದಾರೆ. ಶ್ರೀಯುತರ ಆತ್ಮಕ್ಕೆ ಸದ್ಗತಿ ಕರುಣಿಸಲಿ ಮತ್ತು ಅವರ ಕುಟುಂಬ ಸದಸ್ಯರಿಗೆ, ಅಸಂಖ್ಯಾತ ಶಿಷ್ಯಕೋಟಿಗೆ, ಅಭಿಮಾನಿ ಬಳಗಕ್ಕೆ ಈ ಅಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ  ಎಂದು ಹೇಳಿದ್ದಾರೆ.

ಸಚಿವ ಶ್ರೀರಾಮುಲು ಕೂಡ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದು, 'ಕನ್ನಡದ ನಿಘಂಟು ಲೋಕದ ದೊಡ್ಡ ನಂಟೊಂದು ಕಳಚಿದೆ. ನಿಘಂಟು ತಜ್ಞರು, ಸಂಶೋಧಕರು, ಬರಹಗಾರರಾದ ನಾಡೋಜ ಶ್ರೀ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರ ಅಗಲಿಕೆಯ ಸುದ್ದಿತಿಳಿದು ಮನಸ್ಸಿಗೆ ಘಾಸಿಯಾಗಿದೆ. ಅವರ ಕುಟುಂಬಸ್ಥರಿಗೆ  ದುಃಖ ಭರಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com