ಭೂ ಕಬಳಿಕೆಗೆ ನಕಲಿ ದಾವೆ: ಆಘಾತಕಾರಿ ವಿಚಾರವೆಂದ ಹೈಕೋರ್ಟ್

ವಿಚಾರಣಾ ನ್ಯಾಯಾಲಯದ ತೀರ್ಪುಗಳ ನಕಲು ಪ್ರತಿಗಳನ್ನು ಸೃಷ್ಟಿಸಿ ಭೂಕಬಳಿಕೆ ಪ್ರಕರಣದಲ್ಲಿ ವಕೀಲರು ಭಾಗಿಯಾಗಿರುವ ವಿಚಾರ ಆಘಾತಕಾರಿ ಎಂದು ಹೈಕೋರ್ಟ್​ ಮಂಗಳವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ವಿಚಾರಣಾ ನ್ಯಾಯಾಲಯದ ತೀರ್ಪುಗಳ ನಕಲು ಪ್ರತಿಗಳನ್ನು ಸೃಷ್ಟಿಸಿ ಭೂಕಬಳಿಕೆ ಪ್ರಕರಣದಲ್ಲಿ ವಕೀಲರು ಭಾಗಿಯಾಗಿರುವ ವಿಚಾರ ಆಘಾತಕಾರಿ ಎಂದು ಹೈಕೋರ್ಟ್​ ಮಂಗಳವಾರ ಹೇಳಿದೆ.

ವಾರಸುದಾರರು ಉಪಯೋಗಿಸದ ಖಾಲಿ ಜಾಗವನ್ನು ಕೊಳ್ಳೆ ಹೊಡೆಯಲು ನಕಲಿ ಕಕ್ಷಿದಾರ–ಪ್ರತಿವಾದಿಗಳನ್ನು ಸೃಷ್ಟಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಲಪಟಾಯಿಸುತ್ತಿದ್ದ ಪ್ರಕರಣ ಸಂಬಂಧ ಶಾ ಹರಿಲಾಲ್ ಬಿಕಾಭಾಯಿ ಸಂಸ್ಥೆ ಸಲ್ಲಿಸಿರುವ ತಕರಾರು ಅರ್ಜಿಯನ್ನು ಪಿಐಎಲ್ ಆಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ಹಾಗೂ ನ್ಯಾ.ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠ ಪರಿಗಣಿಸಿತು.

ಬಳಿಕ ಈ ಪ್ರಕರಣದಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮತ್ತು ಬೆಂಗಳೂರು ವಕೀಲರ ಸಂಘವನ್ನು ಪಾರ್ಟಿಗಳಾಗಿ ಒಳಗೊಳ್ಳುವಂತೆ ನಿರ್ದೇಶನ ನೀಡಿದೆ.

ಮೋಸದ ಮಾರ್ಗದಿಂದ ಆಸ್ತಿ ಹಕ್ಕಿನ ರಾಜಿ ಡಿಕ್ರಿ ಪಡೆಯುತ್ತಿದ್ದ ಬಗ್ಗೆ ತನಿಖೆ ನಡೆಸಲು ಸಿಐಡಿಗೆ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಏಕ ಸದಸ್ಯ ಪೀಠ 2020 ನವೆಂಬರ್ 4 ರಂದು ಆದೇಶ ನೀಡಿತ್ತು. ಈ ಸಂಬಂಧ ಸಿಐಡಿ ನಿನ್ನೆ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.

ತನಿಖೆಯಲ್ಲಿ ಈ ರೀತಿಯ 100ಕ್ಕೂ ಹೆಚ್ಚು ಪ್ರಕರಣಗಳನ್ನು ಸಿಐಡಿ ಅಧಿಕಾರಿಗಳು ಪತ್ತೆ ಹಚ್ಚಿದ್ದು, ಪ್ರಕರಣದ ಅಗಾಧತೆ ಪರಿಗಣಿಸಿದ ಏಕ ಸದಸ್ಯ ಪೀಠ, ಅರ್ಜಿಯನ್ನು ಪಿಐಎಲ್‌(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಆಗಿ ಪರಿವರ್ತಿಸಿ ವಿಭಾಗೀಯ ಪೀಠಕ್ಕೆ ಸಲ್ಲಿಸುವಂತೆ ಸೂಚಿಸಿತು.

ಸಿಐಡಿ ತನಿಖಾ ವರದಿಯನ್ನು ನೋಡಿದರೆ ವಕೀಲರು ಮತ್ತು ನೋಟರಿಗಳು ಭಾಗಿಯಾಗಿದ್ದಾರೆ ಎಂಬುದನ್ನು ತಳ್ಳಿಹಾಕಲು ಆಗುವುದಿಲ್ಲ. ಈ ರೀತಿಯ ವಂಚನೆ ಮತ್ತು ಕಿಡಿಗೇಡಿತನ ತಡೆಗಟ್ಟಲು ವಕೀಲರ ಪರಿಷತ್ತಿನ ಪಾತ್ರ ಅಗತ್ಯವಿದೆ’ ಎಂದು ತಿಳಿಸಿದ ಪೀಠ, ವಕೀಲರ ಸಂಸ್ಥೆಗಳನ್ನೂ ಅರ್ಜಿಯಲ್ಲಿ ಒಳಗೊಳ್ಳುವಂತೆ ಅರ್ಜಿದಾರರಿಗೆ ಸೂಚನೆ ನೀಡಿತು. ಇದೇ ವೇಳೆ ಸಿಐಡಿ ಕೇಳುತ್ತಿರುವ ಎಲ್ಲಾ ದಾಖಲೆಗಳನ್ನು ಕಂದಾಯ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆ, ವಕೀಲರ ಸಂಸ್ಥೆಗಳ ಕಚೇರಿಗಳು ಒದಗಿಸಬೇಕು ಎಂದು ನಿರ್ದೇಶನ ನೀಡಿತು.

ಯಶವಂತಪುರ ಹಾಗೂ ಹಲಸೂರುಗೇಟ್ ಪೊಲೀಸ್ ಠಾಣೆ ಪ್ರಕರಣಗಳನ್ನು ಕ್ರೋಢೀಕರಿಸುವ ಸಂಬಂಧ ತನಿಖಾಧಿಕಾರಿ ಸಲ್ಲಿಸಿರುವ ಮನವಿಯನ್ನು 1ನೇ ಎಸಿಎಂಎಂ ನ್ಯಾಯಾಲಯ ತ್ವರಿತವಾಗಿ ಪರಿಗಣಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಣ್ಣ ವ್ಯಾಜ್ಯಗಳ ನ್ಯಾಯಾಲಯಕ್ಕೆ ಕಂದಾಯ ಅಧಿಕಾರಿಗಳು ಸಲ್ಲಿಸಬೇಕು ಎಂದು ನಿರ್ದೇಶಿಸಿತು. ಈ ಪ್ರಕರಣದಲ್ಲಿ ‌ನ್ಯಾಯಾಲಯಕ್ಕೆ ನೆರವು ನೀಡಲು ವಕೀಲ ಶ್ರೀಧರ ಪ್ರಭು ಅವರನ್ನು ಅಮೈಕಸ್ ಕ್ಯೂರಿ ಆಗಿ ನೇಮಿಸಿತು. ಬಳಿಕ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ‌ ಮುಂದೂಡಿತು.

ಖಾಲಿ ನಿವೇಶನಗಳನ್ನು ಗುರುತಿಸಿ, ಅವುಗಳಿಗೆ ನಕಲಿ ಕಕ್ಷಿದಾರರು ಹಾಗೂ ಪ್ರತಿವಾದಿಗಳನ್ನು ಸೃಷ್ಟಿಸಿ ಕೇಸ್ ಹಾಕಿಸುತ್ತಿದ್ದ ವಕೀಲರು, ನಂತರ ರಾಜಿ ಡಿಕ್ರಿ ಪಡೆದು ಆಸ್ತಿಯನ್ನು ಕಬಳಿಸುತ್ತಿದ್ದರು ಎಂದು ಸಿಐಡಿ ಪೊಲೀಸರು ಆರೋಪಿಸಿದ್ದಾರೆ. 

ಶಾ ಹರಿಲಾಲ್ ಬಿಕಾಭಾಯಿ ಸಂಸ್ಥೆ ನೀಡಿದ್ದ ದೂರಿನ ತನಿಖೆ ನಡೆಸಿದ್ದ ಪೊಲೀಸರು ನಾಲ್ವರು ವಕೀಲರು ಸೇರಿ ಹಲವರನ್ನು ಬಂಧಿಸಿದ್ದಾರೆ. ಜತೆಗೆ ಆರೋಪಿತರು ಭೂಗಳ್ಳತನದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ ಶಾ ಸಂಸ್ಥೆ ಸಲ್ಲಿಸಿದ್ದ ತಕರಾರು ಅರ್ಜಿಯನ್ನು ಹೈಕೋರ್ಟ್ ಪಿಐಎಲ್ ಆಗಿ ಪರಿಗಣಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com