ಆಗಸ್ಟ್ 23 ರಿಂದ ಶಾಲೆ ಆರಂಭ; ಇನ್ನೂ ಮುದ್ರಣಗೊಳ್ಳದ ಪುಸ್ತಕಗಳು, ಸಂಕಷ್ಟದಲ್ಲಿ ವಿದ್ಯಾರ್ಥಿಗಳು!

ರಾಜ್ಯದಲ್ಲಿ ಆ. 23 ರಿಂದ 9, 10ನೇ ತರಗತಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಪುಸ್ತಗಳ ಮುದ್ರಣಗಳು ವಿಳಂಬವಾಗುತ್ತಿದ್ದು, ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳುಗಳು ಕಳೆದರೂ ಇನ್ನೂ ಪುಸ್ತಕಗಳು ಕೈ ಸೇರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ಆ. 23 ರಿಂದ 9, 10ನೇ ತರಗತಿ ಶಾಲೆ ಆರಂಭಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಆದರೆ, ಕೋವಿಡ್ ಹಿನ್ನೆಲೆಯಲ್ಲಿ ಪಠ್ಯಪುಸ್ತಗಳ ಮುದ್ರಣಗಳು ವಿಳಂಬವಾಗುತ್ತಿದ್ದು, ಶೈಕ್ಷಣಿಕ ವರ್ಷ ಆರಂಭವಾಗಿ ತಿಂಗಳುಗಳು ಕಳೆದರೂ ಇನ್ನೂ ಪುಸ್ತಕಗಳು ಕೈ ಸೇರದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಸಾಮಾನ್ಯವಾಗಿ ಶೈಕ್ಷಣಿಕ ವರ್ಷ ಆರಂಭವಾದ ಬಳಿಕ ಒಂದು ತಿಂಗಳು ತಡವಾಗಿ ವಿದ್ಯಾರ್ಥಿಗಳ ಕೈಗೆ ಪುಸ್ಕಕಗಳು ಸೇರುತ್ತಿದ್ದವು. ಆದರೆ, ಈ ಬಾರಿ ಆನ್'ಲೈನ್ ತರಗತಿಗಳು ಆರಂಭವಾಗಿ ಮೂರು ತಿಂಗಳು ಕಳೆದರೂ ಇನ್ನೂ ಮಕ್ಕಳಿಗೆ ಪುಸ್ತಕಗಳು ದೊರೆಯುತ್ತಿಲ್ಲ ಎಂದು ಅನುದಾನಿತ ಶಾಲೆಯ 9 ನೇ ತರಗತಿ ವಿದ್ಯಾರ್ಥಿಯ ಪೋಷಕರಾದ ಶಿವಣ್ಣ ಹೆಚ್.ಪಿ ಎಂಬುವವರು ಹೇಳಿದ್ದಾರೆ. 

ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಗ್ಯಾಜೆಟ್‌'ಗಳ ಕೊರತೆ ಎದುರಾಗಲಿದೆ. ಈ ನಡುವೆ ಪಠ್ಯಪುಸ್ತಕಗಳ ಕೈಸೇರದಿದ್ದರೆ, ಇದು ಮತ್ತಷ್ಟು ಸಂಕಷ್ಟವನ್ನು ಎದುರು ಮಾಡಲಿದೆ ಎಂದು ತಿಳಿಸಿದ್ದಾರೆ. 

ನನ್ನ ಮಗಳಿಗೆ ಇತರೆ ವಿದ್ಯಾರ್ಥಿಗಳು ಕರೆ ಮಾಡುತ್ತಾರೆ. ಈ ವೇಳೆ ನೋಟ್ಸ್ ಶೇರ್ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆಂದಿದ್ದಾರೆ. 

ಕೊಪ್ಪಳದ ಹಲಗೇರಿಯ ಸರ್ಕಾರಿ ಶಾಲೆಯ ಪ್ರಾಂಶುಪಾಲರು ಮಾತನಾಡಿ, ನಮ್ಮ ಶಾಲೆಯು 9 ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಪುಸ್ತಕದ ಬ್ಯಾಂಕ್ ಸ್ಥಾಪನೆ ಮಾಡಿದೆ. 9 ನೇ ತರಗತಿಯ ವಿದ್ಯಾರ್ಥಿಗಳಿಗೆ ಶೇ.50 ಪುಸ್ತಕಗಳನ್ನು ಸಂಗ್ರಹಿಸಲಾಗಿದೆ, ಆದರೆ 10 ನೇ ತರಗತಿಯ ಪಠ್ಯಪುಸ್ತಕಗಳು ಸಂಗ್ರಹ ಕಷ್ಟಕರವಾಗಿದೆ. 

ಗುಲ್ಬರ್ಗ ವಿಭಾಗದ ಶಿಕ್ಷಣ ಆಯುಕ್ತರು ಸೂಚನೆ ನೀಡಿದ ಬಳಿಕ ಸರ್ಕಾರಿ ಶಾಳೆಗಳಲ್ಲಿ ಬುಕ್ ಬ್ಯಾಂಕ್ ಗಳನ್ನು ಆರಂಭಿಸಲಾಗಿದೆ. ಶಾಲೆಯ ವಿದ್ಯಾರ್ಥಿಗಳು ತಮ್ಮ  ಪಠ್ಯಪುಸ್ತಗಳನ್ನು ಈ ಮೂಲಕ ಹಂಚಿಕೊಳ್ಳಬಹುದು. ಆದರೆ, ಆನ್'ಲೈನ್ ತರಗತಿಗಳು ಆರಂಭವಾಗಿರುವ ಹಿನ್ನೆಲೆಯಲ್ಲಿ ಇದೂ ಕೂಡ ಇದೀಗ ಕಷ್ಟವಾಗಿ ಹೋಗಿದೆ  ಎಂದು ತಿಳಿಸಿದ್ದಾರೆ. 

ವೆಬ್‌ಸೈಟ್‌ನಿಂದ ಪಠ್ಯಪುಸ್ತಕಗಳನ್ನು ಡೌನ್‌ಲೋಡ್ ಮಾಡುವುದು ಮತ್ತು ಫೋನ್‌ನಲ್ಲಿ ಓದಿಕೊಳ್ಳುವ ಆಯ್ಕೆಯನ್ನು ನೀಡಲಾಗಿದೆ ಎಂದು ಅಖಿಲ ಭಾರತ ಶಿಕ್ಷಣ ಸಮಿತಿ ರಕ್ಷಣೆಯ ರಾಜ್ಯಾಧ್ಯಕ್ಷ ಹಾಗೂ ನಿವೃತ್ತ ಪ್ರಾಂಶುಪಾಲರಾದ ಅಲ್ಲಮ್ಮಪ್ರಭು ಬೆಟ್ಟದೂರು ಅವರು ಹೇಳಿದ್ದಾರೆ. 

ಆದರೆ, ಮಕ್ಕಳು ಬಳಕೆ ಮಾಡುವ ಫೋನ್ ಗಳು ಹೆತ್ತವರ ನಿಯಂತ್ರಣದಲ್ಲಿರುವುದರಿಂದ ಮಕ್ಕಳು ಸೀಮಿತ ಅವಧಿಯಲ್ಲಿ ಮಾತ್ರ ಬಳಕೆಗೆ ಅವಕಾಶ ನೀಡಲಾಗಿರುತ್ತದೆ. ಇದು ಒಂದು ಸಮಸ್ಯೆಯಾದರೆ, ಮೊಬೈಲ್ ಸ್ಕ್ರೀನ್ ಗಳು ಚಿಕ್ಕದಾಗಿರುವುದು ಮತ್ತೊಂದು ಸಮಸ್ಯೆಯಾಗಿದೆ. ಗ್ರಾಮೀಣ ಭಾಗದಲ್ಲಿರುವ ಹಾಗೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು ಸಿಗದಿರುವುದು ಭಾರೀ ಸಮಸ್ಯೆಗಳನ್ನು ಎದುರು ಮಾಡುತ್ತದೆ ಎಂದು ತಿಳಿಸಿದ್ದಾರೆ. 

ಖಾಸಗಿ ಕಾಲೇಜುಗಳು ಹಾಗೂ ಶಾಲೆಗಳಿಗೆ ಲಾಭ ಮಾಡುವ ಸಲುವಾಗಿ ಸರ್ಕಾರ ಪರೀಕ್ಷೆ ಹಾಗೂ ಪ್ರವೇಶಾತಿಗೆ ಅನುಮತಿ ನೀಡಿದೆ. ವಿದ್ಯಾರ್ಥಿಗಳ ಕಲಿಕೆಗಾಗಿ ಅಲ್ಲ. ಇದೀಗ ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಲಸಿಕೆ ನೀಡುವುದಕ್ಕೂ ಮುನ್ನ, ಪಠ್ಯಪುಸ್ತಕಗಳು ಮಕ್ಕಳ ಕೈಸೇರುವುದಕ್ಕೂ ಮುನ್ನವೇ ತರಗತಿಗಳನ್ನು ಆರಂಭ ಮಾಡಲು ಮುಂದಾಗಿದೆ ಎಂದು ಶಿಕ್ಷಕರ ಸಂಘದ ಸದಸ್ಯ ರಾಜೇಶ ಭಟ್ ಅವರು ತಿಳಿಸಿದ್ದಾರೆ.

ಈಗಾಗಲೇ ಶೇ.56ರಷ್ಟು ಪಠ್ಯಪುಸ್ತಕಗಳನ್ನು ಮುದ್ರಿಸಲಾಗಿದ್ದು, ವಿತರಣಾ ಕಾರ್ಯ ಕೂಡ ಆರಂಭವಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ಪುಸ್ತಕಗಳ ಮುದ್ರಣ ತಡವಾಗಿತ್ತು. ತಿಂಗಳಾಂತ್ಯಕ್ಕೆ ಶೇ.80ರಷ್ಟು ಪುಸ್ತಕಗಳು ಮುದ್ರಣಗೊಳ್ಳಳಿದ್ದು, ಶೇ.75ರಷ್ಟು ಪುಸ್ತಕಗಳನ್ನು ವಿತರಣೆ ಮಾಡಲಾಗುತ್ತದೆ. ಸೆಪ್ಟೆಂಬರ್ 15ರೊಳಗೆ ಮುದ್ರಣ ಹಾಗೂ ವಿತರಣೆಯ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಅನ್ಬು ಕುಮಾರ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com