ಬೆಂಗಳೂರು: ಪತ್ನಿಯನ್ನು ಚುಡಾಯಿಸಿದ್ದಕ್ಕೆ ಆಕ್ಷೇಪಿಸಿದ ಮೆಕ್ಯಾನಿಕ್‍ನನ್ನು ಇರಿದು ಕೊಂದ ಸಹೋದರರು!
ಬೆಂಗಳೂರು: ತನ್ನ ಪತ್ನಿಯನ್ನು ಚುಡಾಯಿಸದಂತೆ ಯುವಕರಿಗೆ ಎಚ್ಚರಿಕೆ ನೀಡಿದ ಕಾರ್ ಮೆಕ್ಯಾನಿಕ್ ನನ್ನು ಸಹೋದರರಿಬ್ಬರು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೃತನನ್ನು 40 ವರ್ಷದ ಫಾಜಿಲ್ ಪಾಷಾ ಎಂದು ಗುರುತಿಸಲಾಗಿದ್ದು ಕೊಲೆ ಪ್ರಕರಣ ಸಂಬಂಧ ಪೊಲೀಸರು ಸುಮಾರು 20 ವರ್ಷದ ಅರ್ಬಾಜ್ ಪಾಷಾ ಮತ್ತು ಆತನ ಸಹೋದರ 16 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಿದ್ದಾರೆ.
ಪಾದರಾಯನಪುರದಲ್ಲಿ ಮೃತ ಫಾಜಿಲ್ ಪಾಷಾ ಮತ್ತು ಆರೋಪಿಗಳು ನೆರೆಹೊರೆಯಾಗಿದ್ದರು. ಫಾಜಿಲ್ ಹಂಪಿನಗರದ ಆರ್ ಪಿ ರಸ್ತೆಯ ಕಾರ್ ಗ್ಯಾರೇಜ್ ನಲ್ಲಿ ಕೆಲಸ ಮಾಡುತ್ತಿದ್ದು ಅರ್ಬಾಜ್ ಔಷಧ ವಿತರಣೆ ಕೆಲಸ ಮಾಡುತ್ತಿದ್ದ.
ಅರ್ಬಾಜ್ ಫಾಜಿಲ್ ಪತ್ನಿಯನ್ನು ಚುಡಾಯಿಸುತ್ತಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ ಅರ್ಜಾಬ್ ಗೆ ಎಚ್ಚರಿಕೆ ನೀಡಲಾಗಿತ್ತು. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿತ್ತು.
ಸೋಮವಾರ ಬೆಳಗ್ಗೆ 10.15ರ ಸುಮಾರಿಗೆ, ಅರ್ಬಾಜ್ ಮತ್ತು ಆತನ ಸಹೋದರ ಗ್ಯಾರೇಜ್‌ಗೆ ಹೋಗಿ ಫಾಜಿಲ್‌ಗೆ ಹಲವು ಬಾರಿ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿದ್ದ ಫಾಜಿಲ್ ನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಫಾಜಿಲ್ ಮೃತಪಟ್ಟಿದ್ದರು. ಈ ಸಂಬಂಧ ಅರ್ಬಾಜ್ ಮತ್ತು ಆತನ ಸಹೋದರನನ್ನು ಬಂಧಿಸಲಾಗಿದ್ದು ಕೊಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


