ಬೆಂಗಳೂರು: 3 ವರ್ಷದ ಮಗು ಅಪಹರಿಸಿ ಮಾರಾಟ, ಆರೋಪಿ ಬಂಧನ

3 ವರ್ಷದ ಮಗುವನ್ನು ಕದ್ದು ಮಾರಾಟ ಮಾಡಿದ್ದ ಕಿಡಿಗೇಡಿಯೊಬ್ಬ ಬ್ಯಾಟರಾಯನಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. 
ಬಂಧಿತ ಆರೋಪಿ ಇಲಿಯಾಸ್
ಬಂಧಿತ ಆರೋಪಿ ಇಲಿಯಾಸ್
Updated on

ಬೆಂಗಳೂರು: 3 ವರ್ಷದ ಮಗುವನ್ನು ಕದ್ದು ಮಾರಾಟ ಮಾಡಿದ್ದ ಕಿಡಿಗೇಡಿಯೊಬ್ಬ ಬ್ಯಾಟರಾಯನಪುರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

ಇಲಿಯಾಸ್ (22) ಬಂಧಿತ ಆರೋಪಿಯಾಗಿದ್ದಾನೆ. ಈತ ಸರ್ಜಾಪುರದ ನಿವಾಸಿಯಾಗಿದ್ದು, ತರಕಾರಿ ಮಾರಾಟಗಾರನಾಗಿ ಕೆಲಸ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.

ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ ಇಲಿಯಾಸ್ ಇದ್ದಕ್ಕಿದ್ದಂತೆ ದೊಡ್ಡ ಮಟ್ಟದಲ್ಲಿ ಹಣ ಸಂಪಾದನೆ ಮಾಡಬೇಕೆಂದು ಬಯಸಿ ಅಪರಾಧ ಕೃತ್ಯಕ್ಕೆ ಕೈಹಾಕಿದ್ದಾನೆ. ಶಾಮಣ್ಣ ಗಾರ್ಡನ್ ನಲ್ಲಿ ಮಗು ಅಪಹರಿಸಿದ್ದ ಆರೋಪಿ, ಬಳಿಕ ಮಗುವನ್ನು ತಮಿಳುನಾಡಿನ ಹೊಸೂರು ಸಮೀಪ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದಾನೆ. 

ಇದಕ್ಕೂ ಮುನ್ನ ಬೈಕ್ ಕಳ್ಳತನ ಮಾಡಿದ್ದ ಪ್ರಕರಣದಲ್ಲಿ ವಿಜಯನಗರ ಪೊಲೀಸರು ಈತನನ್ನು ಬಂಧನಕ್ಕೊಳಪಡಿಸಿದ್ದರು. ಆದರೆ, ಜಾಮೀನಿನ ಮೇರೆಗೆ ಬಿಡುಗಡೆಗೊಂಡಿದ್ದ. 

ಇಲಿಯಾಸ್ ಪ್ರಿಯತಮೆಯ ಮನೆಗೆ ಹೋಗಿ ಬರುತ್ತಿದ್ದ ಸಂದರ್ಭದಲ್ಲಿ ಮಕ್ಕಳಿಲ್ಲದ ದಂಪತಿಗಳ ಪರಿಚಯವಾಗಿದೆ. ಈ ಈ ವೇಳೆ ಆ ದಂಪತಿಗೆ ತನಗೆ ನಾಲ್ವರು ಮಕ್ಕಳಿದ್ದಾರೆ ನನಗೆ ಕೊರೋನಾದಿಂದ ಬದುಕು ಸಾಗಿಸಲು ಕಷ್ಟವಾಗಿದೆ. ಒಂದು ಮಗುವನ್ನು ನಿಮಗೆ ದಾನ ಕೊಡುವುದಾಗಿ ಹೇಳಿಕೊಂಡಿದ್ದಾನೆ. 

ಅಪಹೃತ ಮಗುವಿನ ನೆರೆಮನೆಯಲ್ಲೇ ಆರೋಪಿಯ ಗೆಳತಿ ನೆಲೆಸಿದ್ದು, ಆಗಾಗ್ಗೆ ಗೆಳತಿ ಭೇಟಿಗೆ ಬರುತ್ತಿದ್ದ ಇಲಿಯಾಸ್ ಮಗುವನ್ನು ಅಪಹರಿಸಿ ಮಾರಾಟ ಮಾಡಿ ಮುಂಗಡ ಹಣವಾಗಿ ರೂ.60000 ಪಡೆದುಕೊಂಡಿದ್ದಾನೆ. ಬಳಿಕ ಮಗು ತನ್ನದೇ ಎಂದು ಹೇಳಲು ದಾಖಲಾತಿಗಳನ್ನು ತಂದುಕೊಟ್ಟು ಸಂಪೂರ್ಣ ಹಣ ಪಡೆಯುವುದಾಗಿ ಹೇಳಿ ಹೋಗಿದ್ದಾನೆ. ಆದರೆ, ಯಾವುದೇ ದಾಖಲೆಗಳನ್ನು ನೀಡಿಲ್ಲ. 

ಈ ನಡುವೆ ಮಗು ಅಪಹರಣವಾಗಿರುವ ಕುರಿತು ಪೋಷಕರು ಬ್ಯಾಟರಾಯನಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ಸಂಬಂಧ ಪೊಲೀಸ್ ಇನ್ಸ್ ಪೆಕ್ಟರ್ ಎಂಎನ್ ನಾಗರಾಜ್ ಅವರು ತನಿಖೆ ಆರಂಭಿಸಿದ್ದಾರೆ.

ಆರಂಭದಲ್ಲಿ ಪೊಲೀಸರು ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದಾರೆ. ನಂತರ ಸಂಬಂಧಿಕರು ಹಾಗೂ ನೆರೆಮನೆಯವರನ್ನು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡಿದ್ದವರ ಮಾಹಿತಿಯನ್ನೂ ಕಲೆಹಾಕಿದ್ದಾರೆ. ಈ ವೇಳೆ ಇಲಿಯಾಸ್ ಕುರಿತು ಮಾಹಿತಿ ತಿಳಿದುಬಂದಿದೆ. ಬಳಿಕ ಆತನ ಫೋನ್ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇದಲ್ಲದೆ, ಇಲಿಯಾಸ್ ಹಿಂದಿನ ಅಪರಾಧ ಕೃತ್ಯಗಳೂ ಪೊಲೀಸರ ಗಮನಕ್ಕೆ ಬಂದಿದೆ. ಇಲಿಯಾಸ್ ಮೇಲೆ ಕಣ್ಣಿಟ್ಟಿದ್ದ ಪೊಲೀಸರು ಪ್ರಿಯತಮೆಯನ್ನು ಭೇಡಿ ಮಾಡಲು ಬಂದ ಸಂದರ್ಭದಲ್ಲಿ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 

ವಿಚಾರಣೆ ವೇಳೆ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಇದೀಗ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅಪಹರಣಕ್ಕೊಳಗಾಗಿದ್ದ ಮಗುವನ್ನು ಪೋಷಕರ ಮಡಿಲಿಗೆ ಒಪ್ಪಿಸಲಾಗಿದೆ. ಈ ನಡುವೆ ಹಣ ನೀಡಿ ಮಗುವನ್ನು ಖರೀದಿ ಮಾಡಿದ್ದ ಕುಟುಂಬದವರ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com