ಬೆಂಗಳೂರು: ಕಳೆದ ಎರಡು ತಿಂಗಳ ಕಾಲ ಸುರಿದ ಭಾರಿ ಮಳೆಗೆ ರಾಜ್ಯದಲ್ಲಿ 42 ಮಂದಿ ಬಲಿಯಾಗಿದ್ದು, ಹಲವು ಜಿಲ್ಲೆಗಳಲ್ಲಿ ಭಾರೀ ಹಾನಿಯುಂಟಾಗಿದೆ.
ಮಳೆಯಿಂದಾಗಿ ರಾಜ್ಯದಲ್ಲಿ ರೂ.11,916 ಕೋಟಿ ನಷ್ಟವಾಗಿದೆ ಎಂದು ರಾಜ್ಯ ಸರ್ಕಾರ ಅಂದಾಜಿಸಿದೆ. 2021ರ ಅಕ್ಟೋಬರ್ ಮತ್ತು ನವೆಂಬರ್ ನಲ್ಲಿ ಅತಿವೃಷ್ಟಿಯಿಂದ 7.9 ಲಕ್ಷ ಹೆಕ್ಟೇರ್‌ನಲ್ಲಿ ಕೃಷಿ ಬೆಳೆಗಳು, 1.25 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆಗಳು, 74,530 ಹೆಕ್ಟೇರ್ ನೆಡುತೋಪು ಬೆಳೆಗಳು ಮತ್ತು 243 ಹೆಕ್ಟೇರ್ ರೇಷ್ಮೆ ಬೆಳೆಗಳು ಹಾನಿಗೊಳಗಾಗಿವೆ.
ರಾಜ್ಯ ಸರ್ಕಾರದ ಬೆಳೆ ನಷ್ಟದ ವರದಿಯ ಪ್ರಕಾರ. ಮಳೆಯಿಂದಾಗಿ ರೂ.8,962.02 ಕೋಟಿ ಮೌಲ್ಯದ ಸುಮಾರು 9.9 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
ಬೆಳೆಗಳಷ್ಟೇ ಅಲ್ಲದೆ, ರಸ್ತೆಗಳು, ಸೇತುವೆಗಳು, ಮೋರಿಗಳು, ವಿದ್ಯುತ್ ಮೂಲಸೌಕರ್ಯಗಳು, ಶಾಲೆಗಳು, ಆಸ್ಪತ್ರೆಗಳು, ಅಂಗನವಾಡಿಗಳು, ಸರ್ಕಾರಿ ಕಟ್ಟಡಗಳು ಮತ್ತು ಇತರ ಮೂಲಸೌಕರ್ಯಗಳಿಗೂ ಹಾನಿಯಾಗಿದೆ.
ಒಟ್ಟಾರೆ ಹಾನಿಯನ್ನು 11,916.30 ಕೋಟಿ ರೂ ಎಂದು ಅಂದಾಜಿಸಲಾಗಿದ್ದು, ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಹಾನಿಯನ್ನು ರೂ 1,281.92 ಕೋಟಿ ಎಂದು ಅಂದಾಜಿಸಲಾಗಿದೆ. ಈ ಕುರಿತ ವರದಿಯನ್ನು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಗುರುವಾರ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
ಸುದೀರ್ಘ ಮಳೆಯಿಂದಾಗಿ ಕೃಷಿ ಭೂಮಿಗಳಿಗೆ ನೀರು ತುಂಬಿಕೊಂಡಿದ್ದು, ಇದರಿಂದ ಕಟಾವು ಹಂತದಲ್ಲಿ ಬೆಳೆದ ಬೆಳೆಗಳಿಗೆ ಸಾಕಷ್ಟು ಹಾನಿಯುಂಟಾಗಿದೆ. ಅಕ್ಟೋಬರ್ 1 ರಿಂದ ನವೆಂಬರ್ 21 ರವರೆಗೆ ರಾಜ್ಯದಲ್ಲಿ ಸಾಮಾನ್ಯ 166 ಮಿಮೀ ಮಳೆಗಿಂತ ಶೇ.85ರಷ್ಟು (307 ಮಿಮೀ) ಮಳೆಯಾಗಿದೆ. 31 ಜಿಲ್ಲೆಗಳ ಪೈಕಿ 23 ಜಿಲ್ಲೆಗಳು ಹೆಚ್ಚಿನ ಹೆಚ್ಚುವರಿ ಮಳೆಯನ್ನು ದಾಖಲಿಸಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಬೆಳೆಗಳಿಗೆ ಭಾರೀ ಹಾನಿಯುಂಟಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರ ನೆರವಿಗಾಗಿ ಕಾದು ಕುಳಿತುಕೊಳ್ಳದೆ, ಪರಿಹಾರ ಕಾರ್ಯಗಳನ್ನು ಆರಂಭಿಸುತ್ತಿದೆ ಎಂದು ವರದಿಗಳು ತಿಳಿಸಿವೆ.
ಬೆಳೆ ನಷ್ಟ ಪರಿಹಾರ ನೀಡುವ ಪ್ರಕ್ರಿಯೆಯನ್ನು ಶೀಘ್ರಗತಿಯಲ್ಲಿ ಆರಂಭಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದೆ.
ಪ್ರತಿ ಹೆಕ್ಟೇರ್‌ಗೆ ಮಳೆಯಾಶ್ರಿತ, ನೀರಾವರಿ/ತೋಟಗಾರಿಕೆ ಮತ್ತು ಬಹುವಾರ್ಷಿಕ ಬೆಳೆಗಳಿಗೆ ಪ್ರತಿ ಹೆಕ್ಟೇರ್'ಗೆ ರಾಜ್ಯ ಸರ್ಕಾರ ರೂ.6,800, ರೂ.13,500 ಮತ್ತು ರೂ.18000 ಪರಿಹಾರ ನೀಡುತ್ತಿದ್ದು, ಸರ್ಕಾರದ ಈ ಪರಿಹಾರದ ಮೊತ್ತಕ್ಕೆ ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
Advertisement