ಭ್ರಷ್ಟ ಪೊಲೀಸರು ನಾಯಿಗಳಂತೆ: ಆರಗ ಜ್ಞಾನೇಂದ್ರ ಕಿಡಿ; ಗೃಹ ಸಚಿವರ ಹೇಳಿಕೆ ಪೊಲೀಸರ ಆತ್ಮಹತ್ಯೆಗೆ ಪ್ರೇರಣೆ ಎಂದ ಕಾಂಗ್ರೆಸ್

ಭ್ರಷ್ಟ ಪೊಲೀಸರ ವಿರುದ್ಧ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೈ ತುಂಬ ಸಂಬಳ ನೀಡುತ್ತಿದ್ದರೂ, ಭ್ರಷ್ಟ ಪೊಲೀಸರು ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗೃಹ ಸಚಿವ ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ))
ಗೃಹ ಸಚಿವ ಆರಗ ಜ್ಞಾನೇಂದ್ರ (ಸಂಗ್ರಹ ಚಿತ್ರ))

ಬೆಂಗಳೂರು: ಭ್ರಷ್ಟ ಪೊಲೀಸರ ವಿರುದ್ಧ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಕೈ ತುಂಬ ಸಂಬಳ ನೀಡುತ್ತಿದ್ದರೂ, ಭ್ರಷ್ಟ ಪೊಲೀಸರು ನಾಯಿಗಳಂತೆ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಅಕ್ರಮ ಗೋಸಾಗಾಟ ವಿಚಾರಕ್ಕೆ ಸಂಬಂಧಿಸಿದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಭೆ ನಡೆಸಿದ ಗೃಹ ಸಚಿವರು ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಜತೆ ದೂರವಾಣಿ ಮೂಲಕ ಮಾತನಾಡುತ್ತಾ ಭ್ರಷ್ಟ ಪೊಲೀಸರ ವಿರುದ್ಧ ತೀವ್ರ ಕಿಡಿಕಾರಿದರು. ಈ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ವಿಡಿಯೋದಲ್ಲಿ ಸಚಿವರು ಉನ್ನತ ಪೊಲೀಸ್ ಅಧಿಕಾರಿಯೊಬ್ಬರ ಜತೆ ದೂರವಾಣಿ ಮೂಲಕ ಮಾತನಾಡುತ್ತಾ, 'ಇಡೀ ಚಿಕ್ಕಮಗಳೂರು ಜಿಲ್ಲೆ ನಿಮ್ಮದು. ಪೊಲೀಸರಿಗೆ ಕೈತುಂಬಾ ಸಂಬಳ ನೀಡುತ್ತಿದ್ದೇವೆ. ಯಾರಿಗೂ ಕಡಿಮೆ ಮಾಡಿಲ್ಲ. ಆದjz ಇವರಿಗೆಲ್ಲ ಸಂಬಳದಲ್ಲಿ ಬದುಕಬೇಕೆಂದಿಲ್ಲ. ಇಂಥವರೆಲ್ಲ ಎಂಜಲು ಕಾಸು ತಿಂದು ಬದುಕುತ್ತಿದ್ದಾರೆ. ಯೋಗ್ಯತೆ ಇಲ್ಲದಿದ್ದರೆ ಸಮವಸ್ತ್ರ ಬಿಚ್ಚಿಟ್ಟು ಎಲ್ಲಾದರೂ ಹೋಗಿ ಸಾಯಲಿ ಅಥವಾ ಮಣ್ಣು ಹೊರಲಿ. ಇವರನ್ನೆಲ್ಲ ನಂಬಿಕೊಂಡು ಜನ ಬದುಕುವುದು ಹೇಗೆ? ಇಲ್ಲಿ ತಲವಾರು ತೋರಿಸಿ ಬೆದರಿಸಿ ಕೊಟ್ಟಿಗೆಯಿಂದ ಜಾನುವಾರುಗಳನ್ನು ಬಿಚ್ಚಿ ತೆಗೆದುಕೊಂಡು ಹೋಗುತ್ತಾರೆ. ಎಲ್ಲ ಪೊಲೀಸರು ಹಾಳಾಗಿ ಹೋಗಿದ್ದಾರೆ’ ಎಂದು ಸಚಿವರು ಹೇಳಿದ್ದಾರೆ.

ಸ್ಪಷ್ಟನೆ ಕೊಟ್ಟ ಸಚಿವರು ಹೇಳಿದ್ದೇನು?
ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಈ ಕುರಿತು ಸ್ಪಷ್ಟನೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು, 'ಎಲ್ಲ ಪೊಲೀಸರನ್ನು ಉದ್ದೇಶಿಸಿ ಆ ಹೇಳಿಕೆ ನೀಡಿಲ್ಲ. ಅಕ್ರಮ ಗೋ ಸಾಗಾಟ ಮಾಡುವವರೊಂದಿಗೆ ಶಾಮೀಲಾದವರನ್ನು ಮಾತ್ರ ಉಲ್ಲೇಖಿಸಿ ಹಾಗೆ ಮಾತನಾಡಿದ್ದೆ. ಗೃಹಸಚಿವನಾಗಿ ನಾನು ಪೊಲೀಸರನ್ನು ಗೌರವಿಸುತ್ತೇನೆ. ಕರ್ನಾಟಕದ ಪೊಲೀಸ್ ವ್ಯವಸ್ಥೆ ಚೆನ್ನಾಗಿದೆ. ಮೊನ್ನೆಯಷ್ಟೇ ನನ್ನ ಕ್ಷೇತ್ರದಲ್ಲಿ ಅಕ್ರಮ ಗೋ ಸಾಗಾಟ ತಡೆಯಲು ಯತ್ನಿಸಿದವರ ಮೇಲೆ ಹಲ್ಲೆ ನಡೆದಿತ್ತು. ಆ ಹಿನ್ನೆಲೆಯಲ್ಲಿ ಕೆಲ ಪೊಲೀಸರನ್ನು ಉಲ್ಲೇಖಿಸಿದ್ದೆ’ ಎಂದು ಹೇಳಿದ್ದಾರೆ.

ಗೃಹ ಸಚಿವರ ಹೇಳಿಕೆ ಪೊಲೀಸರ ಆತ್ಮಹತ್ಯೆಗೆ ಪ್ರೇರಣೆ
ಇನ್ನು ಗೃಹ ಸಚಿವ ಅರಗ ಜ್ಞಾನೇಂದ್ರ ಅವರ ಹೇಳಿಕೆಗೆ ವಿಪಕ್ಷ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಗೃಹ ಸಚಿವರ ಹೇಳಿಕೆ ಪೊಲೀಸರ ಆತ್ಮಹತ್ಯೆಗೆ ಪ್ರೇರಣೆ ಎಂದು ಕಿಡಿಕಾರಿದೆ. ಈ ಬಗ್ಗೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮೇಲ್ಮನೆಯ ಕಾಂಗ್ರೆಸ್ ಸದಸ್ಯ ಪಿ.ಆರ್.ರಮೇಶ್ ಅವರು, ಆರಗ ಜ್ಞಾನೇಂದ್ರ.. ಅಜ್ಞಾನೇಂದ್ರರಾಗಿದ್ದಾರೆ. ಜವಾಬ್ದಾರಿಯುತ ಸ್ಥಾನ ಗೃಹ ಸಚಿವರ ಸ್ಥಾನ, ಆದರೆ ಅರಗ ಜ್ಞಾನೇಂದ್ರಗೆ ಜವಾಬ್ದಾರಿಯೇ ಇಲ್ಲ.ಪೊಲೀಸ್ ಇಲಾಖೆಯ ಮಂತ್ರಿಯೇ ಪೊಲೀಸರನ್ನು ನಾಯಿಗಳು ಎಂದು ಕರೆದಾಗ ಪೊಲೀಸರು ತಮ್ಮ ಅಳಲನ್ನು ಇನ್ಯಾರಿಗೆ ಹೇಳಬೇಕು, ಇನ್ಯಾರನ್ನು ಕೇಳಬೇಕು? ಇಂತಹ ಹೇಳಿಕೆಗಳಿಂದ ಪೊಲೀಸರಿಗೆ ಮಾನಸಿಕ ಹಿಂಸೆ ಆಗುತ್ತದೆ.ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಪೊಲೀಸರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗಿನ  ಗೃಹ ಸಚಿವರ ಈ ಹೇಳಿಕೆ ಪೊಲೀಸರ ಆತ್ಮಹತ್ಯೆಗೆ ಪ್ರೇರಣೆ ಕೊಟ್ಟಂತಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com