ಕೊರೋನಾ ಲಾಕ್ಡೌನ್ ಎಫೆಕ್ಟ್: 2 ವರ್ಷದಲ್ಲಿ ರಾಜ್ಯದ ಸಾಲ 78 ಸಾವಿರ ಕೋಟಿ ರೂ. ಹೆಚ್ಚಳ!

ಕೊರೋನಾ ಸಾಂಕ್ರಾಮಿಕ ರೋಗ ಹಾಗೂ ಲಾಕ್ಡೌನ್ ಪರಿಣಾಮದಿಂದಾಗಿ ನಿರೀಕ್ಷಿತ ಆದಾಯವಿಲ್ಲದೆ 2019-2020ರಿಂದ 2020-2021ರವರೆಗಿನ ಎರಡು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಸಾಲರ ಪ್ರಮಾಣ ರೂ.78,000 ಕೋಟಿ ಹೆಚ್ಚಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕೊರೋನಾ ಸಾಂಕ್ರಾಮಿಕ ರೋಗ ಹಾಗೂ ಲಾಕ್ಡೌನ್ ಪರಿಣಾಮದಿಂದಾಗಿ ನಿರೀಕ್ಷಿತ ಆದಾಯವಿಲ್ಲದೆ 2019-2020ರಿಂದ 2020-2021ರವರೆಗಿನ ಎರಡು ವರ್ಷದ ಅವಧಿಯಲ್ಲಿ ರಾಜ್ಯದಲ್ಲಿ ಸಾಲರ ಪ್ರಮಾಣ ರೂ.78,000 ಕೋಟಿ ಹೆಚ್ಚಾಗಿದೆ.

ಮಂಗಳವಾರ ವಿಧಾನಸಭೆಯಲ್ಲಿ ಭಾರತ ಲೆಕ್ಕ ನಿಯಂತ್ರಕ ಮತ್ತು ಮಹಾ ಲೆಕ್ಕ ಪರಿಶೋಧಕರ ಧನ ವಿನಿಯೋಗ ಲೆಕ್ಕಗಳು ಹಾಗೂ ಹಣಕಾಸು ಲೆಕ್ಕಗಳ ವರದಿಯನ್ನು ಮಂಡಿಸಲಾಯಿತು.

ಈ ಸಂಬಂಧ ಸಿಎಜಿ ವರದಿ ಉಲ್ಲೇಖಿಸಿದ್ದು, 2019-20ರಲ್ಲಿ ರಾಜ್ಯದ ಸಾರ್ವಜನಿಕ ಸಾಲದ ಮೊತ್ತ 3.19 ಲಕ್ಷ ಕೋಟಿ ರೂ. ಇತ್ತು. ಅದು 2020-21ಗೆ 3.97 ಲಕ್ಷ ಕೋಟಿಗೆ ಏರಿಕೆಯಾಗಿರುವುದಾಗಿ ತಿಳಿಸಿದೆ.

2020-21ನೇ ಸಾಲಿನಲ್ಲಿ ಸಾಲದ ಪ್ರಮಾಣವು ರೂ. 96,506 ಕೋಟಿ ಇತ್ತು. ರಾಜ್ಯದ ತೆರಿಗೆ ಆದಾಯದಲ್ಲಿ ಕೊರತೆಯಾದ ಹಿನ್ನೆಲೆಯಲ್ಲಿ ಆದಾಯ ಸಂಗ್ರಹದಲ್ಲಿ ರೂ.14,535 ಕೋಟಿ ಕೊರತೆ ಕಾಣಿಸಿಕೊಂಡಿದೆ. 2019-20ರಿಂದ 2020-21ರವರೆಗೆ ಸಾಲದ ಪ್ರಮಾಣವು ಹೆಚ್ಚುತ್ತಲೇ ಇದೆ. 2021ರಲ್ಲಿ ಸಾಲದ ಪ್ರಮಾಣವು ರೂ.78,000 ಕೋಟಿ ಹೆಚ್ಚಾಗಿದೆ.

ಎಸ್​ಜಿಎಸ್​ಟಿ, ರಾಜ್ಯ ಅಬಕಾರಿ ಸುಂಕ, ಮಾರಾಟ ತೆರಿಗೆ, ಮುದ್ರಾಂಕ ತೆರಿಗೆ ಮತ್ತು ನೋಂದಣಿ ತೆರಿಗೆ, ವಾಹನ ತೆರಿಗೆ ಸಂಗ್ರಹದಲ್ಲಿಯೂ ಭಾರಿ ನಷ್ಟವಾಗಿದೆ. ಆದಾಗ್ಯೂ, ತೆರಿಗೆಯೇತರ ಆದಾಯವು 7,681 ಕೋಟಿಯಿಂದ 7,894 ಕೋಟಿಗೆ ಸ್ವಲ್ಪಮಟ್ಟಿಗೆ ಏರಿಕೆಯಾಗಿದೆ ಎಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

ಆದಾಯ ಕಡಿಮೆಯಾದಂತೆ ರಾಜ್ಯದ ಸಾಲವೂ ಹೆಚ್ಚಾಗಿದೆ. ಇದರಂತೆ ಬಡ್ಡಿ ಪ್ರಮಾಣ ಕೂಡ ರೂ.22,666 ಕೋಟಿಗೆ ಏರಿಕೆಯಾಗಿದೆ.

ಸಿಎಜಿ ತನ್ನ ವರದಿಯಲ್ಲಿ ಕಳೆದ ಐದು ವರ್ಷವಾದರೂ ನೀರಾವರಿ ಇಲಾಖೆ 13 ಯೋಜನೆ, 41 ರಸ್ತೆ ಯೋಜನೆ, 2 ಕಟ್ಟಡ ಯೋಜನೆ, 3 ಸೇತುವೆ ಕಾಮಗಾರಿಗಳು ಅಪೂರ್ಣವಾಗಿವೆ ಎಂದು ಆಕ್ಷೇಪ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರಕ್ಕೆ 68.65 ಕೋಟಿ ರೂ.‌ ಹೆಚ್ಚುವರಿ ಮರುಪಾವತಿ ಮಾಡಿರುವ ಬಗ್ಗೆಯೂ ಆಕ್ಷೇಪ ವ್ಯಕ್ತಪಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com