ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನಿರ್ಧಾರ ಕೈಗೊಳ್ಳಲಾಗಿದ್ದು, ನೈಟ್ ಕರ್ಫ್ಯೂ ಆದೇಶ ಮರುಪರಿಶೀಲಿಸಲ್ಲ: ಸಿಎಂ ಬೊಮ್ಮಾಯಿ
ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನೈಟ್ ಕರ್ಫ್ಯೂ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಆದೇಶವನ್ನು ಮರುಪರಿಶೀಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
Published: 27th December 2021 08:03 AM | Last Updated: 27th December 2021 02:13 PM | A+A A-

ಸಿಎಂ ಬೊಮ್ಮಾಯಿ
ಮೈಸೂರು: ಜನರ ಆರೋಗ್ಯ ರಕ್ಷಣೆ ದೃಷ್ಟಿಯಿಂದ ನೈಟ್ ಕರ್ಫ್ಯೂ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಆದೇಶವನ್ನು ಮರುಪರಿಶೀಲಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಭಾನುವಾರ ಸ್ಪಷ್ಟಪಡಿಸಿದ್ದಾರೆ.
ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಾತ್ರಿ ಕರ್ಫ್ಯೂ ಆದೇಶ ಹೊರಡಿಸಿದ್ದು, ಆದೇಶದ ವಿರುದ್ಧ ಪಬ್ ಮಾಲೀಕರು ಮತ್ತು ಹೋಟೆಲ್ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೆ, ನಿರ್ಧಾರವನ್ನು ಮರುಪರಿಶೀಲಿಸುವಂತೆ ಒತ್ತಾಯಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಅವರು, ನೆರೆಯ ರಾಜ್ಯಗಳಲ್ಲಿ ಓಮಿಕ್ರಾನ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕಠಿಣ ನಿರ್ಬಂಧಗಳನ್ನು ಹೇರುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ನೈಟ್ ಕರ್ಫ್ಯೂ ಸೇರಿ ರಾಜ್ಯಾದ್ಯಂತ ಜಾರಿಗೊಳಿಸಲು ಉದ್ದೇಶಿಸಿರುವ ಕಠಿಣ ನಿರ್ಬಂಧ ಕುರಿತು ಪುನರ್ ಪರಿಶೀಲನೆ ಇಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಹೊಸ ವರ್ಷಾಚರಣೆಗೆ ಬ್ರೇಕ್: ರಾಜ್ಯಾದ್ಯಂತ ಡಿಸೆಂಬರ್ 28 ರಿಂದ 10 ದಿನ ನೈಟ್ ಕರ್ಫ್ಯೂ; ಸುಧಾಕರ್
ರಾಜ್ಯದಲ್ಲಿ ಓಮಿಕ್ರಾನ್ ಪ್ರಕಱಣಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಆದರೆ, ಅಕ್ಕಪಕ್ಕದ ರಾಜ್ಯ ಮತ್ತು ಬೇರೆ ದೇಶಗಳಲ್ಲಿ ಓಮಿಕ್ರಾನ್ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಮುಂಜಾಗ್ರತಾ ಕ್ರಮವಾಗಿ ಮತ್ತು ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಹೆಚ್ಚು ಜನ ಸೇರದಂತೆ ನೋಡಿಕೊಳ್ಳಲು ರಾತ್ರಿ 10 ರಿಂದ ಬೆಳಿಗ್ಗೆ 5 ರವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಲಾಗಿದೆ ಎಂದು ತಿಳಿಸಿದರು.
ಕಠಿಣ ನಿಯಮಗಳಿಂದ ವ್ಯಾಪಾರಿಗಳು, ಉದ್ಯಮಿಗಳಿಗೆ ನಷ್ಟವಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಬಂಧ ಕುರಿತು ಪುನರ್ ಪರಿಶೀಲನೆ ಮಾಡುವುದಿಲ್ಲ. ಹೊಸ ವರ್ಷಾಚರಣೆ ವೇಳೆ ಹೊರಾಂಗಣದಲ್ಲಿ ಪಾರ್ಟಿ ಮಾಡುವುದು. ಡಿಜ ಹಾಕಿಕೊಳ್ಳುವುದಕ್ಕೂ ಅವಕಾಶವಿಲ್ಲ. ಈ ಹಿಂದೆ ಕೊರೋನಾದ ಮೊದಲ ಮತ್ತು 2ನೇ ಅಲೆಯ ವೇಳೆ ಯೂರೋಪ್ ದೇಶಗಳಲ್ಲಿ ಸೋಂಕು ಕಾಣಿಸಿಕೊಂಡ ಒಂದುವರೆ, ಎರಡು ತಿಂಗಳ ಬಳಿಕ ಭಾರತದಲ್ಲಿ ಹೆಚ್ಚಾಗಿತ್ತು. ಅದರ ಆಧಾರದ ಮೇಲೆ ಈ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ ಎಂದರು.