ಮುಂದಿನ ವರ್ಷ ಫೆಬ್ರವರಿಯಲ್ಲಿ 'ಇನ್ವೆಸ್ಟ್ ಕರ್ನಾಟಕ' ಜಾಗತಿಕ ಹೂಡಿಕೆದಾರರ ಸಮಾವೇಶ

ದೀರ್ಘ ವಿಳಂಬದ ನಂತರ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಹು ನಿರೀಕ್ಷಿತ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸುತ್ತಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಬೆಂಗಳೂರು: ದೀರ್ಘ ವಿಳಂಬದ ನಂತರ ಮುಂದಿನ ವರ್ಷ ಫೆಬ್ರವರಿಯಲ್ಲಿ ಬಹು ನಿರೀಕ್ಷಿತ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ರಾಜ್ಯ ಸರ್ಕಾರ ಆಯೋಜಿಸುತ್ತಿದೆ.

ಸಮಾವೇಶದ ವೇಳಾಪಟ್ಟಿಯನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಅನುಮೋದಿಸಿದ್ದು, ಫೆಬ್ರವರಿ 9ರಿಂದ 11ರವರೆಗೆ ಇನ್ವೆಸ್ಟ್ ಕರ್ನಾಟಕ ಹೆಸರಿನಲ್ಲಿ ಸಮಾವೇಶ ನಡೆಯಲಿದೆ. ಕೋವಿಡ್-19 ಸಾಂಕ್ರಾಮಿಕ ನಂತಹ ಇಂತಹ ಸಮಾವೇಶ ನಡೆಯುತ್ತಿರುವುದು ಇದೇ ಮೊದಲನೇಯದ್ದಾಗಿದೆ. ಕಳೆದ ವರ್ಷವೇ ಈ ಸಮಾವೇಶ ನಡೆಯಬೇಕಿತ್ತು. ಆದರೆ, ಸಾಂಕ್ರಾಮಿಕದಿಂದಾಗಿ ವಿಳಂಬವಾಯಿತು.

ಸಂಪುಟ ಸಭೆಯ ನಂತರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ, ಮುಂದಿನ ವರ್ಷ ಬೆಂಗಳೂರಿನ ಅರಮನೆ ಮೈದಾನದಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲು ಸಂಪುಟ ನಿರ್ಧರಿಸಿದೆ. ಫೆಬ್ರವರಿ 9 ರಿಂದ ಮೂರು ದಿನಗಳ ಇನ್ವೆಸ್ಟ್ ಕರ್ನಾಟಕ ಹೆಸರಿನಲ್ಲಿ ಸಮಾವೇಶ ನಡೆಯಲಿದ್ದು, ಅದರ ವಿವರಗಳನ್ನು ನಂತರ ಅಂತಿಮಗೊಳಿಸಲಾಗುತ್ತದೆ ಎಂದು ತಿಳಿಸಿದರು.

ಆರು ವರ್ಷಗಳ ನಂತರ  ಸಮಾವೇಶ ನಡೆಯಲಿದೆ. 2016ರಲ್ಲಿ ಕರ್ನಾಟಕ ರಾಜ್ಯ ಆಯೋಜಿಸಿದ್ದ ನಾಲ್ಕನೇ ಆವೃತ್ತಿಯ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 1,201 ಯೋಜನೆಗಳಿಗೆ ಅನುಮೋದನೆ ನೀಡಲಾಗಿತ್ತು. 3, 08,810 ಕೋಟಿ ಮೊತ್ತದ ಒಡಂಬಡಿಕೆ ಮಾಡಿಕೊಳ್ಳಲಾಗಿತ್ತು. 2016ರ ನಂತರ 2019ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಹೆಚ್ ಡಿ ಕುಮಾರಸ್ವಾಮಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಘೋಷಿಸಿದ್ದರು. ಆದರೆ, ಮೈತ್ರಿ ಸರ್ಕಾರ ಪತನದೊಂದಿಗೆ ಆ ಯೋಜನೆಯೂ ಕೊನೆಯಾಗಿತ್ತು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ 2020ರಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಿಸಿದ್ದರು. ಆದರೆ, ಕೊರೋನಾ ಸಾಂಕ್ರಾಮಿಕ ಯೋಜನೆಯಿಂದ ಹಿಂದೆ ಸರಿಯುವಂತೆ ಮಾಡಿತ್ತು.  ಇದೀಗ ಮತ್ತೆ ಸರ್ಕಾರ ಸಮಾವೇಶಕ್ಕಾಗಿ ದಿನಾಂಕ ನಿಗದಿಪಡಿಸಿದ್ದು, ಸಿದ್ಧತೆಗಾಗಿ ಎದುರು ನೋಡುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com