ಮೆಟ್ರೋ ಕಾಮಗಾರಿಗೆ ಮರ ಕಡಿಯಲು ಸಮ್ಮತಿ: 4 ಸಾವಿರ ಗಿಡ ನೆಡುವಂತೆ ಬಿಎಂಆರ್'ಸಿಎಲ್'ಗೆ ಹೈಕೋರ್ಟ್ ಷರತ್ತು!

ನಗರದ ನಾಗಾವಾರ-ಗೊಟ್ಟಿಗೇರಿ ಮಾರ್ಗದ ಮೆಟ್ರೊ ರೈಲು ಯೋಜನೆಗೆ ಮರಗಳನ್ನು ಕಡಿಯಲು ಒಪ್ಪಿಗೆ ನೀಡಿರುವ ಹೈಕೋರ್ಟ್, ಅದಕ್ಕೆ ಪರಿಹಾರವಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಬಿಎಂಆರ್'ಸಿಎಲ್'ಗೆ ಆದೇಶಿಸಿದೆ. 
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: ನಗರದ ನಾಗಾವಾರ-ಗೊಟ್ಟಿಗೇರಿ ಮಾರ್ಗದ ಮೆಟ್ರೊ ರೈಲು ಯೋಜನೆಗೆ ಮರಗಳನ್ನು ಕಡಿಯಲು ಒಪ್ಪಿಗೆ ನೀಡಿರುವ ಹೈಕೋರ್ಟ್, ಅದಕ್ಕೆ ಪರಿಹಾರವಾಗಿ 4 ಸಾವಿರ ಗಿಡಗಳನ್ನು ನೆಡುವಂತೆ ಬಿಎಂಆರ್'ಸಿಎಲ್'ಗೆ ಆದೇಶಿಸಿದೆ. 

ಹೈಕೋರ್ಟ್ ಆದೇಶದಿಂದಾಗಿ ಸುಮಾರು ಎರಡು ವರ್ಷಗಳಿಂದ ಸ್ಥಗಿತಗೊಂಡಿದ್ದ ರೈಲು ಮಾರ್ಗ ಕಾಮಗಾರಿ ಪುನಾರಂಭವಾಗಲಿದೆ.

ಅಭಿವೃದ್ಧಿ ಕಾಮಗಾರಿಗಳಿಗೆ ಮರ ಕಡಿಯುವುದನ್ನು ಪ್ರಶ್ನಿಸಿ ಬೆಂಗಳೂರು ಪರಿಸರ ಸಮಿತಿ ಮತ್ತು ಪರಿಸರವಾದಿ ದತ್ತಾತ್ರೇಯ ಟಿ.ದೇವರೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಎ. ಎಸ್ ಓಕ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದ್ ರಾಜ್ ಅವರಿದ್ದ ವಿಭಾಗೀಯಪೀಠ ಗುರುವಾರ ವಿಚಾರಣೆ ನಡೆಸಿತು. 

ಈ ವೇಳೆ ಬಿಎಂಆರ್ ಸಿಎಲ್ ಪರ ವಾದ ಮಂಡಿಸಿದ ಹಿರಿಯ ವಕೀಲರ ಉದಯ್ ಹೊಳ್ಳ, ಮೆಟ್ರೋ ರೈಲು ಕಾಮಗಾರಿ ಸ್ಥಗಿತಗೊಂಡಿರುವುದರಿಂದ ನಿಗಮಕ್ಕೆ ಸಾಕಷ್ಟು ನಷ್ಟವಾಗುತ್ತಿದೆ. ಇತ್ತೀಚೆಗೆ ರೈಲು ಮಾರ್ಗ ನಿರ್ಮಾಣಕ್ಕಾಗಿ ಕಡಿಯುವ ಮರಗಳಿಗೆ ಪರಿಹಾರದ ರೂಪದಲ್ಲಿ 3500 ಗಿಡಗಳನ್ನು ನೆಡುವಂತೆ ವೃಕ್ಷ ಸಂರಕ್ಷಣಾಧಿಕಾರಿ ಸೂಚಿಸಿದ್ದಾರೆ. ನಿಗಮ ಅದಕ್ಕಿಂತಲೂ ಹೆಚ್ಚು ಗಿಡಗಳನ್ನು ನೆಡಲು ಸಿದ್ದವಿದೆ. ನ್ಯಾಯಾಲಯ ಈ ವಿಚಾರ ಪರಿಗಣಿಸಬೇಕೆಂದು ಕೋರಿದರು.

ವಾದ ಪರಿಗಣಿಸಿದ ಪೀಠ, ವೃಕ್ಷ ಅಧಿಕಾರಿ ಈಗಾಗಲೇ ಅನುಮತಿ ನೀಡಿರುವಂತೆ ಮರಗಳನ್ನು ಕತ್ತರಿಸಬಹುದು. ಆದರೆ ಅದಕ್ಕೆ ಪರ್ಯಾಯವಾಗಿ ನಿಗಮ 3500 ಗಿಡಗಳನ್ನು ನೆಡುವುದಾಗಿ ಪ್ರಮಾಣಪತ್ರ ಸಲ್ಲಿಸಿದೆ. ಆದರೆ ನ್ಯಾಯಾಲಯ 4 ಸಾವಿರ ಗಿಡಗಳನ್ನು ನೆಡಲು ಬಯಸುತ್ತದೆ. ಹೀಗಾಗಿ. ನಿಗಮ 4 ಸಾವಿರ ಗಿಡಗಳನ್ನು ನೆಡಬೇಕು. ಅಲ್ಲದೇ, ವೃಕ್ಷಾಧಿಕಾರಿಗೆ ನಿಗಮ ಸಲ್ಲಿಸಿರುವ ಪ್ರಸ್ತಾವದಲ್ಲಿ ತಿಳಿಸಿರುವಂತೆ 33 ಜಾತಿಯ ಗಿಡಗಳಲ್ಲಿ ಎಷ್ಟೆಷ್ಟು ನೆಡಲಾಗುವುದು ಎಂಬ ವರದಿಯನ್ನು ಸಲ್ಲಿಸಿ ಎಂದು ನಿರ್ದೇಶಿಸಿತು.

ಇನ್ನು ಮೆಟ್ರೋ ಮಾರ್ಗಕ್ಕಾಗಿ ಈಗಾಗಲೇ ನ್ಯಾಯಾಲಯದ ಅನುಮತಿಯೊಂದಿಗೆ ಸ್ಥಳಾಂತರ ಮಾಡಿರುವ ಮರಗಳನ್ನು ಸರಿಯಾಗಿ ಪೋಷಿಸಬೇಕು ಮತ್ತು ಹೊಸ ಗಿಡಗಳನ್ನು ನೆಡಬೇಕು. ಮರಗಳ ಪೋಷಣೆ ಬಗ್ಗೆ ಕಾಲ ಕಾಲಕ್ಕೆ ವರದಿಗಳನ್ನು ಸಲ್ಲಿಸಬೇಕೆಂದು ಬಿಎಂಆರ್ ಸಿಎಲ್‌ಗೆ ನಿರ್ದೇಶಿತು.

ಇದೇ ವೇಳೆ ಗಿಡಗಳನ್ನು ಬೆಳೆಸಲು ಪರ್ಯಾಯ ಜಾಗ ಅರ್ಹವೇ ಎಂಬುದನ್ನು ಪರಿಶೀಲಿಸದ ಮರ ಅಧಿಕಾರಿ, ಡಿಸಿಎಫ್ ವರ್ತನೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೀಠ, ಮಣ್ಣಿನ ಪರೀಕ್ಷೆ ನಡೆಸಿ ಆ ವಿವರಗಳನ್ನು ಎರಡು ವಾರದಲ್ಲಿ ವೃಕ್ಷಾಧಿಕಾರಿಗೆ ನೀಡಬೇಕು. ಅದನ್ನು ಪರಿಶೀಲಿಸಿ ವರದಿ ನೀಡಬೇಕೆಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com