ಆಗಸ್ಟ್ ಅಂತ್ಯಕ್ಕೆ ಕರ್ನಾಟಕಕ್ಕೆ ಅಪ್ಪಳಿಸಲಿದೆ ಕೋವಿಡ್-19 3ನೇ ಅಲೆ: ತಜ್ಞರ ಎಚ್ಚರಿಕೆ

ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಆರ್ಭಟಿಸುತ್ತಿರುವ ಕೋವಿಡ್-19 3ನೇ ಅಲೆ ಭಾರತದಲ್ಲೂ ತನ್ನ ಆರ್ಭಟ ನಡುಸುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕದಲ್ಲಿ ಆಗಸ್ಟ್ ಅಂತ್ಯಕ್ಕೆ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಈಗಾಗಲೇ ಜಗತ್ತಿನ ಹಲವು ದೇಶಗಳಲ್ಲಿ ಆರ್ಭಟಿಸುತ್ತಿರುವ ಕೋವಿಡ್-19 3ನೇ ಅಲೆ ಭಾರತದಲ್ಲೂ ತನ್ನ ಆರ್ಭಟ ನಡುಸುವುದು ಬಹುತೇಕ ಖಚಿತವಾಗಿದ್ದು, ಕರ್ನಾಟಕದಲ್ಲಿ ಆಗಸ್ಟ್ ಅಂತ್ಯಕ್ಕೆ 3ನೇ ಅಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ದೇಶದಲ್ಲಿ 3ನೇ ಅಲೆಯ ಚರ್ಚೆಗಳು ಆರಂಭವಾಗಿದ್ದು, ರಾಜ್ಯ ಸರ್ಕಾರಗಳು ಸೂಕ್ತ ಸಿದ್ಧತೆ ನಡೆಸುವಂತೆ ಕೇಂದ್ರ ಆರೋಗ್ಯ ಇಲಾಖೆ ಕೂಡ ಸೂಚನೆ ನೀಡಿದೆ. ಇದರ ನಡುವೆಯೇ ರಾಜ್ಯಕ್ಕೆ ಮುಂಬರುವ ಆಗಸ್ಟ್ ತಿಂಗಳ ಅಂತ್ಯಕ್ಕೆ 3ನೇ ಅಲೆ ಆಗಮಿಸುವ ಕುರಿತು ತಜ್ಞರು ಎಚ್ಚರಿಕೆ ನೀಡಿದ್ದಾರೆ.  ಮೂರನೇ ಅಲೆಯು ಈ ಹಿಂದೆ ಆರ್ಭಟಿಸಿದ್ದ 2ನೇ ಅಲೆಯ ಮುಂದುವರೆಕೆಯಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಲ್ಲಿಯವರೆಗೆ ಕಡಿಮೆ ಸೆರೊಪ್ರೆವೆಲೆನ್ಸ್ ಹೊಂದಿದ್ದ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಿರಂತರವಾಗಿ ಸೋಂಕು ಪ್ರಸರಣ ಚಾಲ್ತಿಯರುವ ಕಾರಣ, ಸೋಂಕು ವ್ಯಾಪಕವಾಗಿ ವಿಸ್ತರಿಸುತ್ತಿದೆ ಎಂದು ಇದು ಸೂಚಿಸುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಮತ್ತು ತಾಂತ್ರಿಕ ಸಲಹಾ ಸಮಿತಿಯ ಸದಸ್ಯ  ಡಾ.ಗಿರಿಧರ್ ಬಾಬು ಹೇಳಿದ್ದಾರೆ. 

'ನಾವು ಎರಡನೇ ಅಲೆಯ ಅಂತ್ಯದಲ್ಲಿದ್ದೇವೆ. ಕರ್ನಾಟಕದಲ್ಲಿ, ಪ್ರಕರಣಗಳ ಸಂಖ್ಯೆ ಕ್ಷೀಣಿಸುತ್ತಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ಬೇಡ. ಸಾಮೂಹಿಕ ಜನಸಂದಣಿಗೆ ಅವಕಾಶ ನೀಡಿದರೇ ಅವರೇ ಕೋರೊನಾ ಸೋಂಕು ಸೂಪರ್ ಸ್ಪ್ರೆಡರ್ ಗಳಾಗುವ ಸಾಧ್ಯತೆ ಇದೆ. ಇದನ್ನೂ ನಾವು ನಿಯಂತ್ರಿಸಲೇಬೇಕು ಎಂದು  ಅವರು ಹೇಳಿದ್ದಾರೆ.

ಇದೇ ವಿಚಾರವಾಗಿ ಮಾತನಾಡಿದ ಶ್ರೀ ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋವಾಸ್ಕುಲರ್ ಡಿಸೀಸ್ ಅಂಡ್ ರಿಸರ್ಚ್ ನಿರ್ದೇಶಕ ಡಾ.ಮಂಜುನಾಥ್ ಸಿ.ಎನ್ ಅವರು, ಕೋವಿಡ್ 2ನೇ ಅಲೆ ತಗ್ಗಿದೆ ಎಂದು ನಾವು ವಿಶ್ರಮಿಸುವಂತಿಲ್ಲ. ಕರ್ನಾಟಕವು ಇನ್ನೂ ಮೂರನೇ ಅಲೆಯ ಆಕ್ರಮಣವನ್ನು ಕಂಡಿಲ್ಲ. ಆದರೆ  ನಾವು ಶೀಘ್ರದಲ್ಲೇ ಅಂತಹ ಪ್ರವೃತ್ತಿಗಳನ್ನು ನೋಡಬಹುದು ಎಂದು ಹೇಳಿದರು.

ಇನ್ನು ಖ್ಯಾತ ವೈರಾಲಜಿಸ್ಟ್, ಸಿಎಮ್ಸಿ ವೆಲ್ಲೂರಿನ ಮೈಕ್ರೋಬಯಾಲಜಿ ಪ್ರಾಧ್ಯಾಪಕ, ಡಾ. ಗಗನ್‌ದೀಪ್ ಕಾಂಗ್ ಅವರು, ಇದು ಬಹುಶಃ ಎರಡನೇ ಅಲೆಯ ಅಂತ್ಯ ಮತ್ತು ಮೂರನೇ ಅಲೆಯ ಪ್ರಾರಂಭವಾಗುವ ಸಾಧ್ಯತೆಯೂ ಇದೆ ಎಚ್ಚರಿಸಿದ್ದಾರೆ.

ಉಡುಪಿಯ ಡಾ.ಟಿಎಂಎ ಪೈ ಆಸ್ಪತ್ರೆಯ ಪ್ರಾಧ್ಯಾಪಕ ಮತ್ತು ಜನರಲ್ ಇಂಟರ್ನಲ್ ಮೆಡಿಸಿನ್ ಮುಖ್ಯಸ್ಥ ಡಾ.ಶಶಿಕರಣ್ ಅವರು, ಕಳೆದ ವರ್ಷ ಜುಲೈನಲ್ಲಿ, ನಾವು ಇನ್ನೊಂದು ಅಲೆ ಸಂಭವಿಸುವದಿಲ್ಲ ಎಂದು ಭಾವಿಸಿದ್ದೆವು. ಆದರೆ 2ನೇ ಅಲೆ ಮೊದಲ ಅಲೆಗಿಂತ ಘೋರವಾಗಿತ್ತು. ನಾವು ಈಗ ಮೂರನೇ ಅಲೆಯ  ಆಗಮನದ ಭೀತಿಯಲ್ಲಿದ್ದೇವೆ. ಎರಡು ಅಲೆಗಳ ನಡುವಿನ ಅಂತರವನ್ನು ನಾವು ನೋಡದಿರಬಹುದು. ಕಳೆದ ಬಾರಿ ಕಟ್ಟುನಿಟ್ಟಾದ ಲಾಕ್‌ಡೌನ್ ಇತ್ತು, ಆದರೆ ಈ ಬಾರಿ ಅದು ಇಲ್ಲ. ಹೀಗಾಗಿ ಸಾಂಕ್ರಾಮಿಕದ ಆತಂಕ ಈಗ ಜೋರಾಗಿದೆ.

ಹಿಂದಿನ ಅಲೆಗಳ ಸಾಕ್ಷ್ಯಗಳು ಸಾಕಷ್ಟಿದ್ದು, ಮೊದಲ ಅಲೆ ವೇಳೆ ಡಿ 614 ಜಿ ರೂಪಾಂತರದಿಂದ ಮತ್ತು ಎರಡನೆ ಅಲೆ ವೇಳೆ ಡೆಲ್ಟಾ ರೂಪಾಂತರ ಆರ್ಭಟವಿತ್ತು ಎಂದು ಎಚ್‌ಸಿಜಿ ಆಸ್ಪತ್ರೆಗಳ ಸೆಂಟರ್ ಫಾರ್ ಅಕಾಡೆಮಿಕ್ ರಿಸರ್ಚ್ ಮತ್ತು ಜೀನೋಮ್ ಸೀಕ್ವೆನ್ಸಿಂಗ್ ಸಮಿತಿಯ ಸದಸ್ಯ ಡಾ. ವಿಶಾಲ್ ರಾವ್  ಹೇಳಿದ್ದಾರೆ. 

ಡೆಲ್ಟಾ ರೂಪಾಂತರದಿಂದ ಉಂಟಾಗುವ ಮತ್ತೊಂದು ಮೂರನೇ ಅಲೆಯು ಎರಡನೇ ಅಲೆಗೆ ಸಮಾನಾರ್ಥಕವಾಗಿರಬಹುದು ಅಥವಾ ಅದರ ವಿಸ್ತರಣೆಯಾಗಿರಬಹುದು ಎಂದು ನಾನು ನಂಬುತ್ತೇನೆ. ಆದರೆ, ಮೂರನೇ ಅಲೆಯು ಡೆಲ್ಟಾದ ವಿಕಾಸದ ಭಾಗವಾಗಿರುವ ಸಂಪೂರ್ಣವಾಗಿ ಹೊಸ ರೂಪಾಂತರದ  ಸಾಕ್ಷ್ಯಗಳನ್ನು ನೋಡಲು ಹೋದರೆ, ಅದು ಹೆಚ್ಚು ಆತಂಕಕಾರಿಯಾಗಲಿದೆ. ಡೆಲ್ಟಾ ರೂಪಾಂತರದ ಜಿಗಿತದ ಸಮಯವು ಎರಡು ತಿಂಗಳಲ್ಲಿ ಸುಮಾರು ಶೇ.3 ರಿಂದ ಶೇ.30ಕ್ಕೆ ಏರಿಕೆಯಾಗಿದೆ. ಈ ಅಂಕಿಅಂಶಗಳ ಆಧಾರ ಮೇಲೆ ಆಗಸ್ಟ್ ಮೂರನೇ ವಾರದಲ್ಲಿ ಮೂರನೇ ಅಲೆ ರಾಜ್ಯಕ್ಕೆ ಅಪ್ಪಳಿಸಬಹುಜು. ನಾವು  ಈಗಾಗಲೇ ಎರಡು ತಿಂಗಳ ಅವಧಿಯ 15 ದಿನಗಳನ್ನು ಕಳೆದಿದ್ದೇವೆ. ನಮ್ಮ ವ್ಯಾಕ್ಸಿನೇಷನ್ ನಿಧಾನವಾಗಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com