ಮತ್ತಷ್ಟು ಕಾವೇರಿ ನೀರು ಬಳಕೆಗೆ ತಮಿಳುನಾಡು ಪ್ಲಾನ್: ರಾಜ್ಯದ ಆಕ್ಷೇಪ; ಸುಪ್ರೀಂ ಕೋರ್ಟ್ ಗೆ ಕರ್ನಾಟಕ ಅರ್ಜಿ

ಕಾವೇರಿ ಕೊಳ್ಳದಲ್ಲಿ ಹೆಚ್ಚುವರಿ ಲಭ್ಯವಿರುವ 91 ಟಿಎಂಸಿ ಅಡಿ ನೀರಿನ ಮೇಲೆ ಹಕ್ಕು ಪ್ರತಿಪಾದಿಸಿರುವ ಕರ್ನಾಟಕ ರಾಜ್ಯವು, ತಮಿಳುನಾಡು ಸರ್ಕಾರ ಯೋಜಿಸಿರುವ ಕಾವೇರಿ-ವೈಗೈ-ಗುಂಡರ್ ಸರಪಳಿ ನೀರಾವರಿ ಯೋಜನೆಯನ್ನು ವಿರೋಧಿಸಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕಾವೇರಿ ಕೊಳ್ಳದಲ್ಲಿ ಹೆಚ್ಚುವರಿ ಲಭ್ಯವಿರುವ 91 ಟಿಎಂಸಿ ಅಡಿ ನೀರಿನ ಮೇಲೆ ಹಕ್ಕು ಪ್ರತಿಪಾದಿಸಿರುವ ಕರ್ನಾಟಕ ರಾಜ್ಯವು, ತಮಿಳುನಾಡು ಸರ್ಕಾರ ಯೋಜಿಸಿರುವ ಕಾವೇರಿ-ವೈಗೈ-ಗುಂಡರ್ ಸರಪಳಿ ನೀರಾವರಿ ಯೋಜನೆಯನ್ನು ವಿರೋಧಿಸಿದೆ. 

ಈ ಸಂಬಂಧ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವ ರಾಜ್ಯ ಸರ್ಕಾರವು. ಕಾವೇರಿ-ಗುಂಡಾರ್ ಸಂಪರ್ಕ ಯೋಜನೆ ಅಡಿ ತಮಿಳುನಾಡು ನೀರು ಬಳಕೆ ಮಾಡಲು ಹೊರಟಿದೆ. ಈ ಯೋಜನೆಗೆ ಹೆಚ್ಚುವರಿ 45 ಟಿಎಂಸಿ ಪೂರೈಕೆ ಮಾಡಲು ತಮಿಳುನಾಡು ಮುಂದಾಗಿದೆ. ಈ ಯೋಜನೆ ಸಂಬಂಧ ತಮಿಳುನಾಡು ಸರ್ಕಾರವು ಕೋರಿರುವ ಅನುಮತಿಗಳನ್ನು ಕೇಂದ್ರ ಸರ್ಕಾರ ನೀಡದಂತೆ ಪ್ರತಿಬಂಧಕ ಆದೇಶ (ಇಂಜೆಂಕ್ಷನ್) ನೀಡಬೇಕೆಂದು ಮನವಿ ಮಾಡಿಕೊಂಡಿದೆ. 

ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿರುವುದನ್ನು ದೃಢಪಡಿಸಿರುವ ಸರ್ಕಾರದ ಮೂಲಗಳು, ಕಾನೂನು ತಂಡದ ಸಲಹೆಗಳ ಮೇರೆಗೆ ಅರ್ಜಿ ಸಲ್ಲಿಸಲಾಗಿದೆ. ಹೆಚ್ಚುವರಿ ನೀರು ಬಳಕೆಗೆ ಮುಂದಾಗಿರುವ ತಮಿಳುನಾಡು ಸರ್ಕಾರದ ನಡೆಗೆ ನಾವು ವಿರೋಧ ವ್ಯಕ್ತಪಡಿಸುತ್ತಿದ್ದೇವೆ ಎಂದು ಹೇಳಿದೆ. 

ಫೆಬ್ರುವರಿ 2, 2018ರಲ್ಲಿ ಸುಪ್ರೀಂಕೋರ್ಟ್​ ನೀಡಿದ್ದ ತೀರ್ಪಿನಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ ಪ್ರತಿವರ್ಷ ಒಟ್ಟು 177.25 ಟಿಎಂಸಿ ನೀರು ಹರಿಸಬೇಕೆಂದು ಸೂಚಿಸಲಾಗಿತ್ತು. ಬಿಳಿಗುಂಡ್ಲು ಗ್ರಾಮದಲ್ಲಿರುವ ನದಿ ನೀರಿನ ಮಾಪಕದಲ್ಲಿ ತಮಿಳುನಾಡಿಗೆ ಕರ್ನಾಟಕದಿಂದ ಹರಿದ ನೀರಿನ ಪ್ರಮಾಣವನ್ನು ಲೆಕ್ಕಹಾಕಲಾಗುತ್ತದೆ. ಕೇರಳವು ಅದರ ಪಾಲಿನ 21 ಟಿಎಂಸಿ ನೀರು ಉಳಿಸಿಕೊಂಡ ನಂತರ ಮತ್ತು ತಮಿಳುನಾಡಿಗೆ 177.25 ಟಿಎಂಸಿ ನೀರು ಹರಿಸಿದ ನಂತರವೂ ಕರ್ನಾಟಕಕ್ಕೆ ಹೆಚ್ಚುವರಿಯಾಗಿ 91 ಟಿಎಂಸಿ ನೀರು ಉಳಿದುಕೊಳ್ಳುತ್ತದೆ. ಹೆಚ್ಚುವರಿಯಾಗಿ ತಮಿಳುನಾಡಿಗೆ ಹರಿಯುತ್ತಿದ್ದ ಈ ನೀರಿನ ಸದುಪಯೋಗಕ್ಕಾಗಿ ಮೇಕೆದಾಟು ಸಮೀಪ ಅಣೆಕಟ್ಟು ಕಟ್ಟಲು ಕರ್ನಾಟಕ ಚಿಂತನೆ ನಡೆಸಿದೆ.

1934-35ರಿಂದ 1971-72ರ ಅವಧಿಯಲ್ಲಿ ಬಿಳಿಗುಂಡ್ಲು ಮಾಪನ ಕೇಂದ್ರದಲ್ಲಿ ವರ್ಷಕ್ಕೆ ಸರಾಸರಿ 483 ಟಿಎಂಸಿ ನೀರು ಹರಿದಿದೆ. ಇದರಲ್ಲಿ ಅರ್ಧದಷ್ಟು ಪ್ರಮಾಣವನ್ನು ಕರ್ನಾಟಕ ಸರ್ಕಾರ ತನ್ನ ಲೆಕ್ಕಾಚಾರಕ್ಕೆ ಆಧಾರವಾಗಿ ತೆಗೆದುಕೊಂಡಿದೆ.

ತಮಿಳುನಾಡು ರಾಜ್ಯವು ಹೊಸದಾಗಿ ಆರಂಭಿಸಿರುವ ನದಿ ಜೋಡಣೆ ಯೋಜನೆಯಿಂದ 45 ಟಿಎಂಸಿ ನೀರು ಬಳಸಿಕೊಳ್ಳಲು ಉದ್ದೇಶಿಸಿದೆ. ಈ ಯೋಜನೆಗೆ ಅನುಮತಿ ನೀಡಿದರೆ ಕರ್ನಾಟಕವು ಹೆಚ್ಚುವರಿಯಾಗಿ ತಮಿಳುನಾಡಿಗೆ ನೀರು ಹರಿಸಲೇಬೇಕಾದ ಅನಿವಾರ್ಯತೆಗೆ ಕಟ್ಟುಬೀಳಬೇಕಾಗುತ್ತದೆ. 

ಮುಂದಿನ ದಿನಗಳಲ್ಲಿ ಈ ನೀರನ್ನು ತಮಿಳುನಾಡು ತನ್ನ ಹಕ್ಕಿನಂತೆ ಪ್ರತಿಪಾದಿಸಬಹುದು. ಆಗ ಅವರಿಗೇ ಮೇಲುಗೈ ಆಗಬಹುದು. ಹೀಗಾಗಿಯೇ ನಾವು ಆಕ್ಷೇಪ ಸಲ್ಲಿಸಿದ್ದೇವೆ ಎಂದು ಕರ್ನಾಟಕ ಸರ್ಕಾರ ಹೇಳಿದೆ.

ಫೆಬ್ರುವರಿ 2021ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದ ಕರ್ನಾಟಕ ಸರ್ಕಾರ, ನೀರಾವರಿ ಯೋಜನೆ ಆರಂಭಿಸಲು ತಮಿಳುನಾಡು ಸರ್ಕಾರಿ ಕೋರಿರುವ ಅನುಮತಿಗಳನ್ನು ನೀಡಬಾರದು ಎಂದು ವಿನಂತಿಸಿತ್ತು.

ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಸಂಬಂಧ ಹದಗೆಡಿಸಿರುವ ಕಾವೇರಿ ಜಲವಿವಾದಕ್ಕೆ ಸುಮಾರು 130 ವರ್ಷಗಳ ಇತಿಹಾಸವಿದೆ. 

1892 ರಿಂದಲೂ ಕಾವೇರಿ ವಿವಾದದ ಚರ್ಚೆಗಳು ನಡೆಯುತ್ತಲೇ ಇವೆ. ಬ್ರಿಟಿಷರ ಅಧೀನದಲ್ಲಿದ್ದ ಮದ್ರಾಸ್ ಪ್ರೆಸಿಡೆನ್ಸಿ ಮತ್ತು ಮೈಸೂರು ಸಂಸ್ಥಾನಗಳು ಈ ಸಂಬಂಧ 1892ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. 1911ರಲ್ಲಿ ಮೈಸೂರು ಮಹಾರಾಜರು ಕೃಷ್ಣರಾಜಸಾಗರ ಜಲಾಶಯ ನಿರ್ಮಾಣಕ್ಕೆ ಮುಂದಾದಾಗ ಹಲವು ಪ್ರಶ್ನೆಗಳು ಕೇಳಿಬಂದಿದ್ದವು. ನ್ಯಾಯಮೂರ್ತಿ ಎಚ್​.ಡಿ.ಗ್ರಿಫಿನ್ಸ್​ ಎರಡೂ ಸರ್ಕಾರಗಳ ನಡುವೆ ಸಹಮತ ಮೂಡಿಸಲು ಯತ್ನಿಸಿದ್ದರು. ಆದರೆ ಈ ಒಪ್ಪಂದವನ್ನು ಲಂಡನ್​ನಲ್ಲಿದ್ದ ಬ್ರಿಟಿಷ್ ಸರ್ಕಾರದ ಭಾರತದ ಕಾರ್ಯದರ್ಶಿ ತಡೆಹಿಡಿದಿದ್ದರು. ಇದಾದ ನಂತರ 1924ರಲ್ಲಿ ಮತ್ತೊಂದು ಒಪ್ಪಂದವಾಗಿತ್ತು.

ಕಾವೇರಿ ಕೊಳ್ಳದ ಶೇ 80ರಷ್ಟು ನೀರನ್ನು ತಂಜಾವೂರು ಡೆಲ್ಟಾ ಪ್ರದೇಶಕ್ಕೆ ಮೆಟ್ಟೂರು ಜಲಾಶಯದಿಂದ ಒದಗಿಸಲು ಬ್ರಿಟಿಷ್ ಆಡಳಿತ ಮುಂದಾಗಿತ್ತು. ಈ ಕ್ರಮಕ್ಕೆ ಮೈಸೂರು ಬದ್ಧವಾಗಬೇಕಾಯಿತು. ಸ್ವಾತಂತ್ರ್ಯ ಬಂದ ನಂತರ 1973ರಲ್ಲಿ ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು. ಹೇಮಾವತಿ, ಕಬಿನಿ, ಹಾರಂಗಿ ಮತ್ತಿತರರ ಕಾವೇರಿ ಉಪನದಿಗಳಿಗೆ ಹಲವು ಜಲಾಶಯಗಳನ್ನು ನಿರ್ಮಿಸಿ ತನ್ನ ಪಾಲಿನ ನೀರು ಬಳಸಿಕೊಳ್ಳಲು ಮುಂದಾಯಿತು. ಎರಡೂ ರಾಜ್ಯಗಳ ನಡುವೆ ನೀರಿನ ಬಳಕೆ ವಿವಾದದ ಕಾವು ಹೆಚ್ಚಾದ ಹಿನ್ನೆಲೆಯಲ್ಲಿ 1990ರಲ್ಲಿ ನ್ಯಾಯಾಧಿಕರಣ ರಚಿಸಲಾಯಿತು.

ತಮಿಳುನಾಡು ಸರ್ಕಾರವು ವಾರ್ಷಿಕ 360 ಟಿಎಂಸಿ ನೀರನ್ನು ಮೆಟ್ಟೂರು ಜಲಾಶಯದ ಮೂಲಕ ಬಳಸಿಕೊಳ್ಳುತ್ತೇನೆಂದು ಹಕ್ಕು ಸ್ಥಾಪಿಸಲು ಯತ್ನಿಸಿತು. ಆದರೆ ನ್ಯಾಯಾಧಿಕರಣವು 192 ಟಿಎಂಸಿ ನೀರು ಒದಗಿಸಲು ಸಮ್ಮತಿಸಿತ್ತು. ನಂತರ, ಫೆಬ್ರುವರಿ 16, 2021ರಲ್ಲು ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿ ಈ ಪ್ರಮಾಣವನ್ನು 177.25 ಟಿಎಂಸಿಗೆ ಇಳಿಸಿತು. ಇದೀಗ ಕರ್ನಾಟಕ ಸರ್ಕಾರವು ಸಲ್ಲಿಸಿರುವ ತಕರಾರರು ಅರ್ಜಿಯು ಈ ತೀರ್ಪಿನ ಅರ್ಥೈಸುವಿಕೆಯನ್ನು ವಿನಂತಿಸುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com