ಕೋವಿಡ್-19 3ನೇ ಅಲೆ: ನೂತನ ಸಿಎಂ ಮುಂದೆ ಕಠಿಣ ಸವಾಲು, ಆರೋಗ್ಯ ಮೂಲಭೂತ ಸೌಕರ್ಯ ಹೆಚ್ಚಳ ಕುರಿತು ಕಠಿಣ ನಿರ್ಧಾರ ಅನಿವಾರ್ಯ

ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಿನಾಮೆ ಬೆನ್ನಲ್ಲೇ ನಾನಾ ವಿಚಾರಗಳ ಕುರಿತು ಚರ್ಚೆ ಎದ್ದಿದ್ದು, ಪ್ರಮುಖವಾಗಿ ಕೋವಿಡ್ 3ನೇ ಅಲೆ ಭೀತಿ ನಡುವೆ ರಾಜ್ಯದಲ್ಲಿ ಆರೋಗ್ಯ ಮೂಲಭೂತ ಸೌಕರ್ಯಗಳ ಕುರಿತು ಗಮನ ಹರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.
ಆರೋಗ್ಯ ಮೂಲಭೂತ ಸೌಕರ್ಯ
ಆರೋಗ್ಯ ಮೂಲಭೂತ ಸೌಕರ್ಯ

ಬೆಂಗಳೂರು: ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಅವರ ರಾಜಿನಾಮೆ ಬೆನ್ನಲ್ಲೇ ನಾನಾ ವಿಚಾರಗಳ ಕುರಿತು ಚರ್ಚೆ ಎದ್ದಿದ್ದು, ಪ್ರಮುಖವಾಗಿ ಕೋವಿಡ್ 3ನೇ ಅಲೆ ಭೀತಿ ನಡುವೆ ರಾಜ್ಯದಲ್ಲಿ ಆರೋಗ್ಯ ಮೂಲಭೂತ ಸೌಕರ್ಯಗಳ ಕುರಿತು ಗಮನ ಹರಿಸಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಬಿಎಸ್ ಯಡಿಯೂರಪ್ಪ ಸಿಎಂ ಆಗಿದ್ದ ಸಂದರ್ಭದಲ್ಲೂ ಸರ್ಕಾರ ಆರೋಗ್ಯ ಮೂಲಭೂತ ಸೌಕರ್ಯ ಒದಗಿಸಲು ಸಾಕಷ್ಟು ಹೆಣಗಾಡಿತ್ತು. ನಿಜಕ್ಕೂ ಅದು ಸರ್ಕಾರಕ್ಕೆ ಅಗ್ನಿ ಪರೀಕ್ಷೆಯೇ ಆಗಿತ್ತು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಬಿಎಸ್ ವೈ ಸರ್ಕಾರ ತೆಗೆದುಕೊಂಡ ಕೆಲವು  ಕಠಿಣ ನಿರ್ಧಾರಗಳ ಹೊರತಾಗಿಯೂ ರಾಜ್ಯ ಸರ್ಕಾರದ ಬೊಕ್ಕಸವನ್ನು ತುಂಬಿಸುವ ಅಥವಾ ನಿರ್ವಹಿಸುವ ನಿಟ್ಟಿನಲ್ಲಿ ತಾವೇ ಹೇರಿದ್ದ ನಿರ್ಣಯಗಳಲ್ಲಿ ತೆಗೆದುಕೊಂಡ ಯೂಟರ್ನ್ ನಿರ್ಧಾರಗಳು ಸಾಕಷ್ಟು ಬಾರಿ ಚರ್ಚೆಗೆ ಆಹಾರಾವಾಗಿದ್ದವು. ಆದಾಗ್ಯೂ ಮುಂದಿನ ಸಿಎಂ ಪದಗ್ರಹಣವಾದ ಕೋವಿಡ್-19 ಮೂರನೇ  ಅಲೆಯನ್ನು ದೃಷ್ಟಿಯಲ್ಲಿರಿಸಿಕೊಂಡು ತುರ್ತಾಗಿ ಕೈಗೊಳ್ಳಬೇಕಾದ ನಿರ್ಧಾರಗಳನ್ನು ತಜ್ಞರು ಪಟ್ಟಿಮಾಡಿದ್ದಾರೆ.

ಈ ಪೈಕಿ ಶಾಲೆಗಳು ತೆರೆಯುವುದನ್ನು ಖಚಿತಪಡಿಸಿಕೊಳ್ಳುವುದು ಮತ್ತು ತುರ್ತು ಆಧಾರದ ಮೇಲೆ ಲಸಿಕೆಗಳನ್ನು ಸಂಗ್ರಹಿಸುವುದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಕೋವಿಡ್ -19 ಇನ್ನೂ ಮುಗಿದಿಲ್ಲ. ಮೂರನೆಯ ಅಲೆಯನ್ನು ತಪ್ಪಿಸಲು ಲಸಿಕೆ ನೀಡಿಕೆ ಪ್ರಮಾಣವನ್ನು ಕನಿಷ್ಠ ದ್ವಿಗುಣಗೊಳಿಸಬೇಕು ಮತ್ತು  ಶಾಲೆಗಳನ್ನು ಪುನಃ ತೆರೆಯಲು ತಿಳುವಳಿಕೆಯುಳ್ಳ ನೀತಿಯನ್ನು ರೂಪಿಸುವತ್ತ ಸರ್ಕಾರ ಗಮನ ಹರಿಸಬೇಕು ಎಂದು ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ) ಕಂಪ್ಯೂಟೇಶನಲ್ ಮತ್ತು ಡಾಟಾ ಸೈನ್ಸಸ್ ವಿಭಾಗದ ಅಧ್ಯಕ್ಷ ಪ್ರೊ.ಶಶಿಕುಮಾರ್ ಗಣೇಶನ್ ಹೇಳಿದ್ದಾರೆ.

ಹೆಚ್ಚಿನ ಪ್ರಮಾಣದಲ್ಲಿ ಲಸಿಕೆಗಳನ್ನು ಖರೀದಿಸಿದರೆ ಅಥವ ಸಂಗ್ರಹಿಸಿದರೆ ಮಾತ್ರ ವ್ಯಾಕ್ಸಿನೇಷನ್ ಅನ್ನು ಹೆಚ್ಚಿಸಬಹುದು ಎಂದು ತಜ್ಞರು ಒಪ್ಪಿಕೊಂಡಿದ್ದಾರೆ. ಕೋವಿಡ್-19 ತಾಂತ್ರಿಕ ಸಲಹಾ ಸಮಿತಿಯ ಸದಸ್ಯ ಮತ್ತು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಮಂಜುನಾಥ್ ಸಿ.ಎನ್ ಅವರು ಮಾತನಾಡಿ ಬಿಎಸ್  ಯಡಿಯೂರಪ್ಪ ಕೆಲವು ಸಂದರ್ಭಗಳಲ್ಲಿ ಗಟ್ಟಿ ನಿರ್ಧಾರ ಮಾಡುವಲ್ಲಿ ವಿಫಲರಾಗಿದ್ದಾರೆ. ವಿಶೇಷವಾಗಿ ಕೂಟಗಳಿಗೆ ಅವಕಾಶ ನೀಡುವಲ್ಲಿ ಅಂದರೆ ರಾಜಕೀಯ, ಧಾರ್ಮಿಕ ಸಭೆ ಸಮಾರಂಭಗಳು ಮತ್ತು ಚಿತ್ರಮಂದಿರಗಳು ತೆರೆಯುವಿಕೆಯು ಸೋಂಕು ಪ್ರಕರಣಗಳಲ್ಲಿ ದೊಡ್ಡ ಏರಿಕೆಗೆ ಕಾರಣವಾಗುತ್ತದೆ. ಇದನ್ನು  ಖಂಡಿತವಾಗಿ ತಪ್ಪಿಸಬೇಕು. ಹೊಸ ಸಿಎಂ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಮತ್ತು ಯಾವುದೇ ಸಭೆಗಳಿಗೆ, ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಬಾರದು ಎಂದು ಹೇಳಿದರು.

ನಾಯಕತ್ವದ ಬದಲಾವಣೆಯು ಕ್ಯಾಬಿನೆಟ್ ಪುನರ್ರಚನೆಗೆ ಕಾರಣವಾಗಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದ ಸಾಂಕ್ರಾಮಿಕ ರೋಗಶಾಸ್ತ್ರಜ್ಞ, ಲಸಿಕೆ ತಜ್ಞ, ಸಾರ್ವಜನಿಕ ಆರೋಗ್ಯ ಮತ್ತು ನೀತಿ ತಜ್ಞ ಡಾ.ಚಂದ್ರಕಾಂತ್ ಲಹರಿಯಾ ಅವರು, ಹಿಂದಿನ ಸರ್ಕಾರ ತೆಗೆದುಕೊಂಡ ನಿರ್ಧಾರಗಳು  ಮುಂದುವರಿಯಬೇಕು ಎಂದು ಹೇಳುತ್ತಾರೆ. ಸರ್ಕಾರದಲ್ಲಿನ ಬದಲಾವಣೆಯು ಹೊಸ ಕ್ಯಾಬಿನೆಟ್ ಮತ್ತು ಹೊಸ ಆರೋಗ್ಯ ಸಚಿವರನ್ನು ಅರ್ಥೈಸಬಲ್ಲದು. ಆರೋಗ್ಯ ಸಂಬಂಧಿತ ನಿರ್ಧಾರಗಳಲ್ಲಿ ನಿರಂತರತೆ ಇರಬೇಕು. ಹೊಸ ಸಿಎಂ ಅವರು ಆರೋಗ್ಯದ ಹಂಚಿಕೆಯನ್ನು ರಾಜ್ಯ ಬಜೆಟ್‌ನ ಕನಿಷ್ಠ ಶೇ.8% ಕ್ಕೆ  ಹೆಚ್ಚಿಸಬೇಕು. ಸರ್ಕಾರಿ ಆಸ್ಪತ್ರೆಗಳು ಆರೋಗ್ಯ ಕೇಂದ್ರಗಳಲ್ಲಿ ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳನ್ನು ಶೀಘ್ರ ಭರ್ತಿ ಮಾಡಬೇಕು.  ಪ್ರಾಥಮಿಕ ಆರೋಗ್ಯ ಸೌಲಭ್ಯಗಳನ್ನು ಕ್ರಿಯಾತ್ಮಕಗೊಳಿಸುವತ್ತ ಗಮನ ಹರಿಸಬೇಕು ಎಂದು ಹೇಳಿದರು.

ಅಂತೆಯೇ ಕೋವಿಡ್ ಸಾಂಕ್ರಾಮಿಕ ಹಿನ್ನಲೆಯಲ್ಲಿ ಜನರ ಆದಾಯ ಕುಸಿದಿದ್ದು, ಅಪೌಷ್ಟಿಕತೆಯ ಉಲ್ಬಣವನ್ನು ನಿರೀಕ್ಷಿಸಲಾಗಿದೆ ಎಂದು ಸಾರ್ವಜನಿಕ ಆರೋಗ್ಯ ವೈದ್ಯ ಮತ್ತು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜಿನ ಸಂಶೋಧಕ ಡಾ. ಸಿಲ್ವಿಯಾ ಕಾರ್ಪಗಮ್ ಹೇಳಿದ್ದಾರೆ. ಹೊಸ ಸಿಎಂ ಜನರಿಗೆ ಧಾನ್ಯಗಳು  ಮತ್ತು ರಾಗಿಗಳನ್ನು ನೀಡಬಾರದು, ಅದರ ಜೊತೆಗೇ ದ್ವಿದಳ ಧಾನ್ಯಗಳು, ಮೊಟ್ಟೆ, ಮಾಂಸ, ಕೋಳಿ ಮತ್ತು ಮೀನುಗಳನ್ನು ಸಹ ನೀಡಬೇಕು. ಗೋವಧೆ ನಿಷೇಧದಿಂದಾಗಿ ಜೀವನೋಪಾಯವನ್ನು ಕಳೆದುಕೊಂಡವರಿಗೆ ಬೆಂಬಲ ನೀಡಬೇಕಾಗಿದೆ ಎಂದು ಅವರು ವಿವರಿಸಿದರು.  

ಯಡಿಯುರಪ್ಪನನ್ನು “ತಳಮಟ್ಟದ ಸಂಪರ್ಕ ಹೊಂದಿರುವ ವ್ಯಕ್ತಿ” ಎಂದು ಕರೆದ ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ.ಎಚ್. ​​ಸುದರ್ಶನ್ ಬಲ್ಲಾಳ್ ಅವರು, 'ಎರಡನೇ ತರಂಗದ ಉಗ್ರತೆಯು ಅಭೂತಪೂರ್ವ ಮತ್ತು ಅನಿರೀಕ್ಷಿತವಾಗಿತ್ತು. ಈ ಅವಧಿಗಳಲ್ಲಿ ನಾವು ಯಡಿಯೂರಪ್ಪ ಅವರೊಂದಿಗೆ ನಿಕಟವಾಗಿ ಸಂವಹನ  ನಡೆಸಿದೆವು. ಅವರ ಒಂದು ದೊಡ್ಡ ಗುಣವೆಂದರೆ ಅವರು ಖಾಸಗಿ ವಲಯವನ್ನು ಜೊತೆಯಲ್ಲಿ ಕರೆದೊಯ್ದದ್ದು. ಈ ಕಾರಣದಿಂದಾಗಿ, ಕೋವಿಡ್ ಬಿಕ್ಕಟ್ಟನ್ನು ಉತ್ತಮವಾಗಿ ನಿರ್ವಹಿಸಲಾಯಿತು. ನಾವು ದೃಢವಾದ ಆರೋಗ್ಯ ಮೂಲಸೌಕರ್ಯ ಮತ್ತು ಸಿಬ್ಬಂದಿಗಳನ್ನು ಹೊಂದಿರಬೇಕು, ವಿಶೇಷವಾಗಿ ಗ್ರಾಮೀಣ  ಪ್ರದೇಶಗಳಲ್ಲಿ. ಹೆಚ್ಚಿನ ಮಕ್ಕಳ ಮೂಲಸೌಕರ್ಯ, ಡಿಜಿಟಲ್ ತಂತ್ರಜ್ಞಾನ, ಚಿಕಿತ್ಸೆಯ ಸೌಲಭ್ಯಗಳಿಗೆ ಸಹ ಆದ್ಯತೆ ನೀಡಬೇಕಿದೆ ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com