ಬ್ಲ್ಯಾಕ್ ಫಂಗಸ್: ರಾಜ್ಯ ಸರ್ಕಾರದ ಬಳಿ ನಿಖರ ಅಂಕಿಅಂಶ ಇದೆಯೇ ಅಥವಾ ಇದ್ದರೂ ಮರೆಮಾಚುತ್ತಿದೆಯೇ?

ಕೊರೋನಾ ಸಾಂಕ್ರಾಮಿಕ ರೋಗದ ಅಂಕಿ ಅಂಶಗಳನ್ನು ಜನಪ್ರತಿನಿಧಿಗಳು ಮರೆಮಾಚುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಇದೀಗ ಬ್ಲ್ಯಾಕ್ ಫಂಗಸ್ ರೋಗ ಕುರಿತು ರಾಜ್ಯ ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳೂ ಕೂಡ ಸಂಶಯಗಳನ್ನು ಹುಟ್ಟು ಹಾಕುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮೈಸೂರು: ಕೊರೋನಾ ಸಾಂಕ್ರಾಮಿಕ ರೋಗದ ಅಂಕಿ ಅಂಶಗಳನ್ನು ಜನಪ್ರತಿನಿಧಿಗಳು ಮರೆಮಾಚುತ್ತಿದ್ದಾರೆಂಬ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ ಇದೀಗ ಬ್ಲ್ಯಾಕ್ ಫಂಗಸ್ ರೋಗ ಕುರಿತು ರಾಜ್ಯ ಸರ್ಕಾರ ನೀಡುತ್ತಿರುವ ಅಂಕಿ ಅಂಶಗಳೂ ಕೂಡ ಸಂಶಯಗಳನ್ನು ಹುಟ್ಟು ಹಾಕುತ್ತಿವೆ. 

ಆರೋಗ್ಯ ಇಲಾಖೆ ಮಂಗಳವಾರ ಬೆಂಗಳೂರಿನಲ್ಲಿ 557 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆಂದು ಮಾಹಿತಿ ನೀಡಿದೆ. ಆದರೆ, ನಗರದ ಆಸ್ಪತ್ರೆಗಳಲ್ಲಿನ ವರದಿಗಳನ್ನು ನೋಡಿದರೆ, ಈ ಪ್ರಕರಣಗಳು ಹೆಚ್ಚಾಗಿರುವುದು ಕಂಡು ಬಂದಿದೆ. 

ಬೆಂಗಳೂರು ನಗರದ ಮೂರು ಆಸ್ಪತ್ರೆಗಳಲ್ಲಿ ಸಾವು ಪ್ರಕರಣಗಳು ಹೆಚ್ಚಾಗಿ ವರದಿಯಾಗಿವೆ. ಅಪೊಲೋ ಆಸ್ಪತ್ರೆ ಒಂದರಲ್ಲಿಯೇ ಮೂರು ಸಾವುಗಳು ಸಂಭವಿಸಿದ್ದು, ಮಿಂಟೋ ಕಣ್ಣು ಆಸ್ಪತ್ರೆ ಹಾಗೂ ವಿಕ್ಟೋರಿಯಾ ಆಸ್ಪತ್ರೆಯಲ್ಲಿ 34 ಸಾವುಗಳು ಸಂಭವಿಸಿವೆ. ಇನ್ನು ಬೌರಿಂಗ್ ಆಸ್ಪತ್ರೆಯಲ್ಲಿ ನಾಲ್ಕು ಸಾವು ಸಂಭವಿಸಿದ್ದರೆ, ನಾರಾಯಣ ನೇತ್ರಾಲಯ ಹಾಗೂ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ಯಾವುದೇ ಸಾವುಗಳಾಗಿರುವುದು ವರದಿಯಾಗಿಲ್ಲ. ಇನ್ನುಳಿದ 7 ಆಸ್ಪತ್ರೆಗಳು ಮಾಹಿತಿಯನ್ನೇ ಬಹಿರಂಗಪಡಿಸಿಲ್ಲ. 

ಇನ್ನು ಮೈಸೂರಿನಲ್ಲಿ ಅಧಿಕಾರಿಗಳು ಮಾಹಿತಿ ನೀಡಿರುವ ಪ್ರಕಾರ ಜೂನ್ 1 ರಿಂದ  35 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಯಾವುದೇ ಸಾವುಗಳೂ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಮೈಸೂರು ನಗರದ ವಾರ್ ರೂಮ್ ನೀಡಿರುವ ಮಾಹಿತಿಯಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡು ಬಂದಿದೆ. ಅಧಿಕಾರಿಗಳು ನೀಡಿರುವ ಸೋಂಕು ಹಾಗೂ ಸಾವು ಕುರಿತ ಮಾಹಿತಿಗೂ ವಾರ್ ರೂಮ್ ನೀಡಿರುವ ಮಾಹಿತಿಗಳಲ್ಲಿ ವ್ಯತ್ಯಾಸಗಳು ಕಂಡು ಬಂದಿದೆ. 

ಮೇ.31 ರಂದು ನೀಡಲಾಗಿದ್ದ ಮಾಹಿತಿಯಲ್ಲಿ ಮೈಸೂರಿನಲ್ಲಿ 66 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, 8 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 50 ಮಂದಿ ವಿವಿಧ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದ 8 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದರು ಎಂದು ತಿಳಿಸಲಾಗಿತ್ತು. 

ಆದರೆ, ವಾರ್ ರೂಮ್ ಕೆ.ಆರ್. ಆಸ್ಪತ್ರೆಯೊಂದರಲ್ಲಿಯೇ 45 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, 6 ಮಂದಿ ಸಾವನ್ನಪ್ಪಿದ್ದಾರೆ. ಇಬ್ಬರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 37 ಮಂದಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆಂದು ತಿಳಿಸಿದೆ. ಇನ್ನು ಖಾಸಗಿ ಆಸ್ಪತ್ರೆಗಳಲ್ಲಿ 21 ಮಂದಿ ಸೋಂಕಿನಿಂದ ಬಳಲುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆಂದು ತಿಳಿಸಿದೆ. 

ಈ ಬಗ್ಗೆ ಕೆಆರ್ ಆಸ್ಪತ್ರೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರೂ ಕೂಡ ಮಾಹಿತಿ ನೀಡಿ, 45 ಮಂದಿ ಸೋಂಕಿತರಿರುವುದಾಗಿ ಹೇಳಿದ್ದಾರೆ. ಆರೋಗ್ಯ ಇಲಾಕೆ ಅಂಕಿ ಅಂಶಗಳಲ್ಲಿ ತಪ್ಪುಲೆಕ್ಕಚಾರಗಳಾಗಿರಬಹುದು ಎಂದು ಹೇಳಿದ್ದಾರೆ. 

ಬ್ಲ್ಯಾಕ್ ಫಂಗಸ್ ಕುರಿತು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ನೀಡುವ ಮಾಹಿತಿ ಅತ್ಯಂತ ಮುಖ್ಯವಾಗಿದ್ದು, ಈ ಮಾಹಿತಿ ಆಧರಿಸಿ ಕೇಂದ್ರ ಸರ್ಕಾರ ಬ್ಲ್ಯಾಕ್ ಫಂಗಸ್ ರೋಗಕ್ಕೆ ಔಷಧಿಗಳನ್ನು ಪೂರೈಕೆ ಮಾಡುತ್ತಿದೆ. ಸರ್ಕಾರ ತಪ್ಪು ಮಾಹಿತಿ ನೀಡಿದ್ದೇ ಆದರೆ, ರಾಜ್ಯದಲ್ಲಿ ಔಷಧಿಗಳ ಕೊರತೆ ಎದುರಾಗಲಿದೆ. 

ಈ ಬಗ್ಗೆ ಆರೋಗ್ಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್ ಚಂದ್ರ ಅವರು ಪ್ರತಿಕ್ರಿಯೆ ನೀಡಿ, ರಾಜ್ಯ ಸರ್ಕಾರ ಪ್ರಕರಣಗಳನ್ನು ಕಡಿಮೆಯಿದೆ ಎಂದು ವರದಿ ಮಾಡುತ್ತಿಲ್ಲ. ಆದರೆ, ಕೆಲವರು ಅಂಕಿಅಂಶಗಳ ಸೂಕ್ತ ರೀತಿಯಲ್ಲಿ ನೀಡುತ್ತಿಲ್ಲ. ಇದರಿಂದ ಸಮಸ್ಯೆಯಾಗುತ್ತಿದೆ. ಮೈಸೂರು ಜಿಲ್ಲೆಯ ಪೋರ್ಟಲ್ ಅಂಕಿಅಂಶಗಳನ್ನು ಅಪ್ಡೈಟ್ ಮಾಡುತ್ತಿಲ್ಲದಿರಬಹುದು. ಈ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಆರೋಗ್ಯ ಸಚಿವ ಸುಧಾಕರ್ ಅವರು ಮಾತನಾಡಿ, ಸೋಂಕು ಪ್ರಕರಣಗಳನ್ನು ಕಡಿಮೆ ನೀಡುವ ಯಾವುದೇ ಉದ್ದೇಶ ಸರ್ಕಾರಕ್ಕೆ ಇಲ್ಲ. ಸೋಂಕು ಪ್ರಕರಣ ಶೀಘ್ರಗತಿಯಲ್ಲಿ ಪತ್ತೆಯಾದರೆ, ನಮಗೆ ಉಪಯುಕ್ತವಾಗುತ್ತದೆ. ಸೂಕ್ತ ಸಮಯದಲ್ಲಿ ಉತ್ತಮ ಚಿಕಿತ್ಸೆ ನೀಡಿ, ಜೀವ ಉಳಿಸಬಹುದಾಗಿದೆ. ಅಲ್ಲದೆ, ಕೇಂದ್ರ ಸರ್ಕಾರದಿಂದಲೂ ಸೂಕ್ತ ಪ್ರಮಾಣದಲ್ಲಿ ಔಷಧಿಗಳನ್ನು ಪಡೆದುಕೊಳ್ಳಬಹುದಾಗಿದೆ. ಅಂಕಿಅಂಶಗಳನ್ನು ಮರೆಮಾಚುವ ಯಾವುದೇ ಪ್ರಶ್ನೆಗಳೂ ಇಲ್ಲಿ ಉದ್ಭವಿಸುವುದಿಲ್ಲ ಎಂದು ತಿಳಿಸಿದ್ದಾರೆ. 

ಜನರು ತಮ್ಮ ತಮ್ಮ ಜಿಲ್ಲೆಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವುದರಿಂದ ಅಂಕಿಅಂಶಗಳಲ್ಲಿ ವ್ಯತ್ಯಾಸಗಳು ಕಂಡು ಬರುತ್ತಿರಬಹುದು. ಇಲ್ಲವೇ ತಾಂತ್ರಿಕ ಸಮಸ್ಯೆ ಅಥವಾ ಲಾಜಿಸ್ಟಿಕ್ ಸಮಸ್ಯೆಗಳು ಎದುರಾಗಿರಬಹುದು. ಬ್ಲ್ಯಾಕ್ ಫಂಗಸ್ ಕುರಿತು ಸಂಭವಿಸಿರುವ ಸಾವುಗಳ ಕುರಿತು ಸರ್ಕಾರ ಆಡಿಟ್ ನಡೆಸಲಾಗುತ್ತದೆ. ಆಡಿಟ್ ಬಳಿಕ ನಮಗೆ ಸಾವಿನ ಕುತಿರು ಸ್ಪಷ್ಟ ಮಾಹಿತಿಗಳು ಲಭ್ಯವಾಗಲಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com