ವಿಭಿನ್ನ ಮಾದರಿಯಲ್ಲಿ ಜುಲೈ ತಿಂಗಳಿನಲ್ಲಿ ಎಸ್ಎಸ್ಎಲ್'ಸಿ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧಾರ

ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.
ಸಚಿವ ಸುರೇಶ್ ಕುಮಾರ್
ಸಚಿವ ಸುರೇಶ್ ಕುಮಾರ್

ಬೆಂಗಳೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಎಸ್​ಎಸ್​ಎಲ್​ಸಿಗೆ ಪರೀಕ್ಷೆ ನಡೆಸದೇ ಇರುವುದು ಸುಲಭವಲ್ಲ. ಎಸ್​ಎಸ್​ಎಲ್​ಸಿ ಮಕ್ಕಳನ್ನು ಕಳೆದ ವರ್ಷದ ಆಧಾರದ ಮೇಲೆ ಪಾಸ್​ ಮಾಡೋಣವೆಂದರೆ ಕಳೆದ ಬಾರಿ 9ನೇ ತರಗತಿ ಪರೀಕ್ಷೆಯೂ ನಡೆದಿಲ್ಲ. ಕೆಲ ಸಮೀಕ್ಷೆಗಳಲ್ಲಿ ಪರೀಕ್ಷೆ ಬೇಡ ಅನ್ನುವ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಆದರೆ, ಎಸ್​ಎಸ್​ಎಲ್​ಸಿಗೆ ಪರೀಕ್ಷೆ ನಡೆಸದೇ ಇರುವುದು ಸುಲಭವಿಲ್ಲ. ಈ ಬಾರಿ 8 ಲಕ್ಷ 75 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆಯುತ್ತಿದ್ದಾರೆಂದು ಹೇಳಿದ್ದಾರೆ. 

ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್ ನೀಡಲಾಗುತ್ತದೆ​, ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರಶ್ನೆಗಳು ಸರಳ ಹಾಗೂ ನೇರವಾಗಿರಲಿದ್ದು, ವಿದ್ಯಾರ್ಥಿಗಳು ಆತಂಕಪಡುವ ಆಗತ್ಯವಿಲ್ಲ. ಇದೇ ರೀತಿ ಇನ್ನೊಂದು ಪತ್ರಿಕೆ ಭಾಷಾ ವಿಷಯಗಳು ಇರಲಿವೆ ಎಂದು ತಿಳಿಸಿದ್ದಾರೆ.

ಜುಲೈ 3ನೇ ವಾರದಲ್ಲಿ ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ತೀರ್ಮಾನ
ಜುಲೈ 3ನೇ ವಾರದಲ್ಲಿ ಪರೀಕ್ಷೆ ನಡೆಸಲು ತೀರ್ಮಾನ ಕೈಗೊಳ್ಳಲಾಗಿದ್ದು, 20 ದಿನ ಮುಂಚಿತವಾಗಿ ಪರೀಕ್ಷೆ ದಿನಾಂಕ ಘೋಷಣೆ ಮಾಡಲಾಗುವುದು. ಕೊವಿಡ್ ಕಾರಣದಿಂದ ಪರೀಕ್ಷೆ ಬರೆಯಲು ಆಗದಿದ್ದರೆ. ಅಂತಹ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ಅವಕಾಶವಿದೆ. ಹೊಸ ಅಭ್ಯರ್ಥಿಗಳಾಗಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು. 6 ಸಾವಿರ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುವುದು. ಈ ಬಾರಿ ದುಪ್ಪಟ್ಟು ಕೇಂದ್ರಗಳಲ್ಲಿ ಪರೀಕ್ಷೆ ಮಾಡುತ್ತೇವೆ. ಒಂದು ಕೊಠಡಿಯಲ್ಲಿ 10-12 ಜನ ಕೂರಿಸಿ ಪರೀಕ್ಷೆ ನಡೆಸುತ್ತೇವೆ. 

ಪರೀಕ್ಷೆಯಲ್ಲಿ ಯಾರನ್ನೂ ಫೇಲ್​ ಮಾಡುವುದಿಲ್ಲ
ಎಸ್​ಎಸ್​ಎಲ್​ಸಿಯಲ್ಲಿ ಯಾರನ್ನೂ ಫೇಲ್​ ಮಾಡುವುದಿಲ್ಲ. ಮೊದಲೇ ಮಾದರಿ ಪ್ರಶ್ನೆ ಪತ್ರಿಕೆಯನ್ನು ನೀಡುತ್ತೇವೆ. ಅದನ್ನು ನೋಡಿಕೊಂಡು ಸಿದ್ಧತೆ ಮಾಡಿಕೊಳ್ಳಿ. ಒತ್ತಡವಾಗಲಿ, ಆತಂಕವಾಗಲೀ ಬೇಡ. ಅತ್ಯಂತ ಸರಳ ಹಾಗೂ ನೇರ ಪ್ರಶ್ನೆಗಳನ್ನಷ್ಟೇ ಕೇಳಲಾಗುವುದು. ಒಂದು ಡೆಸ್ಕ್‌ಗೆ ಒಬ್ಬ ವಿದ್ಯಾರ್ಥಿಯನ್ನು ಕೂರಿಸುತ್ತೇವೆ. ಪರೀಕ್ಷೆ ಬರೆಯುವ ಎಲ್ಲರಿಗೂ ಎನ್95 ಮಾಸ್ಕ್ ನೀಡುತ್ತೇವೆ. ಮಾದರಿ ಪ್ರಶ್ನೆಪತ್ರಿಕೆ ಶಾಲೆಗಳಿಗೆ ಕಳಿಸಲು ವ್ಯವಸ್ಥೆ ಆಗಿದೆ. ವೆಬ್‌ಸೈಟ್‌ನಲ್ಲೂ ಮಾದರಿ ಪ್ರಶ್ನೆಪತ್ರಿಕೆ ಹಾಕಲಾಗುವುದು. ಪರೀಕ್ಷೆಯಲ್ಲಿ ಯಾರನ್ನೂ ಫೇಲ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಪರೀಕ್ಷಾ ಕೊಠಡಿ ಮೇಲ್ವಿಚಾರಕರು ಲಸಿಕೆ ಪಡೆದಿರುವುದು ಕಡ್ಡಾಯ
ಸುರಕ್ಷತಾ ದೃಷ್ಟಿಯಿಂದ ಪರೀಕ್ಷಾ ಕೊಠಡಿಗಳಿಗೆ ಬರುವ ಮೇಲ್ವಿಚಾರಕರು ಎರಡು ಡೋಸ್ ಲಸಿಕೆ ಪಡೆದಿರುವುದನ್ನು ಕಡ್ಡಾಯ ಮಾಡಲಾಗಿದೆ. ಇದಕ್ಕಾಗಿ ನಿಯಮ ರೂಪಿಸಿದ್ದೇವೆಂದು. 

ವಿಭಿನ್ನ ರೀತಿಯ ಪ್ರಶ್ನೆ ಪತ್ರಿಕೆ
ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಈ ಮೂರು ವಿಷಯಗಳನ್ನು ಸೇರಿಸಿ ಒಂದು ಪೇಪರ್ ನೀಡಲಾಗುತ್ತದೆ​, ಬಹು ಆಯ್ಕೆ ಪ್ರಶ್ನೆಗಳನ್ನು ಕೇಳಲಾಗುವುದು. ಪ್ರಶ್ನೆಗಳು ಸರಳ ಹಾಗೂ ನೇರವಾಗಿರಲಿದ್ದು, ವಿದ್ಯಾರ್ಥಿಗಳು ಆತಂಕಪಡುವ ಆಗತ್ಯವಿಲ್ಲ. ಇದೇ ರೀತಿ ಇನ್ನೊಂದು ಪತ್ರಿಕೆ ಭಾಷಾ ವಿಷಯಗಳು ಇರಲಿವೆ.  120 ಅಂಕಗಳಿಗೆ ಮಲ್ಟಿಪಲ್ ಚಾಯ್ಸ್ ಪ್ರಶ್ನೆಪತ್ರಿಕೆ ಇರಲಿದ್ದು,  ಪ್ರತಿ ವಿಷಯಕ್ಕೆ 40 ಅಂಕಗಳು ಇರುತ್ತದೆ. ಜುಲೈ ಕೊನೆಯ ವಾರ ಅಥವಾ ಆಗಸ್ಟ್‌ ಮೊದಲ ವಾರದಲ್ಲಿ ಫಲಿತಾಂಶ ನೀಡಲಾಗುತ್ತದೆ.

ಈ ಬಾರಿ ಅಂಕಪಟ್ಟಿಯಲ್ಲಿ ಮಕ್ಕಳು ಎಷ್ಟು ಅಂಕ ಪಡೆದಿದ್ದಾರೆ ಎಂದು ನೀಡಲಾಗುವುದಿಲ್ಲ. ಬದಲಾಗಿ ಗ್ರೇಡಿಂಗ್ ನೀಡಲಾಗುವುದು. ಒಂದು ವೇಳೆ ಪ್ರಥಮ ಪಿಯುಸಿ ಪರೀಕ್ಷೆ ಗ್ರೇಡಿಂಗ್​ ಬಗ್ಗೆ ಅಸಮಾಧಾನವಿದ್ದರೆ ಅವರು ಪರೀಕ್ಷೆ ಬರೆಯುತ್ತೇವೆಂದು ತಿಳಿಸಬಹುದು. ಕೊರೊನಾ ಕಡಿಮೆಯಾದ ನಂತರ ಅವರಿಗೆ ವ್ಯವಸ್ಥೆ ಮಾಡಿಕೊಡುವ ಬಗ್ಗೆ ಯೋಚಿಸಲಾಗುವುದು ಎಂದು ತಿಳಿಸಿದ್ದಾರೆ.

ಕೊರೋನಾ ಪರಿಸ್ಥಿತಿ ಆಧರಿಸಿ ಅಂತಿಮ ನಿರ್ಧಾರ
ಎಸ್​ಎಸ್​ಎಲ್​ಸಿ ಮಕ್ಕಳಿಗೆ ಜುಲೈ ಮೂರನೇ ವಾರದಲ್ಲಿ ಪರೀಕ್ಷೆ ನಡೆಸುತ್ತೇವೆ ಎನ್ನುವುದು ಈಗಿನ ನಿರ್ಧಾರ. ಆದರೆ, ಮೂರನೇ ಅಲೆಯ ಪರಿಸ್ಥಿತಿಯನ್ನು ಈಗ ನಿರ್ಧರಿಸಲಾಗುವುದಿಲ್ಲ. ಅಂದಿನ ಪರಿಸ್ಥಿತಿಗೆ ತಕ್ಕಂತೆ ಮತ್ತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com