ಬೆಂಗಳೂರು ಅನ್ ಲಾಕ್ 2.0: ಸಾಮಾಜಿಕ ಅಂತರ ಪಾಲನೆ ಮರೆತ ಜನ; ರಾತ್ರಿಯಾದರೂ ಕಿಮೀ ಗಟ್ಟಲೇ ಟ್ರಾಫಿಕ್ ಜಾಮ್!

ಕೋವಿಡ್ 19 ಸಾಂಕ್ರಾಮಿಕದ ನಡುವೆಯೇ ಸೋಂಕು ಪ್ರಕರಣಗಳು ಕಡಿಮೆಯಾದ ಹಿನ್ನಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಸಡಿಲಿಸಿದ ಮೊದಲ ದಿನವೇ ಬೆಂಗಳೂರು ಜನತೆ ಸಾಮಾಜಿಕ ಅಂತರ ಪಾಲನೆಯನ್ನು ಮರೆತಂತಿತ್ತು.
ಅನ್ ಲಾಕ್ 2.0
ಅನ್ ಲಾಕ್ 2.0

ಬೆಂಗಳೂರು: ಕೋವಿಡ್ 19 ಸಾಂಕ್ರಾಮಿಕದ ನಡುವೆಯೇ ಸೋಂಕು ಪ್ರಕರಣಗಳು ಕಡಿಮೆಯಾದ ಹಿನ್ನಲೆಯಲ್ಲಿ ಸರ್ಕಾರ ನಿರ್ಬಂಧಗಳನ್ನು ಸಡಿಲಿಸಿದ ಮೊದಲ ದಿನವೇ ಬೆಂಗಳೂರು ಜನತೆ ಸಾಮಾಜಿಕ ಅಂತರ ಪಾಲನೆಯನ್ನು ಮರೆತಂತಿತ್ತು.

ಜನರು ಬಸ್ ನಿಲ್ದಾಣಗಳಲ್ಲಿ ಕಿಕ್ಕಿರಿದು ತುಂಬಿದ್ದು. ರಾತ್ರಿಯಾದರೂ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಂಗಡಿಗಳು, ಬಾರ್‌ಗಳು, ಹೋಟೆಲ್‌ಗಳು, ಜಿಮ್‌ಗಳು ಮತ್ತು ಇತರೆ ವಾಣಿಜ್ಯ ಸಂಸ್ಥೆಗಳು ಶೇ.50 ರಷ್ಟು ಸಾಮರ್ಥ್ಯದೊಂದಿಗೆ ತೆರೆಯಲು ಸರ್ಕಾರ ಅವಕಾಶ ನೀಡಿದ್ದು, ಈ ನಿರ್ಬಂಧಗಳನ್ನು  ಮೊದಲ ದಿನವೇ ಉಲ್ಲಂಘಿಸಿದ್ದ ಸಾಕಷ್ಟು ಪ್ರಕರಣಗಳು ವರದಿಯಾಗಿವೆ. ಪ್ರಮುಖವಾಗಿ ಬಸ್ ನಿಲ್ದಾಣಗಳು, ಮಾರುಕಟ್ಟೆಗಳಲ್ಲಿ ಜನ ಕಿಕ್ಕಿರಿದು ತುಂಬಿದ್ದರು. ಬಿಎಂಟಿಸಿ ಬಸ್ ನಿಲ್ದಾಣಗಳಲ್ಲಿ ಜನ ಯಾವುದೇ ರೀತಿಯ ಸಾಮಾಜಿಕ ಅಂತರ ಪಾಲನೆ ಮಾಡದೇ ತುಂಬಿದ್ದು ಸಾಮಾನ್ಯವಾಗಿತ್ತು.

ನೈಟ್ ಕರ್ಫ್ಯೂ ಜಾರಿಯಲ್ಲಿದ್ದರೂ ಕಿಮೀ ಗಟ್ಟಲೇ ಟ್ರಾಫಿಕ್ ಜಾಮ್
ಇನ್ನು ನಗರದಲ್ಲಿ ರಾತ್ರಿ ಕರ್ಫ್ಯೂ ಜಾರಿಯಲ್ಲಿದ್ದರೂ ತಡರಾತ್ರಿ ವರೆಗೂ ರಸ್ತೆಗಳಲ್ಲಿ ವಾಹನ ಸಂಚಾರ ನಿಂತಿರಲಿಲ್ಲ. ಸಾವಿರಾರು ವಾಹನಗಳು ರಸ್ತೆಗಳಿದಿದ್ದವು. ನಗರದ ಬಹುತೇಕ ರಸ್ತೆಗಳಲ್ಲಿ ರಾತ್ರಿಯಾದರೂ ಕಿ.ಮೀ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು.

ನಿರೀಕ್ಷಿತ ವಹಿವಾಟು ಕಾಣದ ಹೊಟೆಲ್ ಉದ್ಯಮ
ಇನ್ನು ಹೊಟೆಲ್ ಗಳಲ್ಲಿನ ವ್ಯವಹಾರ ಕಳೆದ 2 ತಿಂಗಳಿಗೆ ಹೋಲಿಕೆ ಮಾಡಿದರೆ ಶೇ.10 ಹೆಚ್ಚಳ ಕಂಡಿತ್ತಾದರೂ ಇದು ಲಾಕ್ ಡೌನ್ ಹಿಂದಿನ ಸಮಯಕ್ಕೆ ಹೋಲಿಕೆ ಮಾಡಿದರೆ ಸಮವಲ್ಲ ಎಂದು ಬೆಂಗಳೂರು ಹೊಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿಸಿ ರಾವ್ ಹೇಳಿದ್ದಾರೆ. 'ಅನ್ ಲಾಕ್ ಮೊದಲ ದಿನ  ಹೋಟೆಲ್‌ಗಳಲ್ಲಿನ ವ್ಯವಹಾರವು ನಮ್ಮ ನಿರೀಕ್ಷೆಗೆ ತಕ್ಕಂತೆ ಇರಲಿಲ್ಲ. ಅನೇಕ ಹೋಟೆಲ್ ಗಳಲ್ಲಿ ಅಲ್ಲೇ ತಿನ್ನುವ ವ್ಯವಸ್ಥೆ ಹೊಂದಿದೆ. ಆದರೆ ನಿರೀಕ್ಷಿಸಿದಷ್ಟು ಗ್ರಾಹಕರು ಆಗಮಿಸಲಿಲ್ಲ. ಇನ್ನೂ ಸಾಕಷ್ಟು ಹೊಟೆಲ್ ಗಳಲ್ಲಿ ಗ್ರಾಹಕರ ಕೊರತೆಯಿಂದಾಗಿ ಬಾಗಿಲು ಹಾಕಲಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಊರಿಗೆ  ಹೋದ ಹೊಟೆಲ್ ಕಾರ್ಮಿಕರು ಇನ್ನೂ ಹಿಂದುರಿಗಿಲ್ಲ. ಗ್ರಾಹಕರು ಬರದಿದ್ದರೆ ನಾವು ನೌಕರರನ್ನು ವಾಪಸ್ ಕರೆಯಲು ಸಾಧ್ಯವಿಲ್ಲ. ನೌಕರರು ಊರುಗಳಿಂದ ಹಿಂತಿರುಗುವವರೆಗೂ ನಿರೀಕ್ಷಿತ ವ್ಯವಹಾರ ನಡೆಸಲು ಸಾಧ್ಯವಿಲ್ಲ. ಅಲ್ಲದೆ, ಸಂಜೆ 5 ರವರೆಗೆ ಮಾತ್ರ ಹೋಟೆಲ್‌ಗಳನ್ನು ತೆರೆಯಲು ಅವಕಾಶವಿದೆ. 10  ದಿನಗಳ ನಂತರ ವ್ಯವಹಾರವು ಹೆಚ್ಚಾಗಬಹುದು ಎಂದು ನಾವು ನಿರೀಕ್ಷಿಸಿದ್ದೇವೆ ಎಂದು ರಾವ್ ಹೇಳಿದರು.

ಜಿಮ್ ಗಳಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ
ಇನ್ನು ಜಿಮ್ ಗಳಲ್ಲಿನ ಪರಿಸ್ಥಿತಿ ಕೂಡ ಭಿನ್ನವಾಗಿರಲಿಲ್ಲ. ಅನ್ ಲಾಕ್ ಮೊದಲ ದಿನ ನಗರದ ಬಹುತೇಕ ಜಿಮ್ ಗಳು ತೆರೆದಿದ್ದವು. ಆದರೆ ನಿರೀಕ್ಷಿತ ಮಟ್ಟದಲ್ಲಿ ಜಿಮ್ ಗಳಿಗೆ ಗ್ರಾಹಕರು ಆಗಮಿಸಲಿಲ್ಲ. ಈ ಬಗ್ಗೆ ಕರ್ನಾಟಕ ಜಿಮ್ ಮತ್ತು ಫಿಟ್‌ನೆಸ್ ಸೆಂಟರ್ ಮಾಲೀಕರ ಸಂಘದ ಅಧ್ಯಕ್ಷ ಎ.ವಿ.ರವಿ ಮಾತನಾಡಿ,  “ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ಅನುಸರಿಸುತ್ತಿದ್ದೇವೆ. ಜಿಮ್ ಗಳನ್ನು ಸ್ಯಾನಿಟೈಸ್ ಮಾಡಿಸಿದ್ದೇವೆ. ಸಾಮಾಜಿಕ ಅಂತರ ಪಾಲನೆ ಮಾಡುವಂತೆ ಸದಸ್ಯರನ್ನು ಕೇಳಿಕೊಳ್ಳುತ್ತೇವೆ. ನಾವು ನಿಯಮಿತವಾಗಿ ಸ್ಥಳವನ್ನು ಸ್ವಚ್ಚಗೊಳಿಸುತ್ತಿದ್ದೇವೆ. ಈಗ ಆರಂಭದಲ್ಲಿ ಸದಸ್ಯರು ಜಿಮ್ ನತ್ತ ಮುಖ ಮಾಡಲು ಹಿಂದೇಟು  ಹಾಕುತ್ತಿದ್ದಾರೆ. ಒಂದು ತಿಂಗಳ ನಂತರ ವ್ಯವಹಾರವು ಹೆಚ್ಚಾಗುವ ನಿರೀಕ್ಷೆ ಇದೆ. ಪ್ರಸ್ತುತ ಹೊಸದಾಗಿ ಅಡ್ಮಿಷನ್ ಗಳು ಆಗುತ್ತಿಲ್ಲ. ಇರುವ ಸದಸ್ಯರಲ್ಲೇ 10 ರಲ್ಲಿ 3 ಅಥವಾ 4 ಗ್ರಾಹಕರು ಮಾತ್ರ ಬರುತ್ತಿದ್ದಾರೆ ಎಂದು ಹೇಳಿದರು.

ಇನ್ನು ಅಸೋಸಿಯೇಷನ್‌ನ ಅಡಿಯಲ್ಲಿ ನಗರದಲ್ಲಿ ಸುಮಾರು 7,000ಕ್ಕೂ ಹೆಚ್ಚು ಜಿಮ್‌ಗಳಿವೆ, ಆದರೆ ಎರಡು ವರ್ಷಗಳ ಕಾಲ ಮುಚ್ಚಲ್ಪಟ್ಟಿದ್ದರಿಂದ ಈ ಪೈಕಿ ಎಷ್ಟು ಜಿಮ್ ಗಳು ಸಕ್ರಿಯವಾಗಿವೆ ಎಂಬುದು ಸ್ಪಷ್ಟವಾಗಿಲ್ಲ. ಜಿಮ್ ಮಾಲೀಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಹೀಗಾಗಿ ಆರ್ಥಿಕ ಪರಿಹಾರ ಪ್ಯಾಕೇಜ್,  ತೆರಿಗೆ ಮನ್ನಾ ಮತ್ತು ವಿದ್ಯುತ್ ಬಿಲ್ ವಿನಾಯಿತಿ ನೀಡಬೇಕು ಎಂದು ಈ ಹಿಂದೆ ಸರ್ಕಾರವನ್ನು ಕೇಳಿದ್ದೆವು. ಆದರೆ ಅವರ ಬೇಡಿಕೆಗಳು ಈಡೇರಿಲ್ಲ. ಈಗ, ಹವಾನಿಯಂತ್ರಿತ ಜಿಮ್‌ ಗಳಿಗೆ ಸರ್ಕಾರ ಅವಕಾಶ ನೀಡದ ಕಾರಣ ಎಸಿಗಳನ್ನು ತೆಗೆದುಹಾಕಿ ನೈಸರ್ಗಿಕ ಗಾಳಿಗೆ ಸ್ಥಳಾವಕಾಶ ಕಲ್ಪಿಸಬೇಕಾದರೆ ಅವರು  ಹೆಚ್ಚುವರಿ ವೆಚ್ಚವನ್ನು ಸಹ ಭರಿಸಬೇಕಾಗುತ್ತದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com