ಚಾಮರಾಜನಗರ ದುರಂತ: ಸಿಎಂ, ಆರೋಗ್ಯ ಸಚಿವರ ರಾಜೀನಾಮೆಗೆ ಸಿದ್ದರಾಮಯ್ಯ ಆಗ್ರಹ

ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಆಸ್ಪತ್ರೆಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕರು
ಆಸ್ಪತ್ರೆಗೆ ಭೇಟಿ ನೀಡಿರುವ ಕಾಂಗ್ರೆಸ್ ನಾಯಕರು

ಮೈಸೂರು: ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಮೃತಪಟ್ಟ ದುರ್ಘಟನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ಕಿಡಿಕಾರಿದ್ದು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.

ಆಕ್ಸಿಜನ್ ಕೊರತೆಯಿಂದ 24 ಕೊರೋನಾ ಸೋಂಕಿತರು ಮೃತಪಟ್ಟ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ದುರಂತ ಸಂಭವಿಸಿದ ಆಸ್ಪತ್ರೆಗೆ ಭೇಟಿ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮರಾಜನಗರದ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಸಂಖ್ಯೆ 24 ಅಲ್ಲ. 28 ಜನರು. ಈ ಬಗ್ಗೆ ಅಧಿಕಾರಿಗಳೇ ನನ್ನ ಮುಂದೆ ಒಪ್ಪಿಕೊಂಡಿದ್ದಾರೆ  ಎಂದು ಬಾಂಬ್ ಸಿಡಿಸಿದರು. 

ನಿನ್ನೆ (ಸೋಮವಾರ) ಆರೋಗ್ಯ ಸಚಿವರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿರುವುದು ಕೇವಲ 3 ಮಾತ್ರ ಎಂದು ಹೇಳಿರುವುದು ಶುದ್ಧ ಸುಳ್ಳು. ಚಾಮರಾಜನಗರ ಆಸ್ಪತ್ರೆಯಲ್ಲಿ 28 ಜನರು ಮೃತಪಟ್ಟಿರುವುದು ಆಮ್ಲಜನಕದ ಕೊರತೆಯಿಂದ ಎಂಬುದು ಮಾಹಿತಿ. ಆದರೆ ಆರೋಗ್ಯ ಸಚಿವರು ಸುಳ್ಳು ಹೇಳುವ ಮೂಲಕ ಜನರ ದಿಕ್ಕು ತಪ್ಪಿಸಿದ್ದಾರೆ ಎಂದು ಕಿಡಿಕಾರಿದರು.

ಆಸ್ಪತ್ರೆಯ ಅಗತ್ಯತೆಗಳನ್ನು ಸರ್ಕಾರ ಪೂರೈಸಿದ್ದೇ ಆಗಿದ್ದರೆ, ಸೋಂಕಿತರ ಜೀವಗಳನ್ನು ಉಳಿಸಬಹುದಿತ್ತು. ಚಾಮರಾಜನಗರ ಆಸ್ಪತ್ರೆಗೆ ಪ್ರತೀನಿತ್ಯ 350 ಆಕ್ಸಿಜನ್ ಸಿಲಿಂಡರ್ ಗಳ ಅಗತ್ಯವಿದೆ. ಆದರೆ, ಭಾನುವಾರ ಕೇವಲ 126 ಸಿಲಿಂಡರ್ ಗಳನ್ನು ಮಾತ್ರ ಪೂರೈಕೆ ಮಾಡಲಾಗಿದೆ. ಮಧ್ಯಾಹ್ನದ ವೇಳೆಗೆ ಆಸ್ಪತ್ರೆಯಲ್ಲಿ ಆಕ್ಸಿಜನ್ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ. 

ದುರ್ಘಟನೆ ಸಂಬಂಧ ಮೈಸೂರು ಹಾಗೂ ಚಾಮರಾಜನಗರ ಜಿಲ್ಲಾಧಿಕಾರಿಗಳು, ಆರೋಗ್ಯ ಸಚಿವರು ವಿಭಿನ್ನ ಹೇಳಿಕೆಗಳನ್ನು ನೀಡಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯಾಗಬೇಕೆಂದು ಆಗ್ರಹಿಸಿದ್ದಾರೆ. 

ರಾಜ್ಯದಲ್ಲಿ ಈ ವರೆಗೂ 50,000 ಸೋಂಕಿತರು ಸಾವನ್ನಪ್ಪಿದ್ದಾರೆ. ಆದರೆ, ಸರ್ಕಾರ ಅಂಕಿಅಂಶಗಳನ್ನು ಮರೆಮಾಚುತ್ತಿದೆ. ದುರ್ಘಟನೆಯ ನೈತಿಕ ಹೊಣೆಹೊತ್ತು ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಸುಧಾಕರ್ ಅವರು ನೈತಿಕ ಹೊಣೆಹೊತ್ತು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com