ಸೋಂಕಿತರ ನೆರವಿಗೆ ಶೀಘ್ರದಲ್ಲೇ ಚೆನ್ನೈ ಮಾದರಿಯಲ್ಲಿ ಮೊಬೈಲ್ ಆಕ್ಸಿಜನ್: ರಾಜ್ಯ ಸರ್ಕಾರ

ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಆಮ್ಲಜನಕಕ್ಕಾಗಿ ಪರದಾಡುತ್ತಿರುವ ಕೊರೋನಾ ಸೋಂಕಿತರಿಗೆ ನೆರವಾಗಲು ಚೆನ್ನೈ ಮಾದರಿಯಲ್ಲಿ ಮೊಬೈಲ್ ಆಕ್ಲಿಜನ್ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸೋಮವಾರ ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಆಮ್ಲಜನಕಕ್ಕಾಗಿ ಪರದಾಡುತ್ತಿರುವ ಕೊರೋನಾ ಸೋಂಕಿತರಿಗೆ ನೆರವಾಗಲು ಚೆನ್ನೈ ಮಾದರಿಯಲ್ಲಿ ಮೊಬೈಲ್ ಆಕ್ಲಿಜನ್ ವ್ಯವಸ್ಥೆ ಮಾಡಲಾಗುವುದು ಎಂದು ರಾಜ್ಯ ಸರ್ಕಾರ ಸೋಮವಾರ ಹೇಳಿದೆ. 

ಬೆಂಗಳೂರಿನ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸೋಮವಾರ ಬೆಂಗಳೂರು ಪೂರ್ವವಲಯದ ಕೋವಿಡ್ ಸ್ಥಿತಿಗತಿ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಮಾತನಾಡಿದ ಗೃಹ ಸಚಿವ ಬಸರವಾಜ ಬೊಮ್ಮಾಯಿಯವರು, ಚೆನ್ನೈನಲ್ಲಿ ಒಂದು ಖಾಸಗಿ ಸಂಸ್ಥೆ ಮೊಬೈಲ್ ಆಕ್ಸಿಜನ್ ಪೂರೈಕೆ ಕೆಲಸ ಮಾಡುತ್ತಿದೆ. ಬಸ್ಸುಗಳಲ್ಲಿ ತುರ್ತು ಸಂದರ್ಭಗಳಲ್ಲಿ ಸೋಂಕಿತರಿಗೆ ಆಕ್ಸಿಜನ್ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಅದೇ ಮಾದರಿಯನ್ನು ಅನುಸರಿಸಲು ಚಿಂತನೆ ನಡೆಸುತ್ತಿದ್ದೇವೆಂದು ಹೇಳಿದ್ದಾರೆ. 

ಬಸ್ಸುಗಳಲ್ಲಿ ರೋಗಿಗಳು ಆಕ್ಸಿಜನ್ ಪಡೆದು ತಮ್ಮ ಜೀವ ರಕ್ಷಣೆ ಮಾಡಿಕೊಳ್ಳಲು ಮೊಬೈಲ್ ಆಕ್ಸಿಜನ್ ಗಳ ವ್ಯವಸ್ಥೆ ಮಾಡಬೇಕೆಂಬುದು ನಮ್ಮ ಉದ್ದೇಶ. ಅದೇರೀತಿ ಅಗತ್ಯವೆನಿಸಿದರೆ ಸೋಂಕಿತರ ಮನೆಗಳಿಗೂ ಆಕ್ಸಿಜನ್ ಕಳಿಸುವ ವ್ಯವಸ್ಥೆ ಮಾಡುವ ಕುರಿತು ಗಂಭೀರ ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಇದೇ ವೇಳೆ ಬೆಡ್ ಬ್ಲಾಕಿಂಗ್ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸಿಸಿಬಿ ಈ ಕುರಿತು ತನಿಖೆ ನಡೆಸುತ್ತಿದೆ. ಅಮಾಯಕರಿಗೆ ಯಾವುದೇ ರೀತಿಯ ತೊಂದರೆಯನ್ನು ಕೊಡದಂತೆ ಸೂಚಿಸಿದ್ದೇನೆ. ತಪ್ಪಿತಸ್ಥರಿಗೆ ಮಾತ್ರ ಶಿಕ್ಷೆ ನೀಡಲಾಗುವುದು. ಯಾರು ದುಡ್ಡಿಗಾಗಿ ಬೆಡ್ ಬ್ಲಾಕ್ ಮಾಡಿದ್ದಾರೋ ಅಂತವರಿಗೆ ಕಠಿಣ ಶಿಕ್ಷೆ ನೀಡಲಾಗುವುದು. ಇದರಲ್ಲಿ ಯಾವುದೇ ರೀತಿಯ ರಾಜಿ ಇಲ್ಲ. ಆದರೆ ಅಮಾಯಕರಿಗೆ ಈ ಸಂಬಂಧ ವಿನಾಕಾರಣ ತೊಂದರೆ ಕೊಡದಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಅವರು ತಿಳಿಸಿದರು.

ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು 5 ಸಾವಿರ ತಾತ್ಕಾಲಿಕವಾಗಿ ಹಾಸಿಗೆಗಳ ವ್ಯವಸ್ಥೆ ಮಾಡುತ್ತಿದ್ದು, ಅವುಗಳಲ್ಲಿ ಶೇ.30 ಹಾಸಿಗೆಗಳಿಗೆ ಆಮ್ಲಜನಕ ವ್ಯವಸ್ಥೆ ಇರಲಿವೆ ಎಂದು ಹೇಳಿದ್ದಾರೆ. 

ನಗರದ ಮಣಿಪಾಲ್ ಆಸ್ಪತ್ರೆ, ನಾರಾಯಣ ಹೃದಯಾಲಯ ಸೇರಿ ಪ್ರಮುಖ ಆಸ್ಪತ್ರೆಗಳ ಬಳಿಯಿರುವ ಹೋಟೆಲ್ ಗಳನ್ನು ತಾತ್ಕಾಲಿಕ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲಾಗುವುದು. ಅದಕ್ಕೆ ಅಗತ್ಯವಿರುವ ಸೌಲಭ್ಯಗಳನ್ನು ಸರ್ಕಾರದಿಂದಲೇ ಕಲ್ಪಿಸಲು ನಿರ್ಧರಿಸಲಾಗಿದೆ. ಈಗಾಗಲೇ 945 ಹಾಸಿಗೆಗಳ ವ್ಯವಸ್ಥೆಯಾಗಿದ್ದು, ಇನ್ನು ಕೆಲವೇ ದಿನಗಳಲ್ಲಿ ಐದು ಸಾವಿರ ಹಾಸಿಗೆಗಳು ವ್ಯವಸ್ಥೆಯಾಗಲಿದೆ ಎಂದಿದ್ದಾರೆ. 

ಮೆಡಿಕಲ್ ಕಾಲೇಜುಗಳಲ್ಲಿ ಸುಮಾರು 1,035 ಹಾಸಿಗೆ ಅಧಿಕೃತವಾಗಿ ಪಡೆದುಕೊಳ್ಳಲು ಆದೇಶ ನೀಡಲಾಗಿದೆ. ಈಗಾಗಲೇ 700-800 ಹಾಸಿಗೆ ಸರ್ಕಾರಕ್ಕೆ ಹಸ್ತಾಂತರಿಸಲಾಗಿದ್ದು, ಇನ್ನುಳಿದ 300 ಹಾಸಿಗೆಗಳನ್ನು ಶೀಘ್ರ ಸರ್ಕಾರಕ್ಕೆ ಲಭ್ಯವಾಗಲಿದೆ ಎಂದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com