ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಸಾರ್ವಜನಿಕರಿಗೂ ಚಿಕಿತ್ಸೆ

ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಾಣವಾಗಿರುವ ಕೋವಿಡ್ ಕೇರ್ ಕೇಂದ್ರ ಲೋಕಾರ್ಪಣೆಯಾಗಿದ್ದು, ಇಲ್ಲಿ ಇನ್ನು ಸಾರ್ವಜನಿಕರಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಕೋವಿಡ್ ಕೇರ್ ಕೇಂದ್ರ
ವಿಮಾನ ನಿಲ್ದಾಣದಲ್ಲಿ ಕೋವಿಡ್ ಕೇರ್ ಕೇಂದ್ರ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವರಣದಲ್ಲಿ ನಿರ್ಮಾಣವಾಗಿರುವ ಕೋವಿಡ್ ಕೇರ್ ಕೇಂದ್ರ ಲೋಕಾರ್ಪಣೆಯಾಗಿದ್ದು, ಇಲ್ಲಿ ಇನ್ನು ಸಾರ್ವಜನಿಕರಿಗೂ ಚಿಕಿತ್ಸೆ ನೀಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

150 ಹಾಸಿಗೆಗಳ ಸಾಮರ್ಥ್ಯದ ಸುಸಜ್ಜಿತ ಕೋವಿಡ್ ಕೇರ್ ಕೇಂದ್ರವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಲೋಕಾರ್ಪಣೆ ಮಾಡಿದರು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ವಿ.ವಿ.ಐ.ಪಿ. ಟರ್ಮಿನಲ್‌ನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವರ್ಚುವಲ್ ವೇದಿಕೆಯ  ಮೂಲಕ ಲೋಕಾರ್ಪಣೆ ಮಾಡಿದರು. ಗ್ರೀನ್ ಕೋ ಸಂಸ್ಥೆಯ ವತಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿನ ಉಪಯೋಗಕ್ಕಾಗಿ 200 ಲಾರ್ಜ್ ಮೆಡಿಕಲ್ ಗ್ರೇಡ್ ನ 10 ಎಲ್ ಪಿಎಂ ಆಕ್ಸಿಜನ್ ಕಾನ್ಸನ್ ಟ್ರೇಟರ್ ಗಳ ಸ್ವೀಕಾರ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ  ನಿರ್ಮಾಣವಾಗಿರುವ 150 ಬೆಡ್‌ಗಳ ಸುಸಜ್ಜಿತ ಕೋವಿಡ್ ಕೇರ್ ಕೇಂದ್ರವನ್ನು ಸಿಎಂ ಉದ್ಘಾಟಿಸಿದರು.

ಈ ಹಿಂದೆ ಇದನ್ನು ವಿಮಾನ ನಿಲ್ದಾಣದ ಸಿಬ್ಬಂದಿಗಳಿಗೆ ಎಂದು ಹೇಳಲಾಗಿತ್ತಾದರೂ ಬಳಿಕ ಸಾರ್ವಜನಿಕರಿಗೂ ಇಲ್ಲಿ ಚಿಕಿತ್ಸೆ ನೀಡುವ ಕುರಿತು ನಿರ್ಧರಿಸಲಾಗಿದೆ. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ವಿಮಾನ ನಿಲ್ದಾಣದ ಆಡಳಿತ ಮಂಡಳಿ, ನಮ್ಮ ವಿಮಾನ ನಿಲ್ದಾಣದ ಸೋಂಕಿತ ಸಿಬ್ಬಂದಿಗಳೊಂದಿಗೆ  ಸೋಂಕಿಗೆ ತುತ್ತಾದ ರೋಗಲಕ್ಷಣಗಳಿಲ್ಲದ ಸಾರ್ವಜನಿಕರೂ ಇಲ್ಲಿ ಚಿಕಿತ್ಸೆ ಪಡೆಯಬಹುದು. ಉಸಿರಾಟದ ತೊಂದರೆ ಇರುವ ಸೋಂಕಿತರು ತಮಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗುವವರೆಗೂ ಇಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ. ಆದರೆ ಮೆಡಿಸಿನ್ ಗಳು, ಪರೀಕ್ಷೆ ಮತ್ತು ಆ್ಯಂಬುಲೆನ್ಸ್ ವೆಚ್ಚವನ್ನು ಸೋಂಕಿತರೇ ಭರಿಸಬೇಕು  ಎಂದು ಹೇಳಿದೆ.

ಡಾ.ನರೇಶ್ ಶೆಟ್ಟಿ, ಡಾ.ನಂದಕುಮಾರ್ ಜೈರಾಮ್ ಮತ್ತು ಡಾ. ಅಲೆಕ್ಸಾಂಡರ್ ಥಾಮಸ್ ಸೇರಿದಂತೆ ವೈದ್ಯರ ಸಮಿತಿಯು ಈ ಕೋವಿಡ್ ಕೇರ್ ಕೇಂದ್ರಕ್ಕೆ ತಾಂತ್ರಿಕ ನೆರವು ನೀಡಲಿದ್ದಾರೆ. ಅಂತೆಯೇ ಸ್ಥಳೀಯ ನೋಡಲ್ ಅಧಿಕಾರಿಗಳಾದ ಸನ್ನಪ್ಪಯ್ಯ (9448116661) ಮತ್ತು ಡಾ.ಸಂಜಯ್  (9538279991) ಅಥವಾ 24x7 ಹೆಲ್ಪ್‌ಡೆಸ್ಕ್ 9148670158/9148706158 ಗೆ ಸಂಪರ್ಕಿಸಿ ರೋಗಿಗಳು ಪ್ರವೇಶ ಪಡೆಯಬಹುದು. ರೆಫರಲ್ ಆಸ್ಪತ್ರೆಯ ಶಿಫಾರಸಿನೊಂದಿಗೆ ಕೂಡ ರೋಗಿಗಳು ಪ್ರವೇಶ ಪಡೆಯಬಹುದು ಎನ್ನಲಾಗಿದೆ.

ಉದ್ಘಾಟನೆ ಬಳಿಕ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ನಿರ್ಮಾಣಗೊಂಡಿರುವ ಕೋವಿಡ್ ಕೇರ್ ಕೇಂದ್ರದಲ್ಲಿ ಖ್ಯಾತ ವೈದ್ಯಕೀಯ ತಂಡ ಕಾರ್ಯಸಲ್ಲಿಸಲಿದೆ. ಚಿಕಿತ್ಸೆಯನ್ನು ಸಂಪೂರ್ಣ ಉಚಿತವಾಗಿ ನೀಡುತ್ತಿರುವ  ಕೆಂಪೇಗೌಡ ಅಂತಾರಾಷ್ಟ್ರೀಯ ನಿಲ್ದಾಣದ ಪ್ರತಿಷ್ಠಾನದ ಸಾಮಾಜಿಕ ಕಳಕಳಿ ಮೆಚ್ಚುವಂತಹದು. ಗ್ರೀನ್ ಇಂಡಿಯಾ ಸಂಸ್ಥೆ ಹಾಗೂ ಫೆರೆಕ್ಸ್ ಫೈನಾನ್ಸಿಯಲ್ ಹೋಲ್ಡಿಂಗ್ಸ್ ಗ್ರೂಪ್ ಸಹಯೋಗದಲ್ಲಿ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನದ ಈ ಕೇಂದ್ರವು ಅಗತ್ಯ ಇರುವವರಿಗೆ ತುರ್ತು  ಚಿಕಿತ್ಸೆಗೆ ನೆರವಿನ ಹಸ್ತ ಚಾಚಿರುವುದು ಶ್ಲಾಘನೀಯ ಎಂದರು.

ಗ್ರೀನ್ ಕೋ ಸಂಸ್ಥೆ ವತಿಯಿಂದ ವಿತರಿಸಲಾದ ಸರ್ಕಾರಿ ಆಸ್ಪತ್ರೆಗಳ ಉಪಯೋಗಕ್ಕಾಗಿ 200 ಲಾರ್ಜ್ ಗ್ರೇಡ್, ಹತ್ತು ಎಲ್.ಪಿ.ಎಂ. ಆಕ್ಸಿಜನ್ ಕಾನ್ಸನ್ ಟ್ರೇಟರ್‌ಗಳನ್ನು ಸ್ವೀಕರಿಸಲಾಗಿದ್ದು, ಇದರಿಂದ ಸರ್ಕಾರಿ ಆಸ್ಪತ್ರೆಗಳ ಮೇಲಿನ ಒತ್ತಡವು ಕಡಿಮೆಯಾಗಲಿದೆ ಹಾಗೂ ನೂರಾರು ಜನರ ಜೀವ ಉಳಿಸಲು  ನೆರವಾಗಲಿದೆ. ಇದೇ ಸಂಧರ್ಭದಲ್ಲಿ ಮುಖ್ಯ‌ಮಂತ್ರಿಗಳು ಅಗತ್ಯ ಸೇವೆ ಮತ್ತು ಬೆಂಬಲ ನೀಡುತ್ತಿರುವ ಗ್ರೀನ್ ಕೋ ಸಂಸ್ಥೆ ಹಾಗೂ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರತಿಷ್ಠಾನಕ್ಕೆ ಕೃತಜ್ಞತೆಗಳನ್ನು ತಿಳಿಸಿದರು.

ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವರಾದ ಡಾ.ಕೆ.ಸುಧಾಕರ್, ಕೆ.ಐ.ಎ. ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿ.ಇ.ಓ. ಹರಿ ಮರಾರ್, ಗ್ರೀನ್ ಕೋ ಗ್ರೂಪ್‌ನ ಸಂಸ್ಥಾಪಕರಾದ ಅನಿಲ್ ಚಲಮಲಶೆಟ್ಟಿ ಹಾಗೂ ಮಹೇಶ್ ಕೊಹ್ಲಿ, ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್,  ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ರವಿಕುಮಾರ್, ಅಪರ ಜಿಲ್ಲಾಧಿಕಾರಿ ಡಾ.ಜಗದೀಶ.ಕೆ. ನಾಯಕ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com