ಬೀದಿಬದಿ ವ್ಯಾಪಾರಿಗಳು, ಮೆಟ್ರೋ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಸಿಎಂ ಚಾಲನೆ

ಬೀದಿಬದಿ ವ್ಯಾಪಾರಿಗಳು, ಮೆಟ್ರೋ ನಿರ್ಮಾಣ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ 18ರಿಂದ 44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದರು. 
ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ನಿರ್ಮಾಣ ಕಾಮಗಾರಿಯ ಮುಂಚೂಣಿ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು.
ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ನಿರ್ಮಾಣ ಕಾಮಗಾರಿಯ ಮುಂಚೂಣಿ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುತ್ತಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವರು.

ಬೆಂಗಳೂರು: ಬೀದಿಬದಿ ವ್ಯಾಪಾರಿಗಳು, ಮೆಟ್ರೋ ನಿರ್ಮಾಣ ಕಾರ್ಮಿಕರು ಸೇರಿದಂತೆ ವಿವಿಧ ವರ್ಗದ 18 ರಿಂದ 44 ವರ್ಷದೊಳಗಿನ ಮುಂಚೂಣಿ ಕಾರ್ಯಕರ್ತರಿಗೆ ಉಚಿತವಾಗಿ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಾಲನೆ ನೀಡಿದರು. 

ಗುರುವಾರ ಬಸವನಗುಡಿಯ ನ್ಯಾಷನಲ್ ಕಾಲೇಜು ಅವರಣದಲ್ಲಿ ಬೀದಿಬದಿ ವ್ಯಾಪಾರಿಗಳು, ವಿಲ್ಸನ್ ಗಾರ್ಡನ್ ಬಳಿ ಕೊಳಚೆ ಪ್ರದೇಶಗಳಲ್ಲಿ ವಾಸಿಸುವ ನಿವಾಸಿಗಳು ಮತ್ತು ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ನಿರ್ಮಾಣ ಕಾಮಗಾರಿಯ ಮುಂಚೂಣಿ ಕಾರ್ಮಿಕರಿಗೆ ಉಚಿತ ಲಸಿಕೆ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಯಡಿಯೂರಪ್ಪ ಅವರು, ಕೋವಿಡ್ ದೊಡ್ಡ ಪ್ರಮಾಣದಲ್ಲಿ ಹರಡುತ್ತಿದೆ. ಈ ಸಂದರ್ಭದಲ್ಲಿ ಸುಮಾರು 53 ಸಾವಿರ ಮಂದಿ ಬೀದಿ ವ್ಯಾಪಾರಿಗಳನ್ನು ಗುರ್ತಿಸಿದ್ದು, ಅವರಿಗೆ ಉಚಿತವಾಗಿ ಲಸಿಕೆ ಹಾಕುವ ಕಾರ್ಯಕ್ರಮ ಆರಂಭಿಸಿದ್ದೇವೆ. ಎಲ್ಲರೂ ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಹೇಳಿದರು. 

ಈಗಾಗಲೇ ಘೋಷಣೆ ಮಾಡಿದಂತೆ ಬೀದಿ ವ್ಯಾಪಾರಿಗಳಿಗೆ ಹಣಕಾಸಿನ ಇತಿಮಿತಿಯಲ್ಲಿ ತಲಾ ರೂ.2 ಸಾವಿರ ಸಹಾಯಧನ ನೀಡಲು ತೀರ್ಮಾನಿಸಿದ್ದು, ಶೀಘ್ರವೇ ಅದನ್ನು ಪ್ರಾರಂಭಿಸುತ್ತೇವೆ. ಹಾಗೆಯೇ ಅರ್ಜಿ ಸಲ್ಲಿಸಿರುವ ಗುರುತಿನ ಚೀಟಿ ಇಲ್ಲದ ಬೀದಿ ವ್ಯಾಪಾರಿಗಳಿಗೆ ಆನ್'ಲೈನ್ ಮೂಲಕ ಶಿಫಾರಸು ಪತ್ರ ನೀಡಿ ಸುಲಭವಾಗಿ ಸಾಲ ದೊರೆಯುವಂತೆ ಪ್ರಯತ್ನಿಸಲಾಗುತ್ತಿದೆ. ಅದರಂತೆ ವಿವಿಧ ಬ್ಯಾಂಕ್ ಗಳಿಂದ ಸುಮಾರು ನಾಲ್ಕು ಸಾವಿರ ಮಂದಿ ಬೀದಿಬದಿ ವ್ಯಾಪಾರಿಗಳಿಗೆ ತಲಾ ರೂ.10 ಸಾವಿರ ಸಾಲವನ್ನು ಕೂಡ ಕೊಡಲಾಗುತ್ತದೆ ಎಂದು ತಿಳಿಸಿದರು. 

ಎಸಿಟಿ ಗ್ರಾಂಟ್ಸ್, ದಿ ಯುನೈಟೆಡ್ ಬೆಂಗಳೂರು ಮತ್ತು ಸತ್ವಾಕ್ ಸಂಸ್ಥೆ ಸಹಭಾಗಿತ್ವದಲ್ಲಿ ಮೆಟ್ರೋ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿರುವ ಕಾರ್ಮಿಕರಿಗೆ ಉಚಿತ ಲಸಿಕೆ ನೀಡಲಾಗುತ್ತಿದೆ. ಎಂಜಿ.ರಸ್ತೆ, ಬೈಯ್ಯಪ್ಪನಹಳ್ಳಿ ಮತ್ತು ವಿಜಯನಗರದ ಮೆಟ್ರೋ ನಿಲ್ದಾಣಗಳಲ್ಲಿ 2 ದಿನ ಲಸಿಕೆ ಕಾರ್ಯಕ್ರಮ ಆಯೋಜಿಸಲಾಗಿದೆ. ಪ್ರತಿ ನಿಲ್ದಾಣದಲ್ಲಿ 6 ಲಸಿಕೆ ಕೇಂದ್ರಗಳು ಇದ್ದು, ನಿತ್ಯ 900 ಮೆಟ್ರೋ ನಿರ್ಮಾಣ ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು ಎಂದರು.

ಮೊದಲ ಹಂತದಲ್ಲಿ ಒಟ್ಟು 7500 ಮೆಟ್ರೋ ನಿರ್ಮಾಣ ಕಾರ್ಮಿಕರಿಗೆ ಲಸಿಕೆ ನೀಡಲು ಉದ್ದೇಶಿಸಿದ್ದೇವೆ. ಬೆಂಗಳೂರಿನ ಹಲವು ಕಂಪನಿಗಳು ತಮ್ಮ ಸಿಎಸ್ಆರ್ ಕಾರ್ಯಕ್ರಮದಡಿ ಲಸಿಕೆಗೆ ದೇಣಿಗೆ ನೀಡಲು ಮುಂದೆ ಬಂದಿರುವುದು ಶ್ಲಾಘನೀಯ. ಕೋವಿಡ್ ನಿರ್ವಹಣೆಗೂ ಸಿಎಸ್ಆರ್ ಫಂಡ್ ನಲ್ಲಿ ಹಣವನ್ನು ದೇಣಿಗೆ ನೀಡುತ್ತಿವೆ. ಈ ಬಾರಿ ಆರೋಗ್ಯ ಕ್ಷೇತ್ರವೊಂದಕ್ಕೆ ರೂ.176 ಕೋಟಿ ದೇಣಿಗೆ ದೊರೆತಿದೆ ಎಂದು ಮಾಹಿತಿ ನೀಡಿದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com