ಬೆಂಗಳೂರು: ಪಟಾಕಿ ಸಿಡಿತದಿಂದ ಬೆಂಗಳೂರಿನಲ್ಲಿ 25 ಮಕ್ಕಳ ಕಣ್ಣುಗಳಿಗೆ ಹಾನಿ, 20ಕ್ಕೂ ಹೆಚ್ಚು ಮಂದಿಗೆ ಸುಟ್ಟಗಾಯ

ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆಯಲ್ಲಿ ನಗರದಲ್ಲಿ ಪಟಾಕಿ ಸಿಡಿತದಿಂದ 25ಕ್ಕೂ ಹೆಚ್ಚು ಮಕ್ಕಳ ಕಣ್ಣುಗಳಿಗೆ ಹಾನಿಯಾಗಿದ್ದು, 20ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ.
ದೀಪಾವಳಿ ಆಚರಣೆಯ ಸಾಂದರ್ಭಿಕ ಚಿತ್ರ
ದೀಪಾವಳಿ ಆಚರಣೆಯ ಸಾಂದರ್ಭಿಕ ಚಿತ್ರ

ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆಯಲ್ಲಿ ನಗರದಲ್ಲಿ ಪಟಾಕಿ ಸಿಡಿತದಿಂದ 25ಕ್ಕೂ ಹೆಚ್ಚು ಮಕ್ಕಳ ಕಣ್ಣುಗಳಿಗೆ ಹಾನಿಯಾಗಿದ್ದು, 20ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿವೆ. ಕಣ್ಣು ಹಾನಿಗೊಂಡ ಮಕ್ಕಳು ಮಿಂಟೋ, ನಾರಾಯಣ ನೇತ್ರಾಲಯ, ಕಾಮಾಕ್ಷಿ ಇನ್ನಿತರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಸುಟ್ಟ ಗಾಯಕ್ಕೆ ಒಳಗಾದವರು ವಿಕ್ಟೋರಿಯಾ, ಬೌರಿಂಗ್ ಮತ್ತಿರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

 ಮಿಂಟೋ ಕಣ್ಣಾಸ್ಪತ್ರೆಯಲ್ಲಿ 16, ನಾರಾಯಣ ನೇತ್ರಾಲಯದಲ್ಲಿ 6, ಇನ್ನಿತರ ಆಸ್ಪತ್ರೆಗಳಲ್ಲಿ ಐದಾರು ಮಂದಿ ಚಿಕಿತ್ಸೆ ಪಡೆದಿದ್ದಾರೆ. ಆರೇಳು ಮಂದಿ ಬಿಟ್ಟರೆ ಉಳಿದವರೆಲ್ಲರೂ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ. ಬಸವನಗುಡಿಯ 9 ವರ್ಷದ ಹರ್ಮಾನ್ ಖಾನ್ ಎಂಬ ಬಾಲಕ ಪಟಾಕಿ ಸಿಡಿಸುವಾಗ ಆತನ ಮುಖದ ಮೇಲಿನ ಚರ್ಮ, ಕಣ್ಣುಗಳಿಗೆ ಹಾನಿಯಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಕಣ್ಣುಗಳ ಮೇಲ್ಭಾಗದ ಚರ್ಮ ಸುಟ್ಟಿದ್ದು, ದೃಷ್ಟಿಗೆ ಯಾವುದೇ ಹಾನಿಯಾಗಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.. ಚಾಮರಾಜಪೇಟೆಯ ಕೆ ಜಿನಗರದ 16 ವರ್ಷದ ಬಾಲಕ ಅಭಯ್ ಹೂ ಕುಂಡ ಹಚ್ಚುವಾಗ ಕಣ್ಣಿಗೆ ಸಿಡಿದು ಹಾನಿಯಾಗಿದೆ. ನಾಗರಬಾವಿಯ 9 ವರ್ಷದ ಪ್ರಜ್ವಲ್ ಬಿಜಿಲಿ , ಗೋರಿಪಾಳ್ಯದ ಐದು ವರ್ಷದ ಹಾರ್ಮೈನ್  ಪಟಾಕಿ ಸಿಡಿಸುವಾಗ ಅವರ ಕಣ್ಣಿಗೆ ಹಾನಿಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು  ಚಿಮಿಂಟೋ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್ ತಿಳಿಸಿದ್ದಾರೆ.

 ಅಂಜನಪ್ಪ ಗಾರ್ಡನ್ ನ  37 ವರ್ಷದ ಶ್ರೀರಾಮ್, ಶಿವಾಜಿನಗರದ ಕಾಮರಾಜ ರಸ್ತೆ ಹರಿಪ್ರಸಾದ್, ಅಗ್ರಹಾರ ದಾಸರಹಳ್ಳಿಯ 50 ವರ್ಷದ ಕೃಷ್ಣಮೂರ್ತಿ, ಎಲೆಕ್ಟ್ರಾನಿಕ್ ಸಿಟಿ ಸಮತಾ (15), ಚಾಮರಾಜಪೇಟೆಯ ಹೃದಯ್ (7) ರಾಮನಗರದ ದೈವಿತ್ ಅವರ ಕಣ್ಣಿಗೂ ಹಾನಿಯಾಗಿದ್ದು, ಅವರೆಲ್ಲರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಇಲ್ಲಿವರೆಗೂ ಆಸ್ಪತ್ರೆಗೆ ದಾಖಲಾದ 16 ಮಂದಿ ಜೊತೆಗೆ ಇನ್ನೂ ಸೋಮವಾರದವರೆಗೂ ದಾಖಲಾಗಿದ್ದು, ಪಟಾಕಿಯಿಂದ ಹಾನಿಗೊಳಗಾದವರ ಸಂಪೂರ್ಣ ಚಿತ್ರಣ ಅಂದು ಲಭ್ಯವಾಗಲಿದೆ  ಎಂದು ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com