ಬೆಂಗಳೂರು ನಗರ ಸಮಗ್ರ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್: ವಾರದೊಳಗೆ ಟೆಂಡರ್ ಕರೆಯಲು ಬಿಡಿಎ ಸಿದ್ಧತೆ!

ಈಗಾಗಲೇ ಸಾಕಷ್ಟು ತಡವಾಗಿರುವ 2031ರ ಮಹಾ ಯೋಜನೆ (ಮಾಸ್ಟರ್‌ ಪ್ಲ್ಯಾನ್‌)ಗೆ ಮುಂದಿನ ಒಂದು ವಾರದೊಳಗಾಗಿ ಟೆಂಡರ್ ಕರೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಥತೆ ನಡೆಸಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಈಗಾಗಲೇ ಸಾಕಷ್ಟು ತಡವಾಗಿರುವ 2031ರ ಮಹಾ ಯೋಜನೆ (ಮಾಸ್ಟರ್‌ ಪ್ಲ್ಯಾನ್‌)ಗೆ ಮುಂದಿನ ಒಂದು ವಾರದೊಳಗಾಗಿ ಟೆಂಡರ್ ಕರೆಯಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಥತೆ ನಡೆಸಿದೆ.

ಎಲ್ಲವೂ ಅಂದುಕೊಂಡಂತೆ ಆದರೆ, ಪರಿಷ್ಕೃತ ಮಾಸ್ಟರ್ ಪ್ಲಾನ್ 2023 ರ ಮಧ್ಯದ ವೇಳೆಗೆ ಜಾರಿಯಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಸಿದ್ಧಪಡಿಸಿದ್ದ 2031ರ ಮಹಾ ಯೋಜನೆ (ಮಾಸ್ಟರ್‌ ಪ್ಲ್ಯಾನ್‌)ಗೆ ನೀಡಿದ್ದ ತಾತ್ಕಾಲಿಕ ಅನುಮೋದನೆಯನ್ನು ರಾಜ್ಯ ಸರ್ಕಾರ ಈ ಹಿಂದೆ ಹಿಂಪಡೆದಿತ್ತು. ಅಲ್ಲದೆ, ಪರಿಷ್ಕೃತ ಯೋಜನಾ ವರದಿ ತಯಾರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚನೆ ನೀಡಿತ್ತು.

2031ರ ಮಹಾ ಯೋಜನೆ ರೂಪಿಸಲು 2011-12ರ ನಕ್ಷೆಗಳು, ಫೋಟೋಗಳು ಮತ್ತು ಇತರೆ ಅಂಕಿಅಂಶಗಳನ್ನು ಬಳಸಿಕೊಳ್ಳಲಾಗಿದೆ. ಆದರೆ ಪ್ರಸ್ತುತ ಬಳಸಿಕೊಳ್ಳಲಾಗಿರುವ ಸ್ಥಳಗಳಲ್ಲಿ ಹಲವಾರು ಬದಲಾವಣೆಗಳು ಮತ್ತು ಬೆಳವಣಿಗೆಗಳು ಆಗಿವೆ. ಹಾಗಾಗಿ ಯೋಜನೆಯಲ್ಲಿ ಸಾಕಷ್ಟುಬದಲಾವಣೆಗಳು ಆಗಬೇಕಿದೆ ಎಂದು ಮಹಾ ಯೋಜನೆಗೆ ನೀಡಿಲಾಗಿದ್ದ ಅನುಮೋದನೆ ಹಿಂಪಡೆಯಲು ಕಾರಣ ಎಂದು ಹೇಳಿತ್ತು.

ಜೊತೆಗೆ ವಾಸ್ತವಿಕ ಅಂಕಿಅಂಶಗಳು ಮತ್ತು ನಕ್ಷೆ ಇತ್ಯಾದಿ ಮಾಹಿತಿಯನ್ನು ಒಳಗೊಂಡಂತೆ ಪರಿಷ್ಕೃತ ಯೋಜನೆ ವರದಿಯನ್ನು ಪೂರ್ಣಗೊಳಿಸಿ ಪುನಃ ಪ್ರಸ್ತಾವನೆ ಸಲ್ಲಿಸುವಂತೆ ಬಿಡಿಎ ಆಯುಕ್ತರಿಗೆ ಸೂಚನೆ ನೀಡಿತ್ತು.

ನೆದರ್ಲ್ಯಾಂಡ್ಸ್ ಮೂಲದ ಕನ್ಸಲ್ಟಿಂಗ್ ಫರ್ಮ್ ರಾಯಲ್ ಹಾಸ್ಕೊನಿಂಗ್ ಡಿಹೆಚ್'ವಿ ಹಿಂದಿನ ಯೋಜನೆಯನ್ನು ಅಭಿವೃದ್ಧಿಪಡಿಸಿತ್ತು,

ಬಿಡಿಎ ಆಯುಕ್ತ ಎಂ ಬಿ ರಾಜೇಶ್ ಗೌಡ ಅವರು ಮಾತನಾಡಿ, ಒಂದು ವಾರದೊಳಗೆ ಹೊಸ ಮಾಸ್ಟರ್ ಪ್ಲಾನ್ ತಯಾರಿಸಲು ಜಾಗತಿಕ ಟೆಂಡರ್‌ಗಳನ್ನು ಕರೆಯುತ್ತಿದ್ದೇವೆ. ಸಲಹಾ ಸಮಿತಿ ಕುರಿತು ನಿರ್ಧಾರ ಕೈಗೊಳ್ಳಲು 2 ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಹೊಸ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸಲು 18 ತಿಂಗಳು ಬೇಕಾಗುತ್ತದೆ. ಹೊಸ ಮಾಸ್ಟರ್ ಪ್ಲ್ಯಾನ್ ಸಿದ್ಧಪಡಿಸುವ ವೇಳೆ ಸಾರ್ವಜನಿಕರ ಪ್ರತಿಕ್ರಿಯೆಯನ್ನೂ ಕೇಳಲಾಗುತ್ತದೆ ಎಂದು ಹೇಳಿದ್ದಾರೆ.

ಮಾಸ್ಟರ್ ಪ್ಲಾನ್ ಮಾರ್ಚ್ 2017 ರ ವೇಳೆಗೆ ಜಾರಿಯಲ್ಲಿರಬೇಕಿತ್ತು. ಸಾಕಷ್ಟು ಪ್ರಯತ್ನಗಳ ಬಳಿಕ ಕಳೆದ ನವೆಂಬರ್ ತಿಂಗಳಿನಲ್ಲಿ ಸಿದ್ಧಪಡಿಸಲಾಗಿತ್ತು. ಆದರೆ, ಅದಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗಿತ್ತು. ಸಾರ್ವಜನಿಕರಿಂದ 14,000 ಆಕ್ಷೇಪಗಳು ಸಲ್ಲಿಕೆಯಾಗಿದ್ದವು. ಲಂಚದ ಆರೋಪಗಳೂ ಕೂಡ ಕೇಳಿ ಬಂದಿದ್ದವು.

ಸರ್ಕಾರದ ಉನ್ನತಾಧಿಕಾರಿಯೊಬ್ಬರು ಮಾತನಾಡಿ, ಯೋಜನೆಯು ನಗರ ಭೂ ಸಾರಿಗೆ ನಿರ್ದೇಶನಾಲಯ, ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮತ್ತು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳ ನಡುವೆ ಗೊಂದಲಗಳನ್ನು ಹುಟ್ಟುಹಾಕಿತ್ತು. ಒಮ್ಮತದ ಕೊರತೆ ಕೂಡ ಯೋಜನೆ ವಿಳಂಬಕ್ಕೆ ಕಾರಣವಾಯಿತು. ಇದೀಗ ಬಿಡಿಎ ಸಾರಿಗೆ ಆಧಾರಿತ ಅಭಿವೃದ್ಧಿಯತ್ತ ಗಮನ ಹರಿಸಲು ನಿರ್ಧರಿಸಿದೆ ಎಂದು ಹೇಳಿದ್ದಾರೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com