ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ; ಬುರ್ಖಾ ವಿಚಾರವಾಗಿ ಗಲಾಟೆ

ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದ್ದು, ಬುರ್ಖಾ ವಿಚಾರವಾಗಿ ಗುಪೊಂದು ನಡೆಸಿದ ದಾಂದಲೆ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮಡಿಕೇರಿ: ರಾಜ್ಯದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ಪ್ರಕರಣ ಬೆಳಕಿಗೆ ಬಂದಿದ್ದು, ಬುರ್ಖಾ ವಿಚಾರವಾಗಿ ಗುಪೊಂದು ನಡೆಸಿದ ದಾಂದಲೆ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಮಡಿಕೇರಿಯ ಸೋಮವಾರಪೇಟೆ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಅನ್ಯ ಕೋಮಿನ ಯುವತಿಯರ ಮೇಲೆ ಸಂಘಟನೆಯೊಂದರ 40ಕ್ಕೂ ಹೆಚ್ಚು ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಶನಿವಾರಸಂತೆ ಕೆಆರ್‌ಸಿ ವೃತ್ತದಲ್ಲಿ ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಇದೀಗ ಆರೋಪಿಗಳ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪ್ರಕರಣ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಗುರುವಾರ ಸಂಜೆ 4.15ರ ಸುಮಾರಿಗೆ ಶನಿವಾರಸಂತೆ ಸೇಕ್ರೆಡ್‌ ಹಾರ್ಟ್‌ ಶಾಲೆಯ ಪ್ರಥಮ ಪಿಯು ವಿದ್ಯಾರ್ಥಿನಿಯರ ಮೇಲೆ 40ಕ್ಕೂ ಹೆಚ್ಚು ಮಂದಿ ದಾಳಿ ಮಾಡಿದ್ದರು. ಈ ಕುರಿತು ಮಾಹಿತಿ ನೀಡಿರುವ ಸಂತ್ರಸ್ಥ ಬಾಲಕಿಯ ತಂದೆ, 'ನನ್ನ ಮಗಳು ಮತ್ತು ಅವಳ ಸ್ನೇಹಿತೆಯ ಮೇಲೆ ಸಂಘಪರಿವಾರದ ಹುಡುಗರು ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಗುರುವಾರ ಬೆಳಗ್ಗೆ ನನ್ನ ಮಗಳು ತನ್ನ ಕಾಲೇಜಿನ ತರಗತಿಗಳಿಗೆ ಹಾಜರಾಗಿದ್ದಳು. ತರಗತಿಗಳಿಗೆ ಪ್ರವೇಶಿಸುವ ಮೊದಲು ಅವರು ಬುರ್ಖಾವನ್ನು ತೆಗೆದುಹಾಕಬೇಕು. ಹೀಗಾಗಿ ನನ್ನ ಮಗಳು ತನ್ನ ಬುರ್ಖಾವನ್ನು ತೆಗೆದು ಅದೇ ಕಾಲೇಜಿನ ಕ್ರಿಶ್ಚಿಯನ್ ಹುಡುಗಿಗೆ ಬೆಳಿಗ್ಗೆ ನೀಡಿದ್ದಳು. ಕ್ರಿಶ್ಚಿಯನ್ ಹುಡುಗಿ ಗುರುವಾರ ಕಾಲೇಜಿಗೆ ಹಾಜರಾಗಿರಲಿಲ್ಲ. ಹೀಗಾಗಿ ಆಕೆಯ ಸ್ನೇಹಿತೆ ಸಂಜೆ ಬುರ್ಖಾವನ್ನು ಹಿಂದಿರುಗಿಸಲು ಕಾಲೇಜಿನ ಬಳಿ ಕಾಯುತ್ತಿದ್ದರು. ಆದರೆ, ಬುರ್ಖಾವನ್ನು ಹಿಂತಿರುಗಿಸುವಾಗ, ನನ್ನ ಮಗಳು ಮತ್ತು ಅವಳ ಸ್ನೇಹಿತೆಯ ಮೇಲೆ 40 ಕ್ಕೂ ಹೆಚ್ಚು ಗೂಂಡಾಗಳು ದಾಳಿ ನಡೆಸಿದರು. ಅಲ್ಲದೆ ಬಾಲಕಿಯರನ್ನು ಬೀಗ ಜಡಿದು, ಥಳಿಸಿ, ನಿಂದಿಸಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದರು. 

ಬಾಲಕಿಯ ಬುರ್ಖಾ ಹರಿದಿದ್ದು, ಅವರ ಬೆನ್ನಿನ ಮೇಲೆ ಗೀರುಗಳು ಸೇರಿದಂತೆ ಗಾಯಗಳಾಗಿವೆ. ನಂತರ ಬಾಲಕಿಯರನ್ನು ಕೊಡಲಿಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದರು. ಇನ್ನು ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕಿಯರ ಕುಟುಂಬದವರು ಎಫ್‌ಐಆರ್ ದಾಖಲಿಸಿದ್ದು, ಶನಿವಾರಸಂತೆ ಪೊಲೀಸರು ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಿದ್ದಾರೆ. 

ಈ ಕುರಿತು ಮಾಹಿತಿ ನೀಡಿರುವ ಶನಿವಾರಸಂತೆ ಎಸ್‌ಐ ಪರಶಿವ ಮೂರ್ತಿ ಅವರು, ಪ್ರಕರಣ ಸಂಬಂಧ ಶನಿವಾರಸಂತೆಯ ಪ್ರಜ್ವಲ್ ಮತ್ತು ಕೌಶಿಕ್ ಎಂಬುವರರನ್ನು ಬಂಧಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಹೆಚ್ಚಿನವರನ್ನು ಬಂಧಿಸಲಾಗುವುದು ಎಂದು ಹೇಳಿದರು.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com