ಬೆಂಗಳೂರು: ನಿರ್ಮಾಣ ನಿಯಮ ಉಲ್ಲಂಘನೆ ಬಿಬಿಎಂಪಿಯಿಂದ ಮನೆ ಮಾಲಿಕರಿಗೆ ನೊಟೀಸ್
ಬೆಂಗಳೂರು ನಗರದ ಹೊರಭಾಗಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳಲ್ಲಿ ಬಿಬಿಎಂಪಿ ಇತ್ತೀಚೆಗೆ ಕಟ್ಟಡ ಮಾಲಿಕರಿಗೆ ನೊಟೀಸ್ ಜಾರಿ ಮಾಡಲು ಪ್ರಾರಂಭಿಸಿದೆ.
Published: 23rd November 2021 12:44 PM | Last Updated: 23rd November 2021 01:18 PM | A+A A-

ಬಿಬಿಎಂಪಿ ಕಚೇರಿ
ಬೆಂಗಳೂರು: ಬೆಂಗಳೂರು ನಗರದ ಹೊರಭಾಗಗಳಲ್ಲಿ ನಿಯಮ ಉಲ್ಲಂಘನೆ ಮಾಡಿ ಕಟ್ಟಡ ನಿರ್ಮಿಸಿರುವ ಪ್ರಕರಣಗಳಲ್ಲಿ ಬಿಬಿಎಂಪಿ ಇತ್ತೀಚೆಗೆ ಕಟ್ಟಡ ಮಾಲಿಕರಿಗೆ ನೊಟೀಸ್ ಜಾರಿ ಮಾಡಲು ಪ್ರಾರಂಭಿಸಿದೆ.
ನಿರ್ಮಾಣ ನಿಯಮಗಳ ಉಲ್ಲಂಘನೆ ವಿರುದ್ಧ ಕೈಗೊಂಡಿರುವ ಕ್ರಮಗಳ ಬಗ್ಗೆ ಡಿ.09 ರ ವೇಳೆಗೆ ವರದಿ ಸಲ್ಲಿಸಬೇಕೆಂದು ಬಿಬಿಎಂಪಿಗೆ ಹೈಕೋರ್ಟ್ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಬಿಬಿಎಂಪಿ ಕಾರ್ಯಪ್ರವೃತ್ತವಾಗಿದೆ.
ಬಿಬಿಎಂಪಿಯಲ್ಲಿನ ಈ ಬೆಳವಣಿಗೆಯಿಂದ ಸಾರ್ವಜನಿಕರು ಮನೆ-ಮನೆಗಳಿಗೆ ಯೋಜನೆಯ ಅನುಮೋದನೆ (plan approval) ದಾಖಲೆಗಳನ್ನು ನೀಡುವಂತೆ ನೊಟೀಸ್ ಬರಲಿದೆ ಎಂಬ ಭೀತಿಯನ್ನು ಎದುರಿಸುತ್ತಿದ್ದಾರೆ.
ಬಿ'ಖಾತೆಗಳ ನಿವೇಶನಗಳ (ಇನ್ನಷ್ಟೇ ವಸತಿಯೋಗ್ಯ ಭೂಮಿಯಾಗಿ ಮಾರ್ಪಾಡಾಗಬೇಕಿರುವ ಕಂದಾಯ ಭೂಮಿ ಅಥವಾ ಕೃಷಿ ಭೂಮಿಗಳು) ಲ್ಲಿನ ಕಟ್ಟಡಗಳನ್ನು ಬಿಬಿಎಂಪಿ ಅಕ್ರಮ ಕಟ್ಟಡ ಎಂದು ಪರಿಗಣಿಸುತ್ತಿದೆ.
ಇದನ್ನೂ ಓದಿ: ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ: 2ನೇ ದಿನವೂ ಮುಂದುವರೆದ ಕಡತಗಳ ಪರಿಶೀಲನೆ, 300 ಕೋಟಿ ರೂ. ಗೂ ಅಧಿಕ ಅಕ್ರಮ ಪತ್ತೆ!!
ಹೈಕೋರ್ಟ್ ಅ.27 ರ ತನ್ನ ಆದೇಶದಲ್ಲಿ, ಬೆಂಗಳೂರಿನಲ್ಲಿರುವ ಅಕ್ರಮ ಕಟ್ಟಡಗಳ ವಿರುದ್ಧ ಕ್ರಮ ಕೈಗೊಳ್ಳದ ಬಿಬಿಎಂಪಿ ಮುಖ್ಯ ಆಯುಕ್ತರು, ಬಿಬಿಎಂಪಿಯನ್ನು ತರಾಟೆಗೆ ತೆಗೆದುಕೊಂಡು ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಸೂಚನೆ ನೀಡಿತ್ತು.
ಅಕ್ರಮ ಕಟ್ಟಡಗಳ ವಿರುದ್ಧ ಕೈಗೊಂಡಿರುವ ಕ್ರಮಗಳ ಫೋಟೋಗ್ರಾಫಿಕ್ ಸಾಕ್ಷ್ಯಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.
ಈ ಬೆಳವಣಿಗೆಯ ಬಳಿಕ ಟ್ರಿನಿಟಿ ಎನ್ಕ್ಲೇವ್ ನ ನಿವಾಸಿಗಳ ಒಕ್ಕೂಟದ ಅಧ್ಯಕ್ಷ ಕೊಚು ಶಂಕರ್ ಮಾತನಾಡಿದ್ದು, ಕಳೆದ ವಾರ ಹೊರಮಾವು ನಲ್ಲಿರುವ ವಸತಿ ಸಂಕೀರ್ಣದಲ್ಲಿನ 100 ಕ್ಕೂ ಹೆಚ್ಚು ಮನೆಗಳು ನೊಟೀಸ್ ಪಡೆದಿವೆ ಎಂದು ಹೇಳಿದ್ದಾರೆ.
"ಮನೆಯ ಮಾಲಿಕರಿಗೆ ಮೂರು ದಿನಗಳಲ್ಲಿ ಬಿಬಿಎಂಪಿ ಅಧಿಕಾರಿಗಳಿಗೆ ಹಲವು ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಲಾಗಿದೆ. "ನಾವು ನಿವೇಶನಗಳನ್ನು ಖರೀದಿಸಿದ್ದಾಗ ಬಿ'ಖಾತಾ ನಿವೇಶನಗಳನ್ನು ಪರಿವರ್ತನೆ ಮಾಡಲಾಗುತ್ತಿರಲಿಲ್ಲ. ಅಂದು ಖರೀದಿಸಿದ್ದಾಗ ಮುಂದೊಮ್ಮೆ ದಂಡ ಪಾವತಿಸಿ ಪರಿವರ್ತನೆ ಮಾಡಿಕೊಳ್ಳಬಹುದು" ಎಂದು ವಕೀಲರು ತಿಳಿಸಿದ್ದಾಗಿ ಶಂಕರ್ ಹೇಳಿದ್ದಾರೆ.
ಇದನ್ನೂ ಓದಿ: ಪೊಲೀಸ್ ಭದ್ರತೆಯಲ್ಲಿ ಮಂಜೂರುದಾರರಿಗೆ ನಿವೇಶನವನ್ನು ಹಸ್ತಾಂತರಿಸಿದ ಬಿಡಿಎ
ನಾವೆಲ್ಲರೂ ನಿವೃತ್ತಿಯಿಂದ ಬಂದ ಹಣದಿಂದ ಇಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದೇವೆ. ಈಗ ನಮಗೆ ನಿದ್ದೆ ಬರುತ್ತಿಲ್ಲ. ಮಾನಸಿಕವಾಗಿ ಒತ್ತಡ ಎದುರಾಗುತ್ತಿದೆ. ನೊಟೀಸ್ ಗಳು ಬರುತ್ತಿರುವುದು ಮನೆಯ ಮಾಲಿಕರಿಗೆ ಮತ್ತಷ್ಟು ಒತ್ತಡ ಹೆಚ್ಚಾಗುವಂತೆ ಮಾಡುತ್ತಿದೆ ಎಂದು ಶಂಕರ್ ಹೇಳಿದ್ದಾರೆ.
ವರ್ತೂರು ರೈಸಿಂಗ್ ಎಂಬ ನಾಗರಿಕ ಚಳುವಳಿಯ ಜಗದೀಶ್ ರೆಡ್ಡಿ ಈ ಬಗ್ಗೆ ಮಾತನಾಡಿದ್ದು, ಬೆಂಗಳೂರು ನಗರದ ಅರ್ಧ ಭಾಗವೇ ಯೋಜನೆ ರಹಿತವಾಗಿ, ಅನಿಯಂತ್ರಿತ ನಗರವಾಗಿದೆ. ಸರ್ಕಾರ ಏನನ್ನು ಮಾಡಿದೆಯೋ ಅದನ್ನು ಈಗ ಬದಲಾವಣೆ ಮಾಡುವುದಕ್ಕೆ ಸಾಧ್ಯವಿಲ್ಲ. ಭವಿಷ್ಯದಲ್ಲಿ ನಗರ ಯೋಜನೆ ವಿಭಾಗ ಅಕ್ರಮ ಲೇ ಔಟ್ ಗಳಿಗೆ ಅನುಮತಿ ನೀಡಬಾರದು ಎನ್ನುತ್ತಾರೆ".
ಬಿಬಿಎಂಪಿ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ನಾವು ಕೋರ್ಟ್ ಏನನ್ನು ಹೇಳಿದೆಯೋ ಅದನ್ನು ಮಾಡುತ್ತಿದ್ದೇವೆ. ಸಾರ್ವಜನಿಕರು ನಿಯಮಗಳನ್ನು ಉಲ್ಲಂಘನೆ ಮಾಡಬಾರದಿತ್ತು. ನಾವೂ ಸಹ ಬಿ ಖಾತಾ ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದಿತ್ತು, ಹಿಂದೆ ಇಬ್ಬರಿಂದಲೂ ತಪ್ಪಾಗಿದೆ. ಈಗ ಕಾನೂನಿನ ಪ್ರಕಾರ ನಾವು ಕ್ರಮ ಕೈಗೊಳ್ಳಲು ಮುಂದಾಗುತ್ತಿದ್ದೇವೆ ಎಂದು ಹೇಳಿದ್ದಾರೆ.