ಬಿಡಿಎ ಕಚೇರಿ ಮೇಲೆ ಎಸಿಬಿ ದಾಳಿ: 2ನೇ ದಿನವೂ ಮುಂದುವರೆದ ಕಡತಗಳ ಪರಿಶೀಲನೆ, 300 ಕೋಟಿ ರೂ. ಗೂ ಅಧಿಕ ಅಕ್ರಮ ಪತ್ತೆ!!
ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ನಿನ್ನೆ ದಾಳಿ ನಡೆಸಿದ್ದ ಅಧಿಕಾರಿಗಳು ಇಂದು ಕೂಡ ಕಡತಗಳ ಪರಿಶೀಲನೆಯನ್ನು ಮುಂದುವರೆಸಿದ್ದು, ಈ ವರೆಗೂ ಕನಿಷ್ಠ 300 ಕೋಟಿ ರೂಗೂ ಅಧಿಕ ಅಕ್ರಮ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
Published: 20th November 2021 05:37 PM | Last Updated: 20th November 2021 05:37 PM | A+A A-

ಬಿಡಿಎ ಮೇಲೆ ಎಸಿಬಿ ದಾಳಿ
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಕಚೇರಿ ಮೇಲೆ ನಿನ್ನೆ ದಾಳಿ ನಡೆಸಿದ್ದ ಅಧಿಕಾರಿಗಳು ಇಂದು ಕೂಡ ಕಡತಗಳ ಪರಿಶೀಲನೆಯನ್ನು ಮುಂದುವರೆಸಿದ್ದು, ಈ ವರೆಗೂ ಕನಿಷ್ಠ 300 ಕೋಟಿ ರೂಗೂ ಅಧಿಕ ಅಕ್ರಮ ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಬಿಡಿಎ ಪ್ರಧಾನ ಕಚೇರಿ ಮೇಲೆ ಎಸಿಬಿ ದಾಳಿ, ತೀವ್ರ ಶೋಧ, ನಗದು ಜಪ್ತಿ
ನಿನ್ನೆ ರಾತ್ರಿ 10 ಗಂಟೆ ತನಕ ಕಡತಗಳ ಪರಿಶೀಲನೆ ಹಾಗೂ ಬಿಡಿಎ ಅಧಿಖಾರಿಗಳು, ಸಿಬ್ಬಂದಿ ವಿಚಾರಣೆ ನಡೆಸಿದ್ದ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ಕಚೇರಿ ತೆರೆಯುವ ಮುನ್ನವೇ ಆಗಮಿಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ತಂಡ ಕಚೇರಿ ಬಾಗಿಲು ತೆರೆಸಿ ಕಡತಗಳ ಪರಿಶೀಲನೆ ಆರಂಭಿಸಿದರು.
ಇದನ್ನೂ ಓದಿ: ಶಿವರಾಮ ಕಾರಂತ್ ಲೇಔಟ್ ನಿಂದ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಅರ್ಹತಾ ಪ್ರಮಾಣ ಪತ್ರ ವಿತರಣೆ
ಬಿಡಿಎ ಕಚೇರಿಗೆ ಆಗಮಿಸಿದ 8 ಅಧಿಕಾರಿಗಳ ಎಸಿಬಿ ತಂಡ ಎಸ್.ಪಿ ಅಬ್ದುಲ್ ಅಹಮದ್ ನೇತೃತ್ವದಲ್ಲಿ ಡಿಎಸ್ 4 (DS-4) ಗೀತಾ ಹುಡೇದ್ ಕಚೇರಿಯಲ್ಲಿ ಪರಿಶೀಲನೆ ನಡೆಸಿದೆ. ಇನ್ಸ್ ಪೆಕ್ಟರ್ ಗಳಾದ ದಯಾನಂದ್, ಕುಮಾರ್ ಸ್ವಾಮಿ, ನಯಾಜ್ ಅವರಿಂದ ಪರಿಶೀಲನಾ ಕಾರ್ಯ ನಡೆದಿದೆ. ಬಿಡಿಎ ಉಪಕಾರ್ಯದರ್ಶಿಗಳಾದ ಗೀತಾ, ಸುಮಾ ಅನುಪಸ್ಥಿತಿಯಲ್ಲಿ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಬಿಡಿಎ ಕಚೇರಿ ಮೇಲೆ ದಾಳಿ ನಡೆಸಿರುವ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬಿಡಿಎ ಉಪಕಾರ್ಯದರ್ಶಿ (Ds1) ನವೀನ್ ಜೋಸೆಫ್ ಅವರನ್ನು ಬಿಡಿಎ ಕಚೇರಿಯಲ್ಲೇ ವಿಚಾರಣೆಗೊಳಪಡಿಸಿದ್ದಾರೆ. ಜೊಸೆಫ್ ಕಚೇರಿಯಲ್ಲಿ ಬಹುತೇಕ ಪರಿಶೀಲನೆ ಅಂತ್ಯವಾಗಿದ್ದು, ಹೆಚ್ಚಿನ ವಿಚಾರಣೆಗೆ ಎಸಿಬಿ ಕಚೇರಿಗೆ ಹಾಜರಾಗುವಂತೆ ಅವರಿಗೆ ನೋಟಿಸ್ ಜಾರಿ ಮಾಡುವ ಸಾಧ್ಯತೆಯಿದೆ.
ನಾಪತ್ತೆಯಾದ ಕಡತಗಳು ಮಧ್ಯವರ್ತಿಗಳ ಕೈ ಸೇರಿರುವ ಶಂಕೆ!
ಅಲ್ಲದೆ ನಿನ್ನೆ ಎಸಿಬಿ ತಂಡಗಳು ಅನುಮಾನಸ್ಪದ ಕಡತಗಳು, ನಿವೇಶನ ಹಂಚಿಕೆ, ಹಾಗೂ ವಿವಿಧ ಕಾಮಗಾರಿಗಳಿಗೆ ಸಂಬಂಧಪಟ್ಟ ದಾಖಲೆಗಳನ್ನ ಜಪ್ತಿ ಮಾಡಿದ್ದರು. ಇಂದು ಕೂಡ ಕಡತಗಳ ಪರಿಶೀಲನೆ ಆರಂಭವಾದಾಗ ವಿವಿಧೆಡೆ ನಿವೇಶನಗಳ ಹಂಚಿಕೆ ಸಂಬಂಧದ ಕಡತಗಳು ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ ಎನ್ನಲಾಗಿದೆ. ನಾಪತ್ತೆಯಾಗಿರುವ ಕಡತಗಳು ಮಧ್ಯವರ್ತಿಗಳ ಕೈ ಸೇರಿರುವ ಶಂಕೆ ವ್ಯಕ್ತವಾಗಿದೆ. ಮುಖ್ಯವಾಗಿ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ, ವಿಶ್ವೇಶ್ವರಯ್ಯ ಬಡಾವಣೆಗಳ ಕಡತಗಳ ಪರಿಶೀಲನೆ ನಡೆಯುತ್ತಿದೆ. ಇಲ್ಲಿಯ ನಿವೇಶನಗಳ ಹಂಚಿಕೆ ಸಂಬಂಧ ಸಾರ್ವಜನಿಕರಿಂದ ಹಲವಾರು ದೂರುಗಳು ಎಸಿಬಿಗೆ ಹೋಗಿದ್ದವು ಎಂದು ಹೇಳಲಾಗಿದೆ. ಈ ಸಂಬಂಧ ತನಿಖೆಗಾಗಿ ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದು ದಾಳಿ ನಡೆದಿದೆ ಎಂದು ತಿಳಿದುಬಂದಿದೆ.
ಏಕಕಾಲಕ್ಕೆ ದಾಳಿ
ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಎಲ್ಲ ಕಚೇರಿಗಳ ಮೇಲೆಯೂ ಏಕಕಾಲಕ್ಕೆ ದಾಳಿ ನಡೆದಿರುವುದು ಗಮನಾರ್ಹ. ಬಿಡಿಎ ಉಪ ಕಾರ್ಯದರ್ಶಿ ಡಾ.ಎನ್.ಎನ್ ಮಧು, ನವೀನ್ ಜೋಸೆಫ್, ಗೀತಾ ಉಡೇದಾ, ಹಾಗೂ ವಿಶೇಷ ಭೂ ಸ್ವಾಧೀನಾಧಿಕಾರಿ ಡಾ.ಸೌಜನ್ಯ ಹಾಗೂ ಇತರ ಅಧಿಕಾರಿಗಳ ಕಚೇರಿಗಳಲ್ಲಿದ್ದ ದಾಖಲೆ, ಕಾಗದಪತ್ರಗಳನ್ನು ಎಸಿಬಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.
ಮಧ್ಯವರ್ತಿಗಳಿಂದ ತುಂಬಿದ್ದ ಬಿಡಿಎ ಆವರಣದಲ್ಲಿ ಇಂದು ನೀರವ ಮೌನ
ಇನ್ನು ಮಧ್ಯವರ್ತಿಗಳಿಂದಲೇ ಯಾವಾಗಲೂ ತುಂಬಿರುತ್ತಿದ್ದ ಬಿಡಿಎ ಆವರಣ ಇಂದು ಎಸಿಬಿ ಅಧಿಕಾರಿಗಳ ದಾಳಿಯಿಂದಾಗಿ ಭಣಗುಡುತ್ತಿತ್ತು. ಬ್ರೋಕರ್ಗಳು ಯಾರೂ ಬಿಡಿಎ ಕಚೇರಿಯತ್ತ ಸುಳಿದಿಲ್ಲ. ತಂಡೋಪಾದಿಯಲ್ಲಿ ಆಗಮಿಸಿರುವ ಎಸಿಬಿ ಅಧಿಕಾರಿಗಳು ಎಲ್ಲ ವಾಹನಗಳನ್ನೂ ತಪಾಸಣೆ ಮಾಡುತ್ತಿದ್ದಾರೆ.