2 ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸೌಲಭ್ಯಗಳ ನೀಡಲು ಸರ್ಕಾರ ಮುಂದು!
ಹೋಟೆಲ್‌ಗಳು, ಮಾಲ್‌ಗಳು, ಸರ್ಕಾರಿ ಕಚೇರಿಗಳು, ಈಜುಕೊಳ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರ ಇದೀಗ 2 ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸೌಲಭ್ಯಗಳ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
Published: 29th November 2021 11:44 AM | Last Updated: 29th November 2021 11:44 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಹೋಟೆಲ್‌ಗಳು, ಮಾಲ್‌ಗಳು, ಸರ್ಕಾರಿ ಕಚೇರಿಗಳು, ಈಜುಕೊಳ ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳು ಎರಡು ಡೋಸ್ ಲಸಿಕೆ ಪಡೆದಿರುವ ಪ್ರಮಾಣಪತ್ರ ಹೊಂದಿರುವುದನ್ನು ಕಡ್ಡಾಯ ಮಾಡಿರುವ ರಾಜ್ಯ ಸರ್ಕಾರ ಇದೀಗ 2 ಡೋಸ್ ಕೋವಿಡ್ ಲಸಿಕೆ ಪಡೆದವರಿಗೆ ಮಾತ್ರ ಸಾರ್ವಜನಿಕ ಸೌಲಭ್ಯಗಳ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಗುಜರಾತ್ ಮಾದರಿಯನ್ನು ಅನುಸರಿಸುವಂತೆ ತಾಂತ್ರಿಕ ಸಲಹಾ ಸಮಿತಿ ಸರ್ಕಾರಕ್ಕೆ ಸಲಹೆ ನೀಡಿದ್ದು, ಈ ಕುರಿತು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.
"ಗುಜರಾತ್‌ನಲ್ಲಿ, ಸುಮಾರು ನಾಲ್ಕು ತಿಂಗಳುಗಳಲ್ಲಿ ಮೊದಲ ಬಾರಿಗೆ ನವೆಂಬರ್ ಎರಡನೇ ವಾರದಲ್ಲಿ ದೈನಂದಿನ ಕೋವಿಡ್ ಸೋಂಕಿತರ ಸಂಖ್ಯೆ 40ಕ್ಕೆ ತಲುಪಿಸುವುದು ಕಂಡು ಬಂದಿದೆ. ಮತ್ತು ಯಾವುದೇ ಸಾವು ಸಂಭವಿಸಿಲ್ಲ.
ಲಸಿಕೆ ಹಾಕಿಸಿಕೊಳ್ಳದ ಜನರಿಗೆ ಸಾರ್ವಜನಿಕ ಸೌಲಭ್ಯಗಳ ಬಳಸದಂತೆ ಗುಜರಾತ್ ರಾಜ್ಯ ಸರ್ಕಾರ ನಿರ್ಬಂಧ ಹೇರಿತ್ತು. ಇದರಂತೆ ಸಾರ್ವಜನಿಕ ಸೌಲಭ್ಯಗಳ ಬಳಕೆ ಮಾಡಲು ಬರುವ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರೂ ಕೋವಿಡ್-19 ಲಸಿಕೆ ಪ್ರಮಾಣಪತ್ರ ಅಥವಾ ಇ-ಪ್ರತಿಯನ್ನು ಹೊಂದಿರಬೇಕೆಂದು ತಿಳಿಸಿತ್ತು.
ಅನಾರೋಗ್ಯ ಹಾಗೂ ಸಾವುಗಳ ತಡೆಯಲು ನಾವೂ ಕೂಡ ಇದೇ ರೀತಿಯ ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ತಾಂತ್ರಿಕ ಸಲಹಾ ಸಮಿತಿ ನಡೆಸಿದ ಸಭೆಯಲ್ಲಿ ಭಾಗಿಯಾಗಿದ್ದ ತಜ್ಞರೊಬ್ಬರು ಹೇಳಿದ್ದಾರೆ.
ಕ್ಲಸ್ಟರ್‌ಗಳ ಹೆಚ್ಚಳ ಮತ್ತು ಓಮಿಕ್ರಾನ್ ರೂಪಾಂತರದ ಆತಂಕದ ನಡುವೆ ಅನಾರೋಗ್ಯದ ತೀವ್ರತೆಯನ್ನು ತಡೆಗಟ್ಟಲು ಎರಡು ಡೋಸ್ ಲಸಿಕೆ ಪಡೆದುಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಸಿದ್ದಾರೆ.
ಆಸ್ರಾ ಆಸ್ಪತ್ರೆಯ ಅಧ್ಯಕ್ಷ ಡಾ.ಜಗದೀಶ ಹಿರೇಮಠ ಮಾತನಾಡಿ, ಲಸಿಕೆ ಹಾಕದವರಿಗೆ ಹೋಲಿಸಿದರೆ ಲಸಿಕೆ ಪಡೆದವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿರುವುದು ಅತ್ಯಂತ ಕಡಿಮೆಯಾಗಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಪೈಕಿ ಶೇ.57ರಷ್ಟು ಜನರು ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಹೊಸ ರೂಪಾಂತರಿ ವೈರಸ್ ರಾಜ್ಯಕ್ಕೆ ಕಾಲಿಟ್ಟಿದ್ದೇ ಆದರೆ, ಪರಿಸ್ಥಿತಿ ಹದಗೆಡುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.
ಮೊದಲ ಡೋಸ್ ಲಸಿಕೆ ಪಡೆದವರ ಪ್ರಮಾಣ ಶೇ.90ಕ್ಕೆ ತಲುಪಿದ್ದು, ಲಸಿಕೆಯ ಬೇಡಿಕೆಯೂ ಕಡಿಮೆಯಾಗಿದೆ. ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ರಾಜ್ಯ ಸರ್ಕಾರವು ಸಾರ್ವಜನಿಕ ಸೌಲಭ್ಯಗಳ ಬಳಕೆಗಾಗಿ ಎರಡು ಡೋಸ್ ಲಸಿಕೆ ಕಡ್ಡಾಯ ಮಾಡುವ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕಿದೆ ಎಂದು ಮತ್ತೊಬ್ಬ ತಜ್ಞರು ಹೇಳಿದ್ದಾರೆ.