ರಾಜ್ಯದ ಹಲವೆಡೆ ಮುಂದಿನ 2 ದಿನ ಭಾರೀ ಮಳೆ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದ ಹಲವೆಡೆ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಮಾಹಿತಿ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ರಾಜ್ಯದ ಹಲವೆಡೆ ಇನ್ನೂ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಮಾಹಿತಿ ನೀಡಿದೆ.

ಇಂದೂ ಕೂಡ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಗಳಿವೆ. ಶಹೀನ್‌ ಚಂಡಮಾರುತ ಮತ್ತು ವಾಯುಭಾರ ಕುಸಿತದ ಪರಿಣಾಮ ರಾಜ್ಯದಲ್ಲಿ ಹೆಚ್ಚಿನ ಮಳೆಗೆ ಕಾರಣವಾಗಲಿದೆ.

ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಭಾರಿ ಮಳೆ ಮತ್ತು ಉತ್ತರ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ. 

ಸಿಲಿಕಾನ್​ ಸಿಟಿಯಲ್ಲಿ ವರುಣನ ಆರ್ಭಟ:  ಅಪಾರ ಆಸ್ತಿಪಾಸ್ತಿ ಹಾನಿ, ಕೆಲವೆಡೆ ಜಾನುವಾರು ಸಾವು
ಸಿಲಿಕಾನ್ ಸಿಟಿಯಲ್ಲಿ ಭಾರಿ ಮಳೆಯಾಗಿದ್ದು, ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ ಹಾಗೆ ಅಪಾರ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ಬೆಂಗಳೂರಿನ ಹಲವು ಕಡೆ ಮನೆ, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. ಜೆಸಿ ನಗರ, ಸಂಪಂಗಿರಾಮನಗರದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದು, ಬಿಬಿಎಂಪಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಜನರು ಹಿಡಿಶಾಪ ಹಾಕುತ್ತಿದ್ದಾರೆ.

ಜೆಸಿ ನಗರದ ತೌಸಿಫ್ ಎಂಬುವವರಿಗೆ ಸೇರಿದ ಎಲೆಕ್ಟ್ರಾನಿಕ್ ಶೋ ರೂಂಗೆ ನೀರು ನಗ್ಗಿದೆ. ಅಲ್ಲದೇ ಬಿಬಿಎಂಪಿ ಕೇಂದ್ರ ಕಚೇರಿಯ ಹಿಂದಿನ ರಸ್ತೆಯ ತಗ್ಗುಪ್ರದೇಶದ ಮನೆಗಳಿಗೂ ನೀರು ನುಗ್ಗಿದೆ. ರಸ್ತೆಯಲ್ಲಿನ ಡ್ರೈನೇಜ್ ಹಾಗೂ ರಾಜಕಾಲುವೆ ನೀರು ಸಂಪಗಿರಾಮನಗರದ ಹಲವು ಮನೆಗಳಿಗೆ ನುಗ್ಗಿ ಅವಾಂತರ ಉಂಟುಮಾಡಿದೆ. ಈ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಹಾಗೂ ಕಂಟ್ರೋಲ್ ರೂಂಗೆ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ ಎನ್ನುತ್ತಿದ್ದಾರೆ ಸ್ಥಳೀಯರು.

ಹೆಚ್​ಎಎಲ್ ನ ಬಸವನಗರದಲ್ಲಿಯೂ ವರುಣ ಅವಾಂತರ ಸೃಷ್ಟಿಸಿದ್ದಾನೆ. ರಾಜರಾಜೇಶ್ವರಿ ನಗರದ ಜನಪ್ರೀಯ ಲೇಔಟ್ ನಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಸುಮಾರು ಮೂರು ಏರಿಯಾಗಳಲ್ಲಿ ನಿಂತ ನೀರು ಕೆರೆಯಂತೆ ಕಾಣುತ್ತಿದೆ. ನಾಗರಭಾವಿ ಬಳಿಯಿರೋ ಬಿಡಿಎ ಲೇಔಟ್​ನ ಹಲವಾರು ಮನೆಗಳಿಗೆ ಹಾಗೂ ರಾಜರಾಜೇಶ್ವರಿ ನಗರದ ಜನಪ್ರೀಯ ಲೇಔಟ್​​ ಮನೆಗಳಿಗೆ ನೀರು ನುಗ್ಗಿದೆ. ಇಲ್ಲಿ ರಸ್ತೆಗಳು ಕೆಲ ಕಾಲ ಜಲಾವೃತಗೊಂಡಿದ್ದವು.

ಕುರುಬರಹಳ್ಳಿ ಪೈಪ್ ಲೈನ್​ನಿಂದ ನೀರು ರಸ್ತೆಗೆ ನುಗ್ಗಿದ ಪರಿಣಾಮ ಹಲವು ಮನೆಗಳಿಗೆ ಸಮಸ್ಯೆ ಉಂಟಾಗಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ಸಿಲಿಕಾನ್ ಸಿಟಿಯಲ್ಲಿ ಹಲವು ಕಡೆ ತೊಂದರೆ ಉಂಟಾಗಿದೆ. ಮಳೆ ನಿಂತ ನಂತರ ಹಲವು ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಇಷ್ಟೆಲ್ಲಾ ಅವಾಂತರಗಳು ಉಂಟಾದರೂ ಬಿಬಿಎಂಪಿ ಅಧಿಕಾರಿಗಳು ಸ್ಥಳಕ್ಕೆ ಬಾರದೆ ಇದ್ದುದರಿಂದ ಸ್ಥಳೀಯರು ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ

ಕಾಂಪೌಂಡ್ ಗೋಡೆ ಕುಸಿತ:
ಇನ್ನು ಹೆಚ್.ಎ. ಎಲ್ ಬಳಿಯ ರಮೇಶ್ ನಗರದಲ್ಲಿ ಭಾರೀ ಮಳೆಗೆ ಕಾಂಪೌಂಡ್ ಗೋಡೆ ಕುಸಿದಿದೆ. ಕಾಂಪೌಂಡ್ ಗೋಡೆ ಕುಸಿತಕ್ಕೆ 10ಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಇದರಲ್ಲಿ ನಾಲ್ಕು ಕಾರು, ಮೂರು ಆಟೋ ಸೇರಿವೆ. 12 ಅಡಿ ಎತ್ತರದ ಸುಮಾರು 200 ಮೀಟರ್ ಉದ್ದದ ಗೋಡೆ ಇದಾಗಿದೆ. ಸ್ಥಳಕ್ಕೆ ಹೆಚ್.ಎ.ಎಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಆರ್.ಆರ್ ನಗರದ ಐಡಿಯಲ್ ಹೋಮ್ಸ್​​ಗೆ ರಾಜಕಾಲುವೆ ನೀರು ನುಗ್ಗಿದೆ. ಸಹಾಯಕ್ಕೆ ತಡರಾತ್ರಿಯಿಂದ ಕರೆ ಮಾಡಿದರೂ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲವಂತೆ. ಇಲ್ಲಿನ ಆರ್.ಆರ್.ನಗರ ಐಡಿಯಲ್ ಹೋಮ್ಸ್​​ನ ಶಿವಣ್ಣ ಎನ್ನುವವರ ಮನೆಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ಮಳೆಯ ರಭಸಕ್ಕೆ ಮನೆಯ ಡೋರ್ ಕಿತ್ತು ಬಂದಿದೆ. ಸುಮಾರು ಐದಾರು ಅಡಿಗಳಷ್ಟು ನೀರು ಮನೆಯಲ್ಲಿ ನಿಂತಿದೆ.

ರಾತ್ರಿಯಿಡಿ ಮನೆಗೆ ನುಗ್ಗಿರೋ ಮಳೆ ನೀರನ್ನ ಜನರು ಹೊರಹಾಕಿದ್ದಾರೆ.

ರೈತನ ಬದುಕಿನ ಸಂಕಷ್ಟ:
ರಾತ್ರಿ ಸುರಿದ ಭಾರೀ ಮಳೆ ಕೇವಲ ಜನರಿಗೆ ಅಷ್ಟೇ ಅಲ್ಲ ರೈತರ ಬೆಳೆಗೆ ಹಾಗೂ ಜಾನುವಾರುಗಳಿಗೆ ತೀವ್ರ ಸಂಕಷ್ಟ ಉಂಟಾಗುವಂತೆ ಮಾಡಿದೆ.

ಎರಡು ತಾಸು ಸುರಿದ ಮಳೆಗೆ ರೈತನ ಬದುಕೇ ಸಂಕಷ್ಟದಲ್ಲಿ ಸಿಲುಕಿದೆ. ರಾಜಕಾಲುವೆ ನೀರು ಏಕಾಏಕಿ ಮನೆ ಹಾಗೂ ದನದ ಕೊಟ್ಟಿಗೆಗೆ ನುಗ್ಗಿದ ಪರಿಣಾಮ ಹತ್ತಕ್ಕೂ ಹೆಚ್ಚು ಜಾನುವಾರುಗಳು ಸಾವಿಗೀಡಾಗಿವೆ. ಅಲ್ಲದೇ ರಾಜಕಾಲುವೆಯಲ್ಲಿ5 ಹಸು ಕೊಚ್ಚಿ ಹೋಗಿವೆ.

ಭಾರೀ ಮಳೆಗೆ 6 ಮೇಕೆ, 1 ಹೋರಿ, 1 ಎಮ್ಮೆ, 1 ಕರು ಸ್ಥಳದಲ್ಲೇ ಸಾವಿಗೀಡಾಗಿವೆ. ರೈತ ಅಂದಾನಪ್ಪ ಎಂಬುವವರಿಗೆ ಸೇರಿದ ಮನೆ ಹಾಗೂ ದನದ ಕೊಟ್ಟಿಗೆಯಲ್ಲಿ ಮಳೆ ನೀರು ತುಂಬಾ ಅನಾಹುತ ಸೃಷ್ಟಿಸಿದೆ. ಕೊಟ್ಟಿಗೆಯಲ್ಲಿ ಆರು ಅಡಿಗಳಷ್ಟು ನೀರು ನಿಂತಿದೆ. ಹಾಗೆ ಮನೆಯಲ್ಲಿಟ್ಟಿದ್ದ ಸುಮಾರು 30 ಮೂಟೆ ಇಂಡಿ, ಬೂಸ ಮಳೆಗೆ ಸಂಪೂರ್ಣ ಹಾನಿಯಾಗಿದೆ.

ಕಷ್ಟಪಟ್ಟು ಸಾಲ ಮಾಡಿ ಜಾನುವಾರು ಸಾಕಿದ್ದೆವು. ನಮಗೆ ಇದೇ ಜೀವನ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ. ನಮ್ಮ ಬದುಕೇ ಮುಗ್ದೋಯ್ತು ಅನಿಸ್ತಿದೆ ಎಂದು ಆರ್.ಆರ್.ನಗರದಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ.

ಎಲ್ಲೆಲ್ಲಿ ಎಷ್ಟು ಮಳೆ...?

  • ಬಸವೇಶ್ವರನಗರ 97 ಮಿಮೀ
  • ಗಾಳಿ ಆಂಜನೇಯ ದೇವಸ್ಥಾನ 92 ಮಿಮೀ
  • ಜ್ಞಾನಭಾರತಿ 73 ಮಿಮೀ
  • ಹೆಗನಹಳ್ಳಿ 57.5 ಮಿಮೀ
  • ಮಾರುತಿ ಮಂದಿರ 64.5 ಮಿಮೀ
  • ಶಿವನಗರ 95.5 ಮಿಮೀ
  • ಹೆರೋಹಳ್ಳಿ 75 ಮಿಮೀ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com