ಎಸಿ ರೂಮ್ ನಲ್ಲಿ ಕುಳಿತು ಜನರ ಸಮಸ್ಯೆ ಪರಿಹರಿಸುವುದು ಅಸಾಧ್ಯ: ಸಿಎಂ ಬೊಮ್ಮಾಯಿ

ಜನಪ್ರತಿನಿಧಿಗಳು ಎಸಿ ಕೊಠಡಿಯಲ್ಲಿ ಕುಳಿತು ನಕ್ಷೆ ನೋಡಿ ಜನರ ಸಮಸ್ಯೆ ಪರಿಹರಿಸುತ್ತೇವೆನ್ನುವುದು ಅಸಾಧ್ಯ ಎಂದು ಸಿಎಂ ಬಸವರಾಜ ಬೊಮಾಯಿ ಹೇಳಿದ್ದಾರೆ.
ಶಿವನಹಳ್ಳಿ ಬಳಿ ನಿರ್ಮಿಸಲಾಗಿರುವ ಇಂಟಿಗ್ರೇಟೆಡ್ ರಸ್ತೆ ಮೇಲ್ಸೇತುವೆ ಲೋಕಾರ್ಪಣೆ
ಶಿವನಹಳ್ಳಿ ಬಳಿ ನಿರ್ಮಿಸಲಾಗಿರುವ ಇಂಟಿಗ್ರೇಟೆಡ್ ರಸ್ತೆ ಮೇಲ್ಸೇತುವೆ ಲೋಕಾರ್ಪಣೆ

ಬೆಂಗಳೂರು: ಜನಪ್ರತಿನಿಧಿಗಳು ಎಸಿ ಕೊಠಡಿಯಲ್ಲಿ ಕುಳಿತು ನಕ್ಷೆ ನೋಡಿ ಜನರ ಸಮಸ್ಯೆ ಪರಿಹರಿಸುತ್ತೇವೆನ್ನುವುದು ಅಸಾಧ್ಯ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದು ಬೆಂಗಳೂರಿನ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಶಿವನಹಳ್ಳಿ ಬಳಿ ನಿರ್ಮಿಸಲಾಗಿರುವ ಇಂಟಿಗ್ರೇಟೆಡ್ ರಸ್ತೆ ಮೇಲ್ಸೇತುವೆ ಲೋಕಾರ್ಪಣೆಯನ್ನು ಗೋಪೂಜೆ ಮಾಡುವ ಮೂಲಕ ನೆರವೇರಿಸಿದರು.

ವೇದಿಕೆ ಕಾರ್ಯಕ್ರಮದಲ್ಲಿ ಬೆಂಗಳೂರಿನಲ್ಲಾದ ಮಳೆ ಅನಾಹುತ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಸಿಎಂ, ಮಳೆ ಅನಾಹುತ ಬಗ್ಗೆ ನಾನೇ ಖುದ್ದು ಗಮನಿಸುತ್ತಿದ್ದು, ಬಿಬಿಎಂಪಿ ಕಮಿಷನರ್ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದಷ್ಟು ಬೇಗ ನೀರನ್ನು ಹೊರಗೆ ತೆಗೆದು ವಾಹನ ಚಾಲನೆಗೆ ಸುಗಮ ಅವಕಾಶ ಮಾಡಿಕೊಡಲಾಗುವುದು. ಎಲ್ಲವನ್ನು ಪರಿವೀಕ್ಷಣೆ ಮಾಡಲಾಗುವುದು. ಕೆಲವು ಗಿಡಮರಗಳು ಬಿದ್ದು ವಾಹನಗಳು ಜಖಂ ಆಗಿವೆ. ಹಸುಗಳಿಗೆ ತೊಂದರೆಯಾಗಿವೆ. ಹಳೆ ಕಟ್ಟಡಗಳಿಗೆ ತೊಂದರೆಯಾಗಿವೆ. ವಿಳಂಭಮಾಡದೇ ಆದಷ್ಟು ಬೇಗ ಸರಿಪಡಿಸಲಾಗುವುದು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ನಾವು ಆಡಳಿತ ಮಾಡಬೇಕು. ಸಮಸ್ಯೆಗಳ ಬಗ್ಗೆ ಚರ್ಚೆ ಮಾಡೋದು ಸುಲಭ, ಆದರೆ ಸಮಸ್ಯೆ ಬಗೆಹರಿಸುವುದು ಪ್ರಮುಖ ಆಗುತ್ತದೆ. ಸರ್ಕಾರ ಜನರ ಬಳಿಯೇ ಹೋಗಿ ಅವರ ಸಮಸ್ಯೆ ಕೇಳಬೇಕು. ಎಲ್ಲೋ ಎಸಿ ರೂಮ್ ನಲ್ಲಿ ಕೂತ್ಕೊಂಡು, ನಕ್ಷೆ ನೋಡಿ ಜನರ ಸಮಸ್ಯೆ ಬಗೆಬರಿಸುತ್ತೇನೆ ಎಂದರೆ ಅದು ಆಗುವುದಿಲ್ಲ. ನನಗೆ ಹಲವಾರು ಕಲ್ಪನೆ ಇದೆ. ಯೋಜನೆ ಬದ್ದ‌ ಬೆಂಗಳೂರನ್ನು ನಾವು ನಿರ್ಮಿಸುತ್ತೇವೆ. ಎಲ್ಲಿ ಒಳ್ಳೆಯದು ಇದೆಯೋ ಅದನ್ನು ನೋಡಿ, ಇಲ್ಲಿ ಮಾಡುತ್ತೇವೆ ಎಂದರು.

ನಿನ್ನೆಯ ಮಳೆ ನೋಡಿದ್ದೇವೆ. ರಾತ್ರಿಯೇ ಮುಖ್ಯ ಆಯುಕ್ತರಿಗೆ ಸೂಚನೆ ನೀಡಲಾಗಿದೆ. ಪರಿಹಾರ ಕೆಲಸಗಳನ್ನು ರಾತ್ರಿಯಿಂದಲೇ ಅಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ರಾಜಕಾಲುವೆ, ಕೆರೆ, ತಗ್ಗುಪ್ರದೇಶದ ವಸತಿ ನಿವೇಶನಗಳ ಬಗ್ಗೆ ಕ್ರಮ ಕೈಗೊಂಡು ನಗರವನ್ನು ಸುರಕ್ಷಿತ, ಹಸಿರು ನಗರ ಮಾಡಲು ಕ್ರಮಕೈಗೊಳ್ಳುತ್ತೇವೆ ಎಂದು‌ ಸಿಎಂ ಹೇಳಿದರು.

ಕಮಿಷನರ್ ಕೂಡ ಎಲ್ಲಾ ಡಿವಿಜನ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಪರಿಹಾರ ಕಾರ್ಯ ಮಾಡಲು ರಾತ್ರಿಯೇ ಸೂಚನೆ ನೀಡಿದ್ದೇನೆ. ಪರಿಹಾರ ಕ್ರಮಗಳು ಕೂಡ ನಡೆಯುತ್ತಿವೆ. ಸಚಿವ ಸೋಮಣ್ಣ ಹೇಳಿದಂತೆ ಹಿಂದೆ ಸಾಕಷ್ಟು ಸಮಸ್ಯೆ ಆಗಿತ್ತು. ಇನ್ನೂ ಪರಿಹಾರ ಕ್ರಮಗಳು ಮುಂದುವರಿದಿವೆ ಎಂದು ಸಿಎಂ ತಿಳಿಸಿದರು.

ಬೊಮ್ಮಾಯಿಯಿಂದ ಆಡಳಿತ‌ ಯಂತ್ರಕ್ಕೆ ಹೊಸ ಸ್ಪರ್ಶ
ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಎರಡೇ ತಿಂಗಳೊಳಗೆ ಆಡಳಿತಯಂತ್ರಕ್ಕೆ ಹೊಸ ಸ್ಪರ್ಶ ನೀಡಿದ್ದಾರೆ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಅವರು ಹೇಳಿದ್ದಾರೆ.

ರಾಜಾಜಿ ನಗರದ ಶಿವನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಸೇತುವೆ ಉದ್ಘಾಟನೆ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಸುರೇಶ್ ಕುಮಾರ್, ಸಿಎಂ ಬೊಮ್ಮಾಯಿ ಎಲ್ಲರಿಗೂ ಭರವಸೆ ಸಿಗುವ ನಿಟ್ಟಿನಲ್ಲಿ ಆಡಳಿತ ಕೊಡುತ್ತಿದ್ದಾರೆ. ಅವರು ರಾಜ್ಯವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲಿ ಬೊಮ್ಮಾಯಿ ಅವರ ಜೊತೆ ನಾವೆಲ್ಲ ಇದ್ದು ಅವರ ಕೈಯನ್ನು ಬಲಪಡಿಸುತ್ತೇವೆ. ಎಲ್ಲರು ಒಟ್ಟಾಗಿ ಈ ರಾಜ್ಯವನ್ನು ಸುಂದರ ನಾಡಾಗಿ ಮಾಡೋಣ ಎಂದರು.

ಸಾಕಷ್ಟು ಸವಾಲು ನಡುವೆ ಮೇಲುಸೇತುವೆ ನಿರ್ಮಾಣ ಆಗಿದೆ. ಈ ಮೊದಲು ಇಲ್ಲಿ ಅಂಡರ್ ಪಾಸ್ ಮಾಡಲು ಯೋಜನೆ ಮಾಡಿದ್ದರು. ನಂತರ ಅದು ಬೇಡ, ಮೇಲುಸೇತುವೆ ಮಾಡುವಂತೆ ಕೆಲವರು ಮನವಿ ಮಾಡಿದ್ದರು. ಅದರಂತೆ ಅಂದಿನ ನಗರಾಭಿವೃದ್ಧಿ ಸಚಿವರ ಒಪ್ಪಿಗೆ ಪಡೆದು, ಮೇಲು ಸೇತುವೆ ಕಾಮಗಾರಿ ಆರಂಭಿಸಲಾಯಿತು ಎಂದು ಸುರೇಶ್ ಕುಮಾರ್ ಹೇಳಿದರು.

ಪ್ರಸಕ್ತ ಆಡಳಿತಾರೂಢ ಬಿಜೆಪಿ ಸರ್ಕಾರದಲ್ಲಿ ರಾಜಾಜಿ ನಗರದ ಶಿವನಗರದಲ್ಲಿ ಸುಮಾರು 71 ಕೋಟಿ ವೆಚ್ಚದಲ್ಲಿ ನಿರ್ಮಾಣ ಗೊಂಡಿರುವ ಇಂಟಿಗ್ರೇಟೆಡ್ 650 ಮೀಟರ್ ಉದ್ದದ ಮೇಲುಸೇತುವೆ ಇದಾಗಿದ್ದು, ಸಿದ್ದರಾಮಯ್ಯ ನೇತೃತ್ವದ ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ ಮೇಲ್ಸೇತುವೆಗೆ ಅನುದಾನ ಬಿಡುಗಡೆಯಾಗಿತ್ತು.

ಅನುದಾನ ಬಿಡುಗಡೆ ಬಗ್ಗೆ ಬ್ಯಾನರ್ ನಲ್ಲಿ ನಮೂದಿಸಿ ಸಿದ್ದರಾಮಯ್ಯ, ಡಿಕೆಶಿ, ಬಸವರಾಜ್ ಬೊಮ್ಮಾಯಿ, ಸುರೇಶ್ ಕುಮಾರ್ ಇರುವ ಭಾವಚಿತ್ರ ‌ಹಾಕಿರುವುದು ಎದ್ದುಕಾಣುತ್ತಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com