ಮಳೆ ಪರಿಸ್ಥಿತಿ ನಿರ್ವಹಣೆಗೆ 63 ಉಪವಿಭಾಗಗಳಲ್ಲಿ ನಿಯಂತ್ರಣ ಕೊಠಡಿ ಸ್ಥಾಪನೆ: ಬಿಬಿಎಂಪಿ
ಸಿಲಿಕಾನ್ ಸಿಟಿಯಲ್ಲಿ ಮಳೆ ಪರಿಸ್ಥಿತಿ ನಿರ್ವಹಣೆಗೆ 63 ಉಪ ವಿಭಾಗಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಾತ್ಕಾಲಿಕ ನಿಯಂತ್ರಣ ಕೊಠಡಿ ತೆರೆದಿದೆ...
Published: 06th October 2021 10:45 AM | Last Updated: 06th October 2021 10:45 AM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮಳೆ ಪರಿಸ್ಥಿತಿ ನಿರ್ವಹಣೆಗೆ 63 ಉಪ ವಿಭಾಗಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ತಾತ್ಕಾಲಿಕ ನಿಯಂತ್ರಣ ಕೊಠಡಿ ತೆರೆದಿದೆ.
ಈ ಕುರಿತು ಮಾಹಿತಿ ನೀಡಿರುವ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಮಳೆಗಾಲ ನಿರ್ವಹಣೆಗಾಗಿ ಪಾಲಿಕೆ 63 ಉಪವಿಭಾಗಗಳಲ್ಲಿ ತಾತ್ಕಾಲಿಕ ನಿಯಂತ್ರಣ ಕೊಠಡಿ ತೆರೆಯಲಾಗಿದೆ. ಅಕ್ಟೋಬರ್ ಅಂತ್ಯದವರೆಗೂ ಈ ನಿಯಂತ್ರಣ ಕೊಠಡಿಗಳು ಕಾರ್ಯನಿರ್ವಹಿಸಲಿವೆ ಎಂದು ಹೇಳಿದ್ದಾರೆ.
ತಗ್ಗುಪ್ರದೇಶಗಳಲ್ಲಿ ಶಾಶ್ವತ ಪರಿಹಾರಕ್ಕಾಗಿ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗುವುದು. ಮಳೆಗಾಲದಲ್ಲಿ ಪ್ರವಾಹ ಉಂಟಾಗುವ 539 ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸ್ಥಳಗಳ ಸಂಖ್ಯೆಯನ್ನು 185ಕ್ಕೆ ಇಳಿಸಲಾಗಿದೆ. ಈ ಪ್ರದೇಶಗಳಲ್ಲಿ ತಾತ್ಕಾಲಿಕ ತಡೆಗೋಡೆ ನಿರ್ಮಿಸಿ ನೀರು ನುಗ್ಗದಂತೆ ಕ್ರಮ ವಹಿಸಲಾಗುತ್ತದೆ ಎಂದು ತಿಳಿಸಿದರು.
ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯಗಳ ವ್ಯಾಪ್ತಿಯಲ್ಲಿ ಹಲವು ಕಡೆ ರಾಜಕಾಲುವೆಗಳಿಗೆ ತಗ್ಗು ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಿಸಬೇಕು. 750 ರಾಜಕಾಲುವೆ ಪೈಕಿ ಕಳೆದೊಂದು ದಶಕದಿಂದ ಅರ್ಧದಷ್ಟು ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಿಸಲಾಗಿದೆ. ಉಳಿದ ರಾಜಕಾಲುವೆಗಳಿಗೆ ತಡೆಗೋಡೆ ನಿರ್ಮಾಣಕ್ಕೆ ರೂಪುಪೇಷೆ ಸಿದ್ಧಪಡಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಪ್ರದೇಶಗಳಲ್ಲಿ ಸಮಸ್ಯೆ ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ನವರಾತ್ರಿ ಪ್ರಯುಕ್ತ ಸಾರ್ವಜನಿಕ ಸ್ಥಳಗಳಲ್ಲಿ ದುರ್ಗಾ ಮೂರ್ತಿ ಪ್ರತಿಷ್ಠಾಪನೆ ಸಂಬಂಧ ಆಯಾಯ ಪೊಲೀಸ್ ಠಾಣೆಗಳಲ್ಲಿ ಅನುಮತಿ ಪಡೆಯಬೇಕು. ಆ ಸ್ಥಳಗಳ ಸ್ವಚ್ಛತೆ ಹಾಗೂ ಕೋವಿಡ್ ನಿಯಮಾವಳಿ ಪಾಲನೆ ಬಗ್ಗೆ ಪಾಲಿಕೆಯ ಆರೋಗ್ಯ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆಂದು ತಿಳಿಸಿದ್ದಾರೆ.