
ಸಚಿವ ಸುಧಾಕರ್
ಬೆಂಗಳೂರು: ಆಧುನಿಕ ಭಾರತೀಯ ಮಹಿಳೆಯರು ಮದುವೆ ಹಾಗೂ ಮಕ್ಕಳನ್ನು ಬಯಸುವುದಿಲ್ಲ ಎಂದು ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.
ವಿಶ್ವ ಮಾನಸಿಕ ಆರೋಗ್ಯ ದಿನದ ಹಿನ್ನೆಲೆ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವೈಜ್ಞಾನಿಕ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ನಲ್ಲಿ ನಡೆದ ಸಭಾರಂಭದಲ್ಲಿ ಮಾತನಾಡಿದ ಅವರು, ಆಧುನಿಕ ಭಾರತೀಯ ಮಹಿಳೆಯರು ಈಗ ಸಾಮಾನ್ಯವಾಗಿ ಒಬ್ಬಂಟಿಯಾಗಿರಲು ಇಷ್ಟ ಪಡುತ್ತಾರೆ. ಒಂದು ವೇಳೆ ಮದುವೆಯಾದರೂ ಕೂಡಾ ಮಗುವಿಗೆ ಜನ್ಮ ನೀಡಲು ಇಚ್ಛಿಸಲ್ಲ. ಬಾಡಿಗೆ ತಾಯಿಯ ಮೂಲಕ ಮಗುವನ್ನು ಪಡೆಯುತ್ತಾರೆ ಎಂದು ಹೇಳಿದ್ದಾರೆ.
ನಾನು ಇಂದು ಈ ಮಾತನ್ನು ಹೇಳಲು ಬೇಸರ ಪಡುತ್ತೇನೆ, ನನ್ನನ್ನು ಕ್ಷಮಿಸಿ, ಈಗ ಹಲವಾರು ಆಧುನಿಕ ಭಾರತೀಯ ಮಹಿಳೆಯರು ಒಬ್ಬಂಟಿಯಾಗಿಯೇ ಇರಲು ಇಷ್ಟ ಪಡುತ್ತಾರೆ. ಒಂದು ವೇಳೆ ಮದುವೆಯಾದರೂ ಕೂಡಾ ಮಗುವಿಗೆ ಜನ್ಮ ನೀಡಲು ಬಯಸುವುದಿಲ್ಲ. ಅವರಿಗೆ ಬಾಡಿಗೆ ತಾಯಿ ಬೇಕು, ಇಂದಿನ ಆಧುನಿಕ ಮಹಿಳೆಯರು ಹೆಚ್ಚಾಗಿ ಈ ರೀತಿಯ ಮನೋಭಾವವನ್ನು ಹೊಂದಿದ್ದಾರೆ. ಇದು ಪಾಶ್ಚತ್ಯ ಸಂಸ್ಕೃತಿಯ ಪಾಲನೆ. ಈ ಬದಲಾವಣೆ ಒಳ್ಳೆಯದಲ್ಲ. ಹಾಗೆಯೇ ಈಗಿನ ಜನರು ತಮ್ಮ ಪೋಷಕರು ತಮ್ಮ ಜೊತೆ ಜೀವಿಸಬೇಕು ಎಂಬುವುದನ್ನು ಕೂಡಾ ಒಪ್ಪುವುದಿಲ್ಲ ಎಂದು ತಿಳಿಸಿದ್ದಾರೆ.
ಈ ಬದಲಾವಣೆ ಉತ್ತಮವಲ್ಲ ಆದರೂ ನಾವು ಇಂದು ಪಾಶ್ಚತ್ಯ ಸಂಸ್ಕೃತಿಯೆಡೆ ವಾಲುತ್ತಿದ್ದೇವೆ. ನಮ್ಮ ಪೋಷಕರು ನಮ್ಮ ಜೊತೆ ಜೀವಿಸುವುದು ನಮ್ಮ ಈಗಿನ ಯುವ ಜನರಿಗೆ ಬೇಡ. ಹಾಗಿರುವಾಗ ನಮ್ಮ ತಾತ, ಅಜ್ಜಿ ನಮ್ಮ ಜೊತೆ ಇರುವ ವಿಚಾರವನ್ನೇ ಮರೆತುಬಿಡಿ ಎಂದರು.
ಇದೇ ವೇಳೆ ದೇಶದಲ್ಲಿ ಇರುವ ಮಾನಸಿಕ ಆರೋಗ್ಯದ ಬಗ್ಗೆ ಮಾತನಾಡಿದ ಅವರು, ನಮ್ಮ ದೇಶದ ಪ್ರತಿ ಏಳನೇ ಭಾರತೀಯನಿಗೆ ಕೆಲವೊಂದು ಮಾನಸಿಕ ಸಮಸ್ಯೆಗಳು ಇದೆ. ಆ ಮಾನಸಿಕ ಸಮಸ್ಯೆಗಳು ಗಂಭೀರ ಮಟ್ಟದ್ದು ಆಗಿರಬಹುದು ಅಥವಾ ಸಣ್ಣ ಮಟ್ಟದು ಆಗಿರಬಹುದು ಎಂದು ಹೇಳಿದರು.
ಒತ್ತಡವನ್ನು ನಿರ್ವಹಣೆ ಮಾಡುವುದು ಒಂದು ಕಲೆ. ಈ ಬಗ್ಗೆ ಭಾರತೀಯರು ಕಲಿಯಬೇಕಾಗಿಲ್ಲ. ಆದರೆ ಒತ್ತಡವನ್ನು ಹೇಗೆ ನಿರ್ವಹಣೆ ಮಾಡುವುದು ಎಂದು ಇಡೀ ವಿಶ್ವಕ್ಕೆ ಭಾರತ ಭೋದಿಸಬೇಕು ಎಂದು ತಿಳಿಸಿದರು.
ಕೊರೋನಾ ವೈರಸ್ ಸೋಂಕು ಹಾಗೂ ಮಾನಸಿಕ ಆರೋಗ್ಯ ಕುರಿತು ಮಾತನಾಡಿ, ಕುಟುಂಬಸ್ಥರು ತಮ್ಮ ಪ್ರೀತಿಯ ಕುಟುಂಬ ಸದಸ್ಯರ ಮೃತ ದೇಹವನ್ನು ಮುಟ್ಟುವ ಅವಕಾಶವನ್ನು ಕೂಡಾ ಹೊಂದಿರುವುದಿಲ್ಲ. ಇದರಿಂದಾಗಿ ಭಾರತದಲ್ಲಿ ಹಲವಾರು ಮಂದಿಗೆ ಮಾನಸಿಕ ಆಘಾತ ಅಥವಾ ಸಂಕಟ ಉಂಟಾಗಿದೆ. ಕೊರೋನಾ ವೈರಸ್ ಸೋಂಕು ಸಂದರ್ಭದಲ್ಲಿ ಸರ್ಕಾರವು ಕೋವಿಡ್ ರೋಗಿಗಳ ಮಾನಸಿಕ ಆರೋಗ್ಯದ ಬಗ್ಗೆಯೂ ಒತ್ತು ನೀಡಿದೆ. ನಾವು ರೋಗಿಗಳೊಂದಿಗೆ ಸಮಾಲೋಚನೆ ನಡೆಸಿದ್ದೇವೆ. ಈವರೆಗೆ ನಾವು ಸುಮಾರು 24 ಲಕ್ಷ ಕೋವಿಡ್ ಸೋಂಕಿತರ ಸಮಾಲೋಚನೆ ಮಾಡಿದ್ದೇವೆ. ಆದರೆ ಈ ರೀತಿಯ ಕಾರ್ಯವನ್ನು ಭೇರೆ ಯಾವುದೇ ರಾಜ್ಯಗಳು ಮಾಡಿದೆಯೇ ಎಂದು ನನಗೆ ತಿಳಿದಿಲ್ಲ ಎಂದರು.
ಇದೇ ವೇಳೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವೀಯಾ ಅವರಿಗೆ ಸುಧಾಕರ್ ಅವರು ಕೃತಜ್ಞತೆ ಸಲ್ಲಿಸಿದರು.
ಕರ್ನಾಟಕ ರಾಜ್ಯಕ್ಕೆ ಸೆಪ್ಟೆಂಬರ್‌ವರೆಗೆ ಪ್ರತಿ ತಿಂಗಳು 1.5 ಕೋಟಿ ಕೋವಿಡ್ ಲಸಿಕೆಯನ್ನು ನೀಡಿದ ನಿಮಗೆ ಕೃತಜ್ಞತೆ. ಇದರಿಂದಾಗಿ ರಾಜ್ಯದಲ್ಲಿ ಕೋವಿಡ್ ವಿರುದ್ಧ ಲಸಿಕೆ ನೀಡುವ ಕಾರ್ಯವನ್ನು ಹೆಚ್ಚಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು. ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವನ್ನು ಕೂಡಾ ಶ್ಲಾಘಿಸಿದರು.