ಬೆಂಗಳೂರಿನಲ್ಲಿ ತಡರಾತ್ರಿ ರಸ್ತೆ ಜಗಳ; ಬೈಕ್ ಸವಾರನ ಮೇಲೆ ಗುಂಡು ಹಾರಿಸಿದ ಆಡಿ ಕಾರು ಚಾಲಕ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ಗುಂಡಿನ ಸದ್ದು ಕೇಳಿಬಂದಿದ್ದು, ಕಾರು ಚಾಲಕನೊಬ್ಬ ಬೈಕ್ ಸವಾರನ ಮೇಲೆ ಶೂಟೌಟ್ ಮಾಡಿದ್ದಾನೆ.
Published: 14th October 2021 01:58 PM | Last Updated: 15th October 2021 02:07 PM | A+A A-

ಸಾಂದರ್ಭಿಕ ಚಿತ್ರ
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಿನ್ನೆ ತಡರಾತ್ರಿ ಗುಂಡಿನ ಸದ್ದು ಕೇಳಿಬಂದಿದ್ದು, ಕಾರು ಚಾಲಕನೊಬ್ಬ ಬೈಕ್ ಸವಾರನ ಮೇಲೆ ಶೂಟೌಟ್ ಮಾಡಿದ್ದಾನೆ.
ಹೌದು.. ಬೆಂಗಳೂರಿನ ಎಂಎಸ್ ರಾಮಯ್ಯ ಆಸ್ಪತ್ರೆಯ ಹಿಂಬದಿ ಗೇಟ್ ಬಳಿ ನಿನ್ನೆ ರಾತ್ರಿ ಸುಮಾರು 9.25ರಲ್ಲಿ ಈ ಘಟನೆ ನಡೆದಿದ್ದು, ಬೈಕ್ ಸವಾರನ ಮೇಲೆ ಆಡಿ ಕಾರು ಚಾಲಕ 2 ಸುತ್ತು ಗುಂಡು ಹಾರಿಸಿದ್ದಾನೆ. ಅದೃಷ್ಟವಶಾತ್ ಬೈಕ್ ಚಾಲಕ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ರಸ್ತೆಯಲ್ಲಿ ಹೋಗುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಆಡಿಕಾರು ಚಾಲಕ ಹಾರ್ನ್ ಮಾಡಿದ್ದಾನೆ. ಈ ವೇಳೆ ಬೈಕ್ ಚಾಲಕ ದಾರಿ ಕೊಡಲಿಲ್ಲ ಎಂದು ಆಕ್ರೋಶಗೊಂಡು ಕೂಡಲೇ ಗನ್ ತೆಗೆದು ಚಲಿಸುತ್ತಿದ್ದ ಕಾರಿನಿಂದಲೇ ಆತನ ಮೇಲೆ ಶೂಟ್ ಮಾಡಿದ್ದಾನೆ. ಈ ವೇಳೆ ಬೈಕ್ ಚಾಲಕ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸಂತ್ರಸ್ಥ ಬೈಕ್ ಚಾಲಕನನ್ನು ಅನಿಲ್ ಎಂದು ಗುರುತಿಸಲಾಗಿದೆ. ಆತ ವೃತ್ತಿಯಲ್ಲಿ ಆ್ಯಂಬುಲೆನ್ಸ್ ಚಾಲಕನಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗುಂಡು ಹಾರಿಸಿದ ಆಡಿ ಚಾಲಕನ ಪತ್ತೆಗಾಗಿ ಪೊಲೀಸರು ಘಟನಾ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.