ರಾಜಧಾನಿಯ ರಸ್ತೆಗಳು ಗುಂಡಿಮಯ; ಜಾಗ್ರತೆಯಿಂದ ವಾಹನ ಚಲಾಯಿಸಿ: ಸವಾರರಿಗೆ ಬಿಬಿಎಂಪಿ ಮನವಿ

ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ರಸ್ತೆಗಳು ಗುಂಡಿಮಯಗೊಂಡಿದ್ದು, ಜೀವಭಯದಿಂದಲೇ ಸವಾರರು ರಸ್ತೆಗಳಲ್ಲಿ ವಾಹನ ಚಲಾಯಿಸುವಂತಾಗಿದೆ.
ಹೆಣ್ಣೂರು ರಸ್ತೆಯಲ್ಲಿರುವ ಗುಂಡಿ
ಹೆಣ್ಣೂರು ರಸ್ತೆಯಲ್ಲಿರುವ ಗುಂಡಿ

ಬೆಂಗಳೂರು: ಭಾರೀ ಮಳೆಯಿಂದಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ರಸ್ತೆಗಳು ಗುಂಡಿಮಯಗೊಂಡಿದ್ದು, ಜೀವಭಯದಿಂದಲೇ ಸವಾರರು ರಸ್ತೆಗಳಲ್ಲಿ ವಾಹನ ಚಲಾಯಿಸುವಂತಾಗಿದೆ. 

ಈ ನಡುವೆ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವುದೂ ಕೂಡ ಅಧಿಕಾರಿಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ. 

ರಸ್ತೆಗಳ ಗುಂಡಿಗೆ ಹವಾಮಾನ ವೈಪರೀತ್ಯ ಕಾರಣವಾಗಿದ್ದು, ಒಂದೆಡೆ ಗುಂಡಿ ಮುಚ್ಚುವ ಕೆಲಸಗಳು ನಡೆಸುತ್ತಿದ್ದು, ಮತ್ತೊಂದೆಡೆ ಮಳೆ ಸುರಿಯುತ್ತಿರುವುದರಿಂದ ಕೆಲಸಗಳು ವಿಫಲವಾಗುವಂತೆ ಮಾಡುತ್ತಿದೆ ಎಂದು ಬಿಬಿಎಂಪಿ ಇಂಜಿನಿಯರ್ ಗಳು ಹೇಳಿದ್ದಾರೆ. 

ಗುಂಡಿ ಮುಚ್ಚಲು ಜಲ್ಲಿಕಲ್ಲುಗಳನ್ನು ಹಾಕುತ್ತಿದ್ದೇವೆ ಆದರೆ, ಮಳೆ ಎಡೆಬಿಡದೆ ಸುರಿಯುತ್ತಿರುವುದು ಮತ್ತೆ ಮತ್ತೆ ಗುಂಡಿ ಬೀಳುವಂತೆ ಮಾಡುತ್ತಿದೆ ಎಂದು ಬಿಬಿಎಂಪಿ ಪಶ್ಚಿಮ ವಲಯದ ಎಂಜಿನಿಯರ್ ಹೇಳಿದ್ದಾರೆ. 

ಜಲ್ಲಿಕಲ್ಲುಗಳ ಕೊರತೆ
ರಸ್ತೆಗಳ ಕಾಮಗಾರಿಗಾಗಿ ಬಹುತೇಕ ಜಲ್ಲಿಕಲ್ಲುಗಳನ್ನು ಗುತ್ತಿಗೆದಾರರು ಬಳಕೆ ಮಾಡಿಕೊಳ್ಳುತ್ತಿರುವುದಿಂದ ಗುಂಡಿಗಳ ಮುಚ್ಚಲು ಜಲ್ಲಿಕಲ್ಲುಗಳ ಕೊರತೆ ಎದುರಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ನಗರದ ರಸ್ತೆಗಳ ಗುಂಡಿ ಮುಚ್ಚಲು 60 ಲೋಡ್ ಜಲ್ಲಿಕಲ್ಲುಗಳ ಅಗತ್ಯವಿದೆ. ಆದರೆ, ಪಾಲಿಕೆ ಎಂಜಿನಿಯರ್ ಗಳಿಗೆ ಅಗತ್ಯವಿರುವಷ್ಟು ಪ್ರಮಾಣದ ಜಲ್ಲಿಕಲ್ಲುಗಳು ಸಿಗುತ್ತಿಲ್ಲ. ಹೀಗಾಗಿ ಗುಂಡಿಗಳನ್ನು ಮುಚ್ಚಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. 

ಕೆಲ ರಸ್ತೆಗಳಲ್ಲಿ ವೈಟ್ ಟಾಪಿಂಗ್ ಮಾಡಲಾಗಿದೆ. ಆದರೆ, ಇನ್ನು ಕೆಲ ಡಾಂಬರು ಹಾಕಲಾಗಿದ್ದು, ಮಳೆ ಸತತವಾಗಿ ಬರುತ್ತಿರುವುದಿಂದ ಈ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಡಾಂಬರು ಹಾಕುತ್ತಿದ್ದಂತೆಯೇ ಮಳೆ ಬರುತ್ತಿದೆ. ಇದರಿಂದ ಎಲ್ಲವೂ ಕೊಚ್ಚಿ ಹೋಗುತ್ತಿದೆ. ಬಳಿಕ ಗುಂಡಿಗಳು ಬೀಳುತ್ತಿವೆ. ಈ ನಡುವೆ ಬಿಡಬ್ಲ್ಯೂಎಸ್ಎಸ್'ಬಿ ಕೂಡ ತನ್ನ ಕೆಲಸವನ್ನು ಆರಂಭಿಸಿದ್ದು, ಇದೂ ಕೂಡ ನಮ್ಮ ಕೆಲ ತಡವಾಗುವಂತೆ ಮಾಡುತ್ತಿದೆ ಎಂದು ಪೂರ್ವ ವಲಯದ ಬಿಬಿಎಂಪಿ ಎಂಜಿನಿಯರ್ ಹೇಳಿದ್ದಾರೆ. 

ಈ ನಡುವೆ ಪ್ಲಾನಿ ಬಿ ಅನುಷ್ಠಾನಗೊಳಿಸಲು ಬಿಬಿಎಂಪಿ ಮುಂದಾಗಿದ್ದು, ರಸ್ತೆ ಗುಂಡಿ ಬಿದ್ದಿರುವ ಸ್ಥಳಗಳಲ್ಲಿ, ಬೋರ್ಡ್, ಪೋಸ್ಟರ್ ಹಾಗೂ ಬ್ಯಾನರ್ ಗಳನ್ನು ಹಾಕಲು ನಿರ್ಧರಿಸಿದೆ. ಈಗಾಗಲೇ ರಿಂಗ್ ರಸ್ತೆ ಹೊರವರ್ತುಲ (ಹೊರಮಾವು-ಹೆಣ್ಣೂರು)ದ ರಸ್ತೆಯಲ್ಲಿ ಬೋರ್ಡ್ ಗಳನ್ನು ಹಾಕಿದ್ದು, ಗುಂಡಿಗಳಿರುವುದರಿಂದ ಜಾಗ್ರತೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಿಕೊಂಡಿದೆ. 

ರಸ್ತೆ ಗುಂಡಿ ಮುಚ್ಚಲು ಜಲ್ಲಿಕಲ್ಲುಗಳು ಅಗತ್ಯ ಪ್ರಮಾಣದಲ್ಲಿ ದೊರೆಯುವವರೆಗೂ ಹಾಗೂ ಸಂಪೂರ್ಣವಾಗಿ ಮಳೆ ನಿಲ್ಲುವವರೆಗೂ ಈ ಬ್ಯಾನರ್ ಗಳು ಸಹಾಯಕವಾಗಲಿದೆ ಎಂದು ಎಂಜಿನಿಯರ್ ಹೇಳಿದ್ದಾರೆ. 

ಬಿಬಿಎಂಪಿಯ ಈ ಬ್ಯಾನರ್ ಹಾಗೂ ಬೋರ್ಡ್ ಗಳನ್ನು ನೋಡುತ್ತಿರುವ ವಾಹನ ಸವಾರರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. 

ಈ ನಡುವೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರು, ಎಲ್ಲಾ ವಲಯದ ಬಿಬಿಎಂಪಿ ಎಂಜಿನಿಯರ್ ಹಾಗೂ ಮುಖ್ಯ ಎಂಜಿನಿಯರ್ ಗಳೊಂದಿಗೆ ವರ್ಚುವಲ್ ಮೂಲಕ ಸಭೆ ನಡೆಸಿದ್ದು, ಶೀಘ್ರಗತಿಯಲ್ಲಿ ರಸ್ತೆ ಗುಂಡಿಗಳ ಮುಚ್ಚುವಂತೆ ಸೂಚಿಸಿದ್ದಾರೆ. 

ಈ ನಡುವೆ ರಾಜರಾಜೇಶ್ವರಿ ನಗರ ಹಾಗೂ ಪಶ್ಚಿಮ ವಲಯದ ಎಂಜಿನಿಯರ್ ಗಳು ರಸ್ತೆ ಗುಂಡಿ ಇರುವ ಕಡೆ ಬ್ಯಾನರ್ ಹಾಗೂ ಬೋರ್ಡ್ ಗಳ ಹಾಕಲು ಮುಂದಾಗಿದ್ದಾರೆಂದು ತಿಳಿದುಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com