ರಾಜ್ಯದಲ್ಲಿ ಮೊದಲು 17 ವರ್ಷದ ಮಕ್ಕಳಿಗೆ ಕೋವಿಡ್ ಲಸಿಕೆ ನೀಡಿ: ತಾಂತ್ರಿಕ ಸಲಹಾ ಸಮಿತಿ 

ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ ಮೊದಲಿಗೆ, 16-17 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಮಕ್ಕಳಿಗಾಗಿ ಸಿದ್ಧಪಡಿಸಲಾಗಿರುವ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕ ಬಳಿಕ ಮೊದಲಿಗೆ, 16-17 ವರ್ಷದ ಮಕ್ಕಳಿಗೆ ಲಸಿಕೆ ಹಾಕುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. 

ಮಹಾಮಾರಿ ಕೊರೋನಾ ವಿರುದ್ಧ ಹೋರಾಡಲು ಲಸಿಕೆ ಅತ್ಯಂತ ಮುಖ್ಯವಾಗಿದ್ದು, ಮಕ್ಕಳಿಗಾಗಿ ಈಗಾಗಲೇ ಎರಡು ಲಸಿಕೆಗಳು ಸಿದ್ಧಗೊಂಡಿವೆ. ಝೈಡಸ್ ಕ್ಯಾಡಿಲಾದ ಝೈಕೋವ್ ಡಿ ಮತ್ತು ಕೋವ್ಯಾಕ್ಸಿನ್ ಲಸಿಕೆಗಳಿಗೆ ಶೀಘ್ರದಲ್ಲೇ ಅನುಮೋದನೆ ಸಿಗಲಿದೆ. 

ಲಸಿಕೆಗಳಿಗೆ ಭಾರತ ಸರ್ಕಾರ ಅನುಮೋದನೆ ನೀಡಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯದ ತಾಂತ್ರಿಕ ಸಲಹಾ ಸಮಿತಿಯು, ಯೋಜನೆಗಳನ್ನು ರೂಪಿಸಿ, ಸಿದ್ಧತೆ ನಡೆಸುವಂತೆ ಸಲಹೆ ನೀಡಿದೆ. ಅಲ್ಲದೆ, ಮೊದಲಿಗೆ 16-17 ವರ್ಷದ ಮಕ್ಕಳಿಗೆ ಲಸಿಕೆ ನೀಡುವಂತೆ ತಿಳಿಸಿದೆ. 

ಮಕ್ಕಳಲ್ಲಿ ಹೆಚ್ಚು ವಯಸ್ಸಿನ ಮಕ್ಕಳಾದ 16-17 ವರ್ಷದ ಮಕ್ಕಳಿಗೆ ಮೊದಲಿಗೆ ಲಸಿಕೆ ನೀಡುವಂತೆ, ನಂತರ ಚಿಕ್ಕ ಮಕ್ಕಳಿಗೆ ಲಸಿಕೆ ನಾವು ಶಿಫಾರಸು ಮಾಡುತ್ತೇವೆ. ಇದಷ್ಟೇ ಅಲ್ಲದೆ, ದೀರ್ಘಾವಧಿ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳಿಗೂ ಮೊದಲ ಆದ್ಯತೆ ನೀಡುವಂತೆ ತಿಳಿಸಿದ್ದೇವೆಂದು ತಾಂತ್ರಿಕ ಸಲಹಾ ಸಮಿತಿಯ ಸದಸ್ಯರಾಗಿರುವ ಜಯದೇವ ಆಸ್ಪತ್ರೆಯ ನಿರ್ದೇಶ ಡಾ.ಸಿಎನ್.ಮಂಜುನಾಥ್ ಅವರು ಹೇಳಿದ್ದಾರೆ. 

ಆರಂಭದಲ್ಲಿ ಲಭ್ಯವಿರುವ ಡೋಸ್‌ಗಳ ಸಂಖ್ಯೆಯು ಸೀಮಿತವಾಗಿರುವುದರಿಂದ, ವಯಸ್ಕರಿಗೆ ಲಸಿಕೆ ಹಾಕುವಾಗ ಅಳವಡಿಸಿಕೊಂಡ ಮಾದರಿಯನ್ನು ಅನುಸರಿಸುವುದು ಉತ್ತಮ ಎಂದು ತಾಂತ್ರಿಕ ಸಲಹಾ ಸಮಿತಿಯ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವ ವಯಸ್ಕರು, ಹಿರಿಯ ನಾಗರೀಕರನ್ನು ಗುರ್ತಿಸಿ ಮೊದಲು ಲಸಿಕೆ ನೀಡಿದಂತೆಯೇ ಮಕ್ಕಳಿಗೆ ಲಸಿಕೆ ನೀಡುವ ವೇಳೆಯ 17 ವರ್ಷದ ಮಕ್ಕಳು ಹಾಗೂ ದೀರ್ಘಾವಧಿ ಕಾಯಿಲೆಯಿಂದ ಬಳಲುತ್ತಿರುವ ಮಕ್ಕಳನ್ನು ಗುರ್ತಿಸಿ ಮೊದಲು ಲಸಿಕೆ ನೀಡಬೇಕು. ಲಸಿಕೆ ಪ್ರಕ್ರಿಯೆ ಆರಂಭಕ್ಕೂ ಮುನ್ನ ಮೈಕ್ರೊಪ್ಲಾನ್ ಮಾಡಿಕೊಳ್ಳುವ ಅಗತ್ಯವಿದೆ ಎಂದು ತಿಳಿಸಿದ್ದಾರೆ. 

ಈ ಯೋಜನೆಗೆ ಶಿಶುವೈದ್ಯರು, ನರ್ಸ್ ಗಳು, ಆಶಾ ಕಾರ್ಯಕರ್ತೆರನ್ನು ಸೇರ್ಪಡೆಗೊಳಿಸಿಕೊಳ್ಳಬೇಕು. ಲಸಿಕೆಗೆ ಅನುಮೋದನೆ ಹಾಗೂ ಮಾರ್ಗಸೂಚಿಗಳು ಬಂದ ಕೂಡಲೇ ಎಂಆರ್ ವ್ಯಾಕ್ಸಿನೇಷನ್ ಅಭಿಯಾನದ ವೇಳೆ ಅನುಭವ ಹೊಂದಿದ್ದವರನ್ನು ಈ ಲಸಿಕಾ ಅಭಿಯಾನದಲ್ಲಿ ಸೇರ್ಪಡೆಗೊಳಿಸಿಕೊಳ್ಳಬೇಕೆಂದು ಡಾ.ಮಂಜುನಾಥ್ ಅವರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com