ಬಿಬಿಎಂಪಿಯಿಂದ ಇಂದು ವಿಶೇಷ ಲಸಿಕಾ ಮೇಳ ಆಯೋಜನೆ
ಬಿಬಿಎಂಪಿ ವ್ಯಾಪ್ತಿಯಲ್ಲಿ ಅ.22 ರಂದು ಆಯೋಜಿಸಿರುವ ವಿಶೇಷ ಲಸಿಕಾ ಮೇಳದಲ್ಲಿ ಈ ವರೆಗೆ ಲಸಿಕೆ ಪಡೆಯದವರನ್ನು ಗುರ್ತಿಸಿ ಲಸಿಕೆ ನೀಡುವ ವ್ಯವಸ್ಥೆ ಮಾಡುವಂತೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಎಲ್ಲಾ ವಲಯಗಳ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
Published: 22nd October 2021 11:58 AM | Last Updated: 22nd October 2021 12:05 PM | A+A A-

ಸಂಗ್ರಹ ಚಿತ್ರ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅ.22 ರಂದು ಆಯೋಜಿಸಿರುವ ವಿಶೇಷ ಲಸಿಕಾ ಮೇಳದಲ್ಲಿ ಈ ವರೆಗೆ ಲಸಿಕೆ ಪಡೆಯದವರನ್ನು ಗುರ್ತಿಸಿ ಲಸಿಕೆ ನೀಡುವ ವ್ಯವಸ್ಥೆ ಮಾಡುವಂತೆ ವಿಶೇಷ ಆಯುಕ್ತ ತ್ರಿಲೋಕ್ ಚಂದ್ರ ಎಲ್ಲಾ ವಲಯಗಳ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗುರುವಾರ ವಿಶೇಷ ಲಸಿಕಾ ಮೇಳದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ನಗರದಲ್ಲಿ ಶೇ.86ರಷ್ಟು ಮೊದಲನೇ ಡೋಸ್, ಶೇ.52 ಎರಡನೇ ಡೋಸ್ ಲಸಿಕೆ ನೀಡಲಾಗಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಲಸಿಕಾ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲು ವಿಭಾಗ ಮಟ್ಟದಲ್ಲಿ ಲಸಿಕೆ ನೀಡಲು ಉದ್ದೇಶಿಸಲಾಗಿದೆ. ಈ ಸಂಬಂಧ ಲಸಿಕೆ ಪಡೆಯದವರನ್ನು ಗುರುತಿಸಿ ಎಲ್ಲರಿಗೂ ಲಸಿಕೆ ಹಾಕುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.
ಕೊಳಗೇರಿ ಪ್ರದೇಶಗಳ ನಿವಾಸಿಗಳು, ಬೀದಿಬದಿ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಟ್ಟಡ ನಿರ್ಮಾಣ ಮಾಡುವ ಸ್ಥಳ, ಮಾರುಕಟ್ಟೆ, ಬಸ್, ರಕೈಲು ನಿಲ್ದಾಣ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ಲಸಿಕಾ ಕೇಂದ್ರಗಳ ವ್ಯವಸ್ಥೆ ಮಾಡಿಕೊಂಡು ಲಸಿಕೆ ನೀಡಬೇಕು. ಜೊತೆಗೆ ವ್ಯಾಪಾರ ಸಂಘಟನಗಳು, ಹೋಟೆಲ್ ಅಸೋಸಿಯೇಷನ್, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳೊಂದಿಗೆ ಸಮನ್ವಯ ಸಾಧಿಸಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಬೇಕು ಎಂದರು.