ಯುವಜನತೆಯನ್ನು ತಂಬಾಕು ಬಳಕೆಯಿಂದ ರಕ್ಷಿಸಲು ಕಾನೂನು ಬಲಗೊಳಿಸುವ ತುರ್ತು ಅಗತ್ಯವಿದೆ: ತಜ್ಞರ  ಅಭಿಮತ

ತಂಬಾಕು ಉತ್ಪನ್ನಗಳ ಮಾರಾಟದ ಕಾನೂನಾತ್ಮಕ ವಯಸ್ಸಿನ ಮಿತಿ 21 ವರ್ಷಗಳಿಗೆ ಏರಿಕೆ, ತಂಬಾಕು ಜಾಹೀರಾತು ಮತ್ತು ಪ್ರಚಾರದ ಮೇಲೆ ಸಮಗ್ರ ನಿಷೇಧ ಮತ್ತು ಸಿಂಗಲ್-ಸ್ಟಿಕ್ ಸಿಗರೇಟ್ (ಸಿಗರೇಟ್‌/ಬೀಡಿಗಳ ಬಿಡಿ ಮಾರಾಟ) ಮೇಲೆ ನಿರ್ಬಂಧ- ಇವು ಮಕ್ಕಳು ಮತ್ತು ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ತಂಬಾಕು ಬಳಕೆಯ ಅಭ್ಯಾಸಕ್ಕೆ ಸಿಲುಕುವುದನ್ನು ತಡೆಯಲು ತಜ್ಞರು ನೀಡಿರುವ ಕೆಲ ಶಿಫಾರಸುಗಳಾಗಿವೆ. 
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು:  ತಂಬಾಕು ಉತ್ಪನ್ನಗಳ ಮಾರಾಟದ ಕಾನೂನಾತ್ಮಕ ವಯಸ್ಸಿನ ಮಿತಿ 21 ವರ್ಷಗಳಿಗೆ ಏರಿಕೆ, ತಂಬಾಕು ಜಾಹೀರಾತು ಮತ್ತು ಪ್ರಚಾರದ ಮೇಲೆ ಸಮಗ್ರ ನಿಷೇಧ ಮತ್ತು ಸಿಂಗಲ್-ಸ್ಟಿಕ್ ಸಿಗರೇಟ್ (ಸಿಗರೇಟ್‌/ಬೀಡಿಗಳ ಬಿಡಿ ಮಾರಾಟ) ಮೇಲೆ ನಿರ್ಬಂಧ- ಇವು ಮಕ್ಕಳು ಮತ್ತು ವಿದ್ಯಾರ್ಥಿಗಳು ಸಣ್ಣ ವಯಸ್ಸಿನಲ್ಲಿ ತಂಬಾಕು ಬಳಕೆಯ ಅಭ್ಯಾಸಕ್ಕೆ ಸಿಲುಕುವುದನ್ನು ತಡೆಯಲು ತಜ್ಞರು ನೀಡಿರುವ ಕೆಲ ಶಿಫಾರಸುಗಳಾಗಿವೆ. 

ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾ ಯುನಿವರ್ಸಿಟಿ 2021ರ ಅಕ್ಟೋಬರ್ 21 ರಂದು ಆಯೋಜಿಸಿದ್ದ ‘ಯುವಜನತೆಯನ್ನು ತಂಬಾಕುವಿನಿಂದ ರಕ್ಷಿಸಲು ಕಾನೂನು ರೂಪುರೇಷೆಗೆ ಬಲ’ ಕುರಿತ ಚರ್ಚೆಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಾಗತಿಕ ಮತ್ತು ಸ್ಥಳೀಯ ತಜ್ಞರು ಪಾಲ್ಗೊಂಡಿದ್ದರು. ಚರ್ಚೆಯಲ್ಲಿ ಪ್ರತಿಯೊಬ್ಬರೂ, ಯುವಜನತೆಯನ್ನು ತಂಬಾಕು ಸೇವನೆಯಿಂದ ರಕ್ಷಿಸಲು ಮತ್ತು ಆರೋಗ್ಯಪೂರ್ಣ ಮತ್ತು ತಂಬಾಕು ಮುಕ್ತ ಸ್ವಸ್ಥ್ಯ ಭಾರತಕ್ಕೆ ಕಾನೂನು ನೀತಿಗಳನ್ನು ಬಲಗೊಳಿಸುವ ತುರ್ತು ಅಗತ್ಯವನ್ನು ಪುನರುಚ್ಚರಿಸಿದರು.
ಚರ್ಚೆಯಲ್ಲಿ ಪಾಲ್ಗೊಂಡವರು ಸಿಗರೇಟ್ ಮತ್ತು ಇತರ ತಂಬಾಕು ಉತ್ಪನ್ನಗಳ (ವ್ಯಾಪಾರ ಮತ್ತು ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ಜಾಹೀರಾತು ಮತ್ತು ನಿಯಂತ್ರಣ) ಕಾಯ್ದೆಯ (COTPA 2003) ಲೋಪದೋಷಗಳು ಮತ್ತು ಇದರಿಂದ ತಂಬಾಕು ಸೇವನೆ ಕಡಿತಗೊಳಿಸಲು ಕಾಯ್ದೆಯ ಜಾರಿಗೆ ಇರುವ ಅಡ್ಡಿಗಳ ಕುರಿತು ಚರ್ಚಿಸಿದರು. 

ಭಾರತದಲ್ಲಿ ಎಲ್ಲಾ ಪ್ರಕಾರದ ತಂಬಾಕು ಉತ್ಪನ್ನಗಳ ಜಾಹೀರಾತು, ಮಾರಾಟ ಮತ್ತು ಲಭ್ಯತೆಯನ್ನು ನಿಯಂತ್ರಿಸಲು 2003ರಲ್ಲಿ ಈ ಕಾಯ್ದೆಯನ್ನು ಜಾರಿಗೆ ತರಲಾಗಿತ್ತು. ಈ ಕಾಯ್ದೆ ಸಿಗರೇಟ್‌ ಮತ್ತು ಇತರ ತಂಬಾಕು ಉತ್ಪನ್ನಗಳ ಜಾಹೀರಾತನ್ನು ನಿರ್ಬಂಧಿಸುತ್ತದೆ. ಆದರೆ ಮಾರಾಟದ ಸ್ಥಳದಲ್ಲಿ ಅದರ ಜಾಹೀರಾತನ್ನು ನಿಯಂತ್ರಿಸುವುದಿಲ್ಲ. ಬಿಡಿಯಾಗಿ ಸಿಗರೇಟ್‌ಗಳನ್ನು ಮಾರಾಟ ಮಾಡಲು ಅನುಮತಿ ಇದೆ. ಇದು ಅಪ್ರಾಪ್ತರಿಗೆ ಸುಲಭವಾಗಿ ಲಭ್ಯವಾಗುವುದರಿಂದ ಅವರು ತಂಬಾಕು ಉತ್ಪನ್ನಗಳನ್ನು ಸೇವನೆ ಮಾಡುವ ಸಾಧ್ಯತೆ ಹೆಚ್ಚಿರುತ್ತದೆ. 
 
ವೆಬಿನಾರ್‌ನಲ್ಲಿ ಪಾಲ್ಗೊಂಡ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಜ್ಯ ತಂಬಾಕು ನಿಯಂತ್ರಣ ಘಟಕ (ಎಸ್‌ಟಿಸಿಸಿ) ಉಪನಿರ್ದೇಶಕ ಡಾ.ಸೆಲ್ವರಾಜನ್, “ನಾಳೆಯ ಭವಿಷ್ಯವಾಗಿರುವ ಇಂದಿನ ಮಕ್ಕಳನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಮಕ್ಕಳು ತಂಬಾಕು ಉತ್ಪನ್ನ ಸೇವನೆಯ ಪ್ರಯೋಗಕ್ಕಿಳಿಯುವುದನ್ನು ತಡೆಯಲು, ಉತ್ಪನ್ನ ಬಳಕೆಯ ಕಾನೂನಾತ್ಮಕ ವಯಸ್ಸನ್ನು ಪ್ರಸ್ತುತ ಇರುವ 18ರಿಂದ 21 ವರ್ಷಗಳಿಗೆ ಹೆಚ್ಚಿಸಬೇಕು. ನಿಮ್ಮ ಮಕ್ಕಳು 21 ವರ್ಷ ವಯಸ್ಸು ತಲುಪಿದ ನಂತರ, ಅವರಿಗೆ ಕೆಟ್ಟದರಿಂದ ದೂರ ಇರುವ ತಾರ್ಕಿಕ ಯೋಚನೆ ಇರುತ್ತದೆ. ಅಲ್ಲದೆ, ಒಂದು ನಿರ್ದಿಷ್ಟ ವಯಸ್ಸನ್ನು ದಾಟಿದ ಮೇಲೆ ವಯಸ್ಕರು ಧೂಮಪಾನದ ಅಭ್ಯಾಸ ಆರಂಭಿಸುವ ಸಾಧ್ಯತೆಗಳು ಕಡಿಮೆ” ಎಂದು ಅಭಿಪ್ರಾಯಪಟ್ಟರು.

ಭಾರತದಾದ್ಯಂತ ತಂಬಾಕು ನಿಯಂತ್ರಣ ಸೇರಿ ಹಲವು ಸಾಮಾಜಿಕ ಮತ್ತು ಆರೋಗ್ಯ ಕ್ಷೇತ್ರದಲ್ಲಿ  ತೊಡಗಿಸಿಕೊಂಡಿರುವ ನವದೆಹಲಿ ಮೂಲದ ಸ್ವಯಂಸೇವಾ ಸಂಸ್ಥೆ, ಕನ್ಸ್ಯೂಮರ್‌ ವಾಯ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶೀಮ್‌ ಸನ್ಯಾಲ್, “ತಂಬಾಕು ಕಂಪನಿಗಳು ಕಾಯ್ದೆಯಲ್ಲಿನ ಲೋಪದೋಷಗಳ ಲಾಭ ಪಡೆದುಕೊಂಡು, ತಮ್ಮ ಮಾರುಕಟ್ಟೆ ತಂತ್ರಗಳ ಮೂಲಕ ಬಹುಬೇಗ ಪ್ರಭಾವಕ್ಕೊಳಗಾಗುವ ಯುವಜನತೆ ಮತ್ತು ಮಕ್ಕಳ ದಾರಿ ತಪ್ಪಿಸುತ್ತಿವೆ.  ಯುವ ಪೀಳಿಗೆಯ ಜೀವನವನ್ನು ಅಪಾಯಕ್ಕೆ ತಳ್ಳುವುದನ್ನು ತಡೆಯಲು ಕಾನೂನಿನಲ್ಲಿರುವ ಮಾರಾಟ ಸ್ಥಳದ ಜಾಹೀರಾತು ಮತ್ತು ಬಿಡಿ ತಂಬಾಕು ಮಾರಾಟದ ವಿನಾಯ್ತಿಗಳನ್ನು ಹಿಂಪಡೆದು, ಅದನ್ನು ಸದೃಢಗೊಳಿಸುವ ತುರ್ತು ಅಗತ್ಯವಿದೆ” ಎಂದು ಹೇಳಿದರು.

ಇತ್ತೀಚೆಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಮನ್ಸುಖ್ ಮಾಂಡವಿಯಾ ಬಿಡುಗಡೆಗೊಳಿಸಿದ ಜಾಗತಿಕ ಯುವ ತಂಬಾಕು ಸಮೀಕ್ಷಾ ವರದಿ ಪ್ರಕಾರ, 13-15 ವರ್ಷ ವಯಸ್ಸಿನ ಸುಮಾರು ಐದನೇ ಒಂದು ಭಾಗದಷ್ಟು ವಿದ್ಯಾರ್ಥಿಗಳು ಭಾರತದಲ್ಲಿ ತಂಬಾಕು ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ರಾಷ್ಟ್ರವ್ಯಾಪಿ ವಿದ್ಯಾರ್ಥಿಗಳ ಸಮೀಕ್ಷೆಯು ಶೇ 38ರಷ್ಟು ಸಿಗರೇಟುಗಳು, ಶೇ.47 ರಷ್ಟು ಬೀಡಿ ಮತ್ತು ಶೇ. 52 ರಷ್ಟು ಹೊಗೆರಹಿತ ತಂಬಾಕು ಬಳಕೆದಾರರು ತಮ್ಮ 10 ನೇ ಹುಟ್ಟುಹಬ್ಬಕ್ಕೂ ಮೊದಲೇ ಈ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದಾರೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಪ್ರಿಯಾಂಕ್‌ ಕನೋಂಗೋ, “21 ವರ್ಷದವರೆಗೆ ಮಕ್ಕಳನ್ನು ತಂಬಾಕು ಉತ್ಪನ್ನಗಳಿಂದ ದೂರವಿಟ್ಟರೆ ಅವರು ಜೀವನಪೂರ್ತಿ ತಂಬಾಕು-ಮುಕ್ತರಾಗಿರುವ ಸಾಧ್ಯತೆಗಳಿವೆ ಎಂಬುದು ವೈಜ್ಞಾನಿಕವಾಗಿ ದೃಢಪಟ್ಟಿದೆ.ಹಲವು ದೇಶಗಳು ಈಗಾಗಲೇ ಕನಿಷ್ಠ ತಂಬಾಕು ಬಳಕೆಯ ವಯಸ್ಸಿನ ಮಿತಿಯನ್ನು ಹೆಚ್ಚಿಸಿವೆ. ಕೋಟ್ಪಾ ಕಾಯ್ದೆಯನ್ನು ಇನ್ನಷ್ಟು ಬಲಗೊಳಿಸುವುದು, ಯುವಜನತೆಯನ್ನು ತಂಬಾಕು ಉತ್ಪನ್ನಗಳಿಂದ ದೂರವಿರಿಸುವ ನಿಟ್ಟಿನಲ್ಲಿ ಪ್ರಮುಖ ನಡೆಯಾಗಿದೆ” ಎಂದರು

ದೀರ್ಘಾವಧಿಯ ತಂಬಾಕು ಬಳಕೆದಾರರಾಗುವವರೆಲ್ಲರೂ ಹದಿಹರೆಯದಲ್ಲೇ ತಂಬಾಕು ಬಳಕೆ ಪ್ರಾರಂಭಿಸಿರುವ ಅಂಶ ಬೆಳಕಿಗೆ ಬಂದಿದೆ. ತಂಬಾಕು ಬಳಕೆಯ ಕಾನೂನಾತ್ಮಕ ವಯಸ್ಸನ್ನು 21 ಕ್ಕೆ ಹೆಚ್ಚಿಸುವುದರಿಂದ, ಯುವಜನರು ಧೂಮಪಾನ ಮಾಡುವುದನ್ನು ತಡೆಯಲು ಮತ್ತು ಸಾವು, ರೋಗ ಮತ್ತು ಆರೋಗ್ಯ ಸೇವೆಯ ವೆಚ್ಚ ತಗ್ಗಿಸಲು ಸಹಾಯ ಮಾಡುತ್ತದೆ ಎಂಬುದು ಈ ಕಾಯ್ದೆಯ ಅನುಷ್ಠಾನಕ್ಕೆ ಪೂರ್ವ ಮತ್ತು ನಂತರದ ದತ್ತಾಂಶಗಳು ಸಾಬೀತುಪಡಿಸಿವೆ.  ಕನಿಷ್ಠ 14 ದೇಶಗಳು (ಇಥಿಯೋಪಿಯಾ, ಗುವಾಮ್, ಹೊಂಡುರಾಸ್, ಜಪಾನ್, ಕುವೈತ್, ಮಂಗೋಲಿಯಾ, ಪಲಾವ್, ಫಿಲಿಪೈನ್ಸ್, ಸಮೋವಾ, ಸಿಂಗಾಪುರ್, ಶ್ರೀಲಂಕಾ, ಥೈಲ್ಯಾಂಡ್, ಉಗಾಂಡಾ ಮತ್ತು ಅಮೆರಿಕ) ತಂಬಾಕು ಉತ್ಪನ್ನಗಳ ಖರೀದಿಗೆ ಕನಿಷ್ಠ ವಯಸ್ಸನ್ನು 21 ವರ್ಷಗಳಿಗೆ ಹೆಚ್ಚಿಸಿವೆ. ಯುವಜನರಿಗೆ ಸುಲಭವಾಗಿ ಲಭ್ಯತೆ ಮತ್ತು ಕೈಗೆಟುಕುವಿಕೆಯನ್ನು ನಿಯಂತ್ರಿಸಲು ಕನಿಷ್ಠ 86 ದೇಶಗಳು ಸಿಂಗಲ್-ಸ್ಟಿಕ್ ಸಿಗರೇಟ್ ಮಾರಾಟವನ್ನು ನಿಷೇಧಿಸಿವೆ.

ಭಾರತವು ವಿಶ್ವದಲ್ಲೇ ಎರಡನೇ ಅತಿದೊಡ್ಡ  ವಿಶ್ವದಲ್ಲಿ ತಂಬಾಕು ಬಳಕೆದಾರರನ್ನು (268 ಮಿಲಿಯನ್) ಹೊಂದಿದೆ ಮತ್ತು ಈ ಪೈಕಿ 13 ಲಕ್ಷ ಜನರು ಪ್ರತಿ ವರ್ಷ ತಂಬಾಕು ಸಂಬಂಧಿತ ರೋಗಗಳಿಂದ ಸಾವನ್ನಪ್ಪುತ್ತಾರೆ. 10 ಲಕ್ಷ ಸಾವುಗಳು ಧೂಮಪಾನದಿಂದ,  200,000 ಕ್ಕಿಂತ ಹೆಚ್ಚು ಜನರು ಧೂಮಪಾನ ಮಾಡುವ ಸ್ಥಳದಲ್ಲಿದ್ದ ಪರಿಣಾಮದಿಂದ ಹಾಗೂ 35,000 ಕ್ಕೂ ಹೆಚ್ಚು ಜನರು ಹೊಗೆರಹಿತ ತಂಬಾಕು ಸೇವನೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಭಾರತದ ಒಟ್ಟು ಕ್ಯಾನ್ಸರ್‌ ಪ್ರಕರಣಗಳಲ್ಲಿ ಶೇ.27ರಷ್ಟು ಪ್ರಕರಣಗಳಿಗೆ ತಂಬಾಕು ಬಳಕೆ ಕಾರಣವಾಗಿರುತ್ತದೆ.. ತಂಬಾಕು ಬಳಕೆಗೆ ಕಾರಣವಾದ ರೋಗಗಳ ಒಟ್ಟು ಪ್ರತ್ಯಕ್ಷ ಮತ್ತು ಪರೋಕ್ಷ ವೆಚ್ಚ 182,000 ಕೋಟಿ ರೂ.ಗಳಿಷ್ಟಿದ್ದು, ಇದು ದೇಶದ ಜಿಡಿಪಿಯ ಸುಮಾರು ಶೇ. 1.8ರಷ್ಟಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಪ್ರಕಾರ ತಂಬಾಕು ಸೇವನೆ, ಧೂಮಪಾನ ಅಥವಾ ಚೂಯಿಂಗ್ ಎಲ್ಲ ರೀತಿಯಲ್ಲೂ ತೀವ್ರವಾದ ಕೋವಿಡ್-19 ಸಾವುನೋವುಗಳಿಗೆ ಕಾರಣವಾಗಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com