ರೈತರು, ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ: ಜನಸಾಮಾನ್ಯರಿಗೆ ಟ್ರಾಫಿಕ್ ಕಿರಿಕಿರಿ

ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯ ರೈತ ಸಂಘಟನೆಗಳು ಬೆಂಗಳೂರಿನ ಹೃದಯ ಭಾಗದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಮಧ್ಯಾಹ್ನದವರೆ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು. 
ಕಾವೇರಿ ಸರ್ಕಲ್ ಬಳಿಯ ವಾಹನ ದಟ್ಟಣೆಯ ಚಿತ್ರ
ಕಾವೇರಿ ಸರ್ಕಲ್ ಬಳಿಯ ವಾಹನ ದಟ್ಟಣೆಯ ಚಿತ್ರ

ಬೆಂಗಳೂರು: ಕಾಂಗ್ರೆಸ್ ಕಾರ್ಯಕರ್ತರು ಹಾಗೂ ರಾಜ್ಯ ರೈತ ಸಂಘಟನೆಗಳು ಬೆಂಗಳೂರಿನ ಹೃದಯ ಭಾಗದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ ನಡೆಸಿದ್ದರಿಂದ ಪ್ರಯಾಣಿಕರು ಮಧ್ಯಾಹ್ನದವರೆ ಟ್ರಾಫಿಕ್ ಕಿರಿಕಿರಿ ಅನುಭವಿಸುವಂತಾಯಿತು. 

ಫ್ರೀಡಂ ಪಾರ್ಕ್, ಆನಂದ್ ರಾವ್ ಸರ್ಕಲ್, ಮೆಜೆಸ್ಟಿಕ್,  ಸುತ್ತಮುತ್ತ ಅನೇಕ ಪ್ರಯಾಣಿಕರು ಗಂಟೆಗಂಟೆಲೇ ರಸ್ತೆಯಲ್ಲೆ ನಿಲ್ಲುವಂತಾಯಿತು. ಆದಾಗ್ಯೂ, ವಿಧಾನಸೌಧ ಸುತ್ತಮುತ್ತ ಸೆಕ್ಷನ್ 144 ಜಾರಿಯಿಂದ ಕೆ.ಆರ್. ಸರ್ಕಲ್ ಬಳಿ ಪ್ರತಿಭಟನಾ ನಿರತ ರೈತರನ್ನು ಪೊಲೀಸರು ತಡೆದರು.

ರಾಜ್ಯದ ವಿವಿಧೆಡೆಯಿಂದ ನಗರಕ್ಕೆ ಆಗಮಿಸಿದ ರೈತ ಸಂಘಟನೆಗಳ ಸದಸ್ಯರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ಪ್ರತಿಭಟನಾ ಜಾಥಾ ನಡೆಸಿ, ಕೇಂದ್ರದ ನೂತನ ಕೃಷಿ ಕಾನೂನುಗಳು ಮತ್ತು ಅನೇಕ ಸರ್ಕಾರಿ ವಲಯಗಳ ಖಾಸಗೀಕರಣ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. 

ರೈತ ಸಂಘಟನೆಗಳ ಪ್ರತಿಭಟನೆಯಿಂದಾಗಿ ಮೆಜೆಸ್ಟಿಕ್, ಆನಂದ್ ರಾವ್ ವೃತ್ತ, ಶೇಷಾದ್ರಿಪುರಂ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೈತರನ್ನು ಕೆಆರ್ ಸರ್ಕಲ್ ನಲ್ಲಿ ತಡೆಯುವುದಕ್ಕೆ ಪೊಲೀಸರ ವಿರುದ್ಧ ರೈತರು ವಿರೋಧ ವ್ಯಕ್ತಪಡಿಸಿದ್ದರಿಂದ ಈ ಸುತ್ತಮುತ್ತಲಿನ ಪ್ರದೇಶದಲ್ಲಿ ಕೆಲಕಾಲ ಪರಿಸ್ಥಿತಿ ಬಿಗಡಾಯಿಸಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಈ ಮಧ್ಯೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎತ್ತಿನಗಾಡಿಯಲ್ಲಿ ವಿಧಾನಸೌಧಕ್ಕೆ ತಲುಪಿದರೆ, ಎಸ್ ಟಿ ಸೋಮಶೇಖರ್ ಅರ್ಧ ಗಂಟೆಗಳ ಕಾಲ ಟ್ರಾಫಿಕ್ ನಲ್ಲಿ ಸಿಲುಕುವಂತಾಯಿತು. 

ಸೆಪ್ಟೆಂಬರ್ 27 ರಂದು ಭಾರತ್ ಬಂದ್ ಗೆ ಕರೆ ನೀಡಲಾಗಿದ್ದು, ರಾಜ್ಯದೆಲ್ಲೆಡೆ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತ ಕುಮಾರ್ ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com